Manipur Violence: ಮಣಿಪುರ ಜನಾಂಗೀಯ ಹಿಂಸಾಚಾರ; ಮನೆ ತೊರೆದ 50 ಸಾವಿರಕ್ಕೂ ಹೆಚ್ಚು ಜನ
ಮಣಿಪುರ ರಾಜ್ಯದಲ್ಲಿನ ಜನಾಂಗೀಯ ಸಂಘರ್ಷದಿಂದಾಗಿ 50,698 ಜನರು ತಮ್ಮ ಮನೆ ತೊರೆದಿದ್ದು, ಅವರಿಗೆ 349 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಮಣಿಪುರ ಸರ್ಕಾರ ತಿಳಿಸಿದೆ.
ಇಂಫಾಲ್: ಮಣಿಪುರ (Manipur) ರಾಜ್ಯದಲ್ಲಿನ ಜನಾಂಗೀಯ ಸಂಘರ್ಷದಿಂದಾಗಿ (Violence) 50,698 ಜನರು ತಮ್ಮ ಮನೆ ತೊರೆದಿದ್ದು, ಅವರಿಗೆ 349 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಮಣಿಪುರ ಸರ್ಕಾರ ತಿಳಿಸಿದೆ. ಈ ಕುರಿತು ಮಾಹಿತಿ ಹಂಚೋಂಡಿರುವ ಸಚಿವ ಡಾ.ಆರ್.ಕೆ.ರಂಜನ್ ಅವರು ರಾಜ್ಯದಲ್ಲಿ ಈಗಾಗಲೇ ಕೂಂಬಿಂಗ್ ಶುರು ಮಾಡಿದ್ದು, ಒಟ್ಟು 53 ಆಯುಧಗಳು, 39 ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡದಂತೆ ಆದೇಶ ಮಾಡಲಾಗಿದೆ. ರಾಜ್ಯದಲ್ಲಿರುವ ಒಟ್ಟು 242 ಬ್ಯಾಂಕ್ ಶಾಖೆಗಳಲ್ಲಿ ಈಗಾಗಲೇ 198 ಶಾಖೆಗಳು ಮರಳಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಬೆಲೆ ಏರಿಕೆ ಮಾಡದಂತೆ ಆದೇಶ
ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ರಾಜ್ಯದಲ್ಲಿ ಬೆಲೆ ನಿಯಂತ್ರಣ ವ್ಯವಸ್ಥೆ ಜಾರಿ ಮಾಡಲಾಗಿದೆ ಮಾಡಲಾಗಿದೆ. ಇದರ ಮೂಲಕ ರಾಷ್ಟ್ರೀಯ ಹೆದ್ದಾರಿ-37 ಮೂಲಕ ರಾಜ್ಯಕ್ಕೆ ಅಗತ್ಯ ವಸ್ತುಗಳನ್ನು ತರಲಾಗುತ್ತಿದೆ. 5,000 ಮೆಟ್ರಿಕ್ ಟನ್ ನಿರ್ಮಾಣ ಸಾಮಗ್ರಿಗಳು, ಇಂಧನ ಮತ್ತು ಅಗತ್ಯ ವಸ್ತುಗಳನ್ನು 2,376 ಟ್ರಕ್‌ಗಳಲ್ಲಿ ಮಣಿಪುರಕ್ಕೆ ತರಲಾಗಿದೆ.
ಅಧಿಕೃತ ವರದಿಯನ್ನು ಉಲ್ಲೇಖಿಸಿದ ಸಚಿವರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗಾಗಿ ತೆರೆಯಲಾದ ಪರಿಹಾರ ಶಿಬಿರಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಜಿಲ್ಲೆಗಳು ಮತ್ತು ಕ್ಲಸ್ಟರ್ ನೋಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿನ 242 ಬ್ಯಾಂಕ್ ಶಾಖೆಗಳಲ್ಲಿ 198 ಪುನರ್ ಕಾರ್ಯಾರಂಭ ಮಾಡಿವೆ. ಇನ್ನುಳಿದ ಬ್ಯಾಂಕುಗಳು ಸಹ ಶೀಘ್ರದಲ್ಲೇ ಕಾರ್ಯಾರಭ ಮಾಡುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ ತನಿಖೆಗೆ ಸಿಬಿಐ ವಿಶೇಷ ತಂಡ ರಚನೆ
ಇಂಟರ್ನೆಟ್ ನಿಷೇಧ ಇನ್ನೂ 5 ದಿನಗಳವರೆಗೆ ವಿಸ್ತರಣೆ
ಶನಿವಾರ ನಡೆದ ಹಿಂಸಾತ್ಮಕ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಇಂಟರ್ನೆಟ್ ನಿಷೇಧವನ್ನು ಇನ್ನೂ 5 ದಿನಗಳವರೆಗೆ ವಿಸ್ತರಿಸಿದೆ. ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಜೂನ್ 15ರ ಮಧ್ಯಾಹ್ನ 3 ಗಂಟೆಯವರೆಗೆ ಇಂಟರ್‌ನೆಟ್ ನಿಷೇಧ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಶಸ್ತ್ರಾಸ್ತ್ರಗಳನ್ನು ಮರಳಿ ನೀಡುವಂತೆ ಮನವಿ ಮಾಡಿದ್ದಾರೆ. ಮಣಿಪುರದಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸ್ ಠಾಣೆಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಒಟ್ಟು 990 ಶಸ್ತ್ರಾಸ್ತ್ರಗಳು ಮತ್ತು 13,526 ಮದ್ದು ಗುಂಡುಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ.
ರಾಜ್ಯದಲ್ಲಿ ಹತ್ತು ಸಾವಿರ ಸೈನಿಕರನ್ನು ನಿಯೋಜನೆ
ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಸುಮಾರು 10,000 ಯೋಧರನ್ನು ನಿಯೋಜಿಸಲಾಗಿದೆ.
ಏತನ್ಮಧ್ಯೆ, ಇಂಫಾಲ್ ಪೂರ್ವದ ಬಿಜೆಪಿ ಶಾಸಕರೊಬ್ಬರು ತಮ್ಮ ಮನೆ ಮುಂದೆ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಡಬ್ಬವನ್ನು ಇರಿಸಿದ್ದಾರೆ. ರೈಫಲ್‌ಗಳು ಸೇರಿ ಇದುವರೆಗೂ 130 ಶಸ್ತ್ರಾಸ್ತ್ರಗಳನ್ನು ಈ ಡಬ್ಬದಲ್ಲಿ ಇಟ್ಟುಹೋಗಲಾಗಿದೆ. ಇನ್ನೊಬ್ಬ ಸಚಿವರು ಕೂಡ ಇದೇ ರೀತಿ ಮಾಡಿದ್ದು, ತಮ್ಮ ಮನೆಯ ಮುಂದೆ ಪೋಸ್ಟರ್‌ವೊಂದನ್ನು ಹಾಕಿಕೊಂಡಿದ್ದಾರೆ. ನೀವು ಕದ್ದಿರುವ ಶಸ್ತ್ರಾಸ್ತ್ರಗಳನ್ನು ಇಲ್ಲಿ ಬಿಡಿ’ ಎಂದು ಇಂಗ್ಲಿಷ್ ಮತ್ತು ಮೈತೇಯಿ ಭಾಷೆಯಲ್ಲಿ ಬರೆದು ಪೋಸ್ಟರ್ ಅಂಟಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ