ಇಂಫಾಲ್ ಜುಲೈ 21: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ (Manipur Violence), ಬಿಲ್ಕಿಸ್ ಬಾನೋ ಪ್ರಕರಣ ಮತ್ತು ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಶುಕ್ರವಾರ ಬಿಜೆಪಿಯನ್ನು (BJP) ಟೀಕಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) , ಬಿಜೆಪಿಯ ‘ಬೇಟಿ ಬಚಾವೋ’ ಘೋಷಣೆ ಈಗ ‘ಬೇಟಿ ಜಲಾವೋ’ ಆಗಿ ಬದಲಾಗಿದೆ ಎಂದು ಹೇಳಿದ್ದಾರೆ.“ನೀವು (ಬಿಜೆಪಿ) ‘ಬೇಟಿ ಬಚಾವೋ’ ಘೋಷಣೆಯನ್ನು ನೀಡಿದ್ದೀರಿ, ಈಗ ನಿಮ್ಮ ಘೋಷಣೆ ಎಲ್ಲಿದೆ? ಮಣಿಪುರದ ಜನರೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಇಂದು ಮಣಿಪುರ ಹೊತ್ತಿ ಉರಿಯುತ್ತಿದೆ, ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ (ಬ್ರಿಜ್ ಭೂಷಣ್ ಸಿಂಗ್)ಗೂ ಜಾಮೀನು ಮಂಜೂರಾಗಿದೆ. ಮುಂಬರುವ ಚುನಾವಣೆಯಲ್ಲಿ ದೇಶದ ಮಹಿಳೆಯರು ನಿಮ್ಮನ್ನು ದೇಶದ ರಾಜಕೀಯದಿಂದ ಹೊರಹಾಕಲಿದ್ದಾರೆ.ಬಿಜೆಪಿಯ ‘ಬೇಟಿ ಬಚಾವೋ’ ಈಗ ‘ಬೇಟಿ ಜಲಾವೋ’ ಆಗಿ ಬದಲಾಗಿದೆ.
ತೃಣಮೂಲ ಕಾಂಗ್ರೆಸ್‌ಗೆ ಯಾವುದೇ ಕುರ್ಚಿ ಬೇಕಾಗಿಲ್ಲ, ಆದರೆ ಈ ಬಿಜೆಪಿ ಆಡಳಿತ ಹೋಗಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ ಮಮತಾ. ನಾವು ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ಮೈತ್ರಿ I.N.D.I.A. ಬ್ಯಾನರ್ ಅಡಿಯಲ್ಲಿ ಎಲ್ಲಾ ಪ್ರತಿಭಟನೆಗಳನ್ನು ಆಯೋಜಿಸುತ್ತೇವೆ ಎಂದು ಬಂಗಾಳ ಮುಖ್ಯಮಂತ್ರಿ ಸಭೆಗೆ ತಿಳಿಸಿದರು.
ಎಂಜಿಎನ್‌ಆರ್‌ಇಜಿಎ ಮತ್ತು ಇತರ ಯೋಜನೆಗಳ ಅಡಿಯಲ್ಲಿ ಬಂಗಾಳದ ಹಣವನ್ನು ತಡೆಯುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗಾಂಧಿ ಜಯಂತಿಯಂದು (ಅಕ್ಟೋಬರ್ 2) ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿಯನ್ನು ಕಿತ್ತೊಗೆಯಲಾಗುವುದು. ಹೊಸದಾಗಿ ರೂಪುಗೊಂಡ ವಿರೋಧ ಪಕ್ಷದ ಮೈತ್ರಿ I.N.D.I.A – 2024 ರಲ್ಲಿ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂಬ ಘೋಷಣೆಯೊಂದಿಗೆ ಇಡೀ ದೇಶವು ಪ್ರತಿಧ್ವನಿಸುತ್ತಿದೆ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಸೇಡಿನ ರಾಜಕೀಯದಿಂದಾಗಿ ಬಂಗಾಳಕ್ಕೆ ಹಣವನ್ನು ನಿಲ್ಲಿಸಿದೆ. ನಾನು ಮೊದಲೇ ಹೇಳಿದಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಬಂಗಾಳದ ಹಣವನ್ನು ತಡೆಹಿಡಿಯುವುದರ ವಿರುದ್ಧ ನಾವು ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತೇವೆ. ಅಕ್ಟೋಬರ್ 2 ರಂದು ನಾವು ಕೃಷಿ ಭವನದ ಹೊರಗೆ ಪ್ರತಿಭಟನೆಯನ್ನು ಆಯೋಜಿಸುತ್ತೇವೆ ಎಂದು ಹುತಾತ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅಭಿಷೇಕ್ ಹೇಳಿದ್ದು ಈ ಕರೆಯನ್ನು ಮಮತಾ ಬ್ಯಾನರ್ಜಿ ಕೂಡ ಬೆಂಬಲಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ