Manmohan Singh: ಮನಮೋಹನ್ ಸಿಂಗ್ ಕುಟುಂಬದಲ್ಲಿ ಯಾರ್ಯಾರಿದ್ದಾರೆ, ವೃತ್ತಿ ಏನು? ಇಲ್ಲಿದೆ ಮಾಹಿತಿ
ದೇಶದ ಆರ್ಥಿಕ ಸುಧಾರಣೆಗಳ ಪಿತಾಮಹ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ನಿಧನರಾಗಿದ್ದಾರೆ.ಮನಮೋಹನ್ ಸಿಂಗ್ ಅವರ ಹೆಣ್ಣುಮಕ್ಕಳು ಶಿಕ್ಷಣ ಮತ್ತು ಬರವಣಿಗೆಯ ಜಗತ್ತಿನಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಮನಮೋಹನ್ ಸಿಂಗ್ ಅವರಿಗೆ ಉಪಿಂದರ್ ಸಿಂಗ್, ಅಮೃತ್ ಸಿಂಗ್ ಮತ್ತು ದಮನ್ ಸಿಂಗ್ ಎಂಬ ಮೂವರು ಪುತ್ರಿಯರಿದ್ದಾರೆ ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು 26 ಡಿಸೆಂಬರ್ 2024 ರಂದು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಗೆ ದಾಖಲಾಗಿದ್ದ ಅವರು ವಯೋಸಹಜ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆದರು. ಮನಮೋಹನ್ ಸಿಂಗ್ ಕುಟುಂಬದಲ್ಲಿ ಯಾರ್ಯಾರಿದ್ದಾರೆ, ಸದಸ್ಯರ ಕುರಿತು ಮಾಹಿತಿ ಇಲ್ಲಿದೆ.
ಮನಮೋಹನ್ ಸಿಂಗ್ ಬಾಲ್ಯ 26 ಸೆಪ್ಟೆಂಬರ್ 1932 ರಂದು ಗಾಹ್ (ಈಗ ಪಾಕಿಸ್ತಾನದಲ್ಲಿದೆ ) ನಲ್ಲಿ ಜನಿಸಿದ ಡಾ. ಮನಮೋಹನ್ ಸಿಂಗ್ ಅವರ ಬಾಲ್ಯವು ಸವಾಲುಗಳಿಂದ ತುಂಬಿತ್ತು. ಅವರ ತಾಯಿ ಚಿಕ್ಕ ವಯಸ್ಸಿನಲ್ಲೇ ನಿಧನರಾದರು, ನಂತರ ಅವರು ತಮ್ಮ ಅಜ್ಜಿಯೊಂದಿಗೆ ಬೆಳೆದರು. ಬಾಲ್ಯದಿಂದಲೂ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದ ಡಾ.ಸಿಂಗ್ ಪಂಜಾಬ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಶಿಕ್ಷಣ ಪಡೆದರು .ಇದರ ನಂತರ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಡಿ.ಫಿಲ್ ಪದವಿ ಪಡೆದರು.
ಕೌಟುಂಬಿಕ ಜೀವನ 1958 ರಲ್ಲಿ, ಡಾ. ಮನಮೋಹನ್ ಸಿಂಗ್ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಗುರುಶರಣ್ ಕೌರ್ ಇತಿಹಾಸ ಪ್ರಾಧ್ಯಾಪಕಿ ಮತ್ತು ಲೇಖಕಿ. ದಂಪತಿ ತಮ್ಮ ಸರಳತೆ ಮತ್ತು ಪರಸ್ಪರ ತಿಳಿವಳಿಕೆಗೆ ಹೆಸರುವಾಸಿಯಾಗಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.
ಉಪಿಂದರ್ ಸಿಂಗ್ ಹಿರಿಯ ಮಗಳು ಉಪಿಂದರ್ ಸಿಂಗ್ (65) ಪ್ರಸಿದ್ಧ ಶಿಕ್ಷಣತಜ್ಞ ಮತ್ತು ಇತಿಹಾಸಕಾರ. ಅವರ ಪತಿ ವಿಜಯ್ ತಂಖಾ ಅವರು ಶಿಕ್ಷಣತಜ್ಞ ಮತ್ತು ಬರಹಗಾರರಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಉಪಿಂದರ್ ಸಿಂಗ್ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಮಾಂಟ್ರಿಯಲ್‌ನ ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಪ್ರಸ್ತುತ ಅವರು ಅಶೋಕ ವಿಶ್ವವಿದ್ಯಾನಿಲಯದಲ್ಲಿ ಫ್ಯಾಕಲ್ಟಿ ಡೀನ್ ಆಗಿದ್ದಾರೆ.
ಮತ್ತಷ್ಟು ಓದಿ: Manmohan Singh: 33 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮನಮೋಹನ್ ಸಿಂಗ್
ಅವರು ಪ್ರಾಚೀನ ಭಾರತೀಯ ಇತಿಹಾಸದ ಬಗ್ಗೆ ವ್ಯಾಪಕವಾದ ಸಂಶೋಧನೆ ಮಾಡಿದರು ಮತ್ತು ಪ್ರಾಚೀನ ಭಾರತ್ ಮೇ ರಾಜನೀತಿಕ್ ಹಿಂಸಾ( ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ) ನಂತಹ ಜನಪ್ರಿಯ ಪುಸ್ತಕಗಳನ್ನು ಬರೆದರು. 2009 ರಲ್ಲಿ ಅವರಿಗೆ ಸಮಾಜ ವಿಜ್ಞಾನದಲ್ಲಿ ಇನ್ಫೋಸಿಸ್ ಪ್ರಶಸ್ತಿಯನ್ನು ನೀಡಲಾಯಿತು. ಇದಲ್ಲದೆ, ಅವರು ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್‌ನಂತಹ ಸಂಸ್ಥೆಗಳಿಂದ ಪ್ರತಿಷ್ಠಿತ ಫೆಲೋಶಿಪ್‌ಗಳನ್ನು ಪಡೆದಿದ್ದಾರೆ.
ದಮನ್ ಸಿಂಗ್ ಎರಡನೇ ಮಗಳು ದಮನ್ ಸಿಂಗ್ (61) ಬರಹಗಾರ್ತಿ ಮತ್ತು ಕಥೆಗಾರ್ತಿ. ಅವರು ತಮ್ಮ ಹೆತ್ತವರ ಜೀವನವನ್ನು ಆಧರಿಸಿ ಸ್ಟ್ರಿಕ್ಟ್ಲೀ ಪರ್ಸನಲ್: ಮನಮೋಹನ್ ಔರ್ ಗುರುಶರಣ್ ಪುಸ್ತಕವನ್ನು ಬರೆದರು, ಅವರ ಇತರ ಪುಸ್ತಕಗಳಾದ ದಿ ಸೇಕ್ರೆಡ್ ಗ್ರೋವ್ ಮತ್ತು ನೈನ್ ಬೈ ನೈನ್ ಸಹ ಸಮಾಜ ಮತ್ತು ಪರಿಸರದ ಮೇಲೆ ಕೇಂದ್ರೀಕರಿಸುತ್ತದೆ. ಅವರ ಪತಿ ಅಶೋಕ್ ಪಟ್ನಾಯಕ್ ಅವರು ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರಿಗೆ ಒಬ್ಬ ಮಗನೂ ಇದ್ದಾನೆ.
ಅಮೃತ್ ಸಿಂಗ್
ಕಿರಿಯ ಮಗಳು ಅಮೃತ್ ಸಿಂಗ್ (58) ಪ್ರಸಿದ್ಧ ಮಾನವ ಹಕ್ಕುಗಳ ವಕೀಲೆ. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಯೇಲ್ ಕಾನೂನು ಶಾಲೆಯಲ್ಲಿ ಶಿಕ್ಷಣ ಪಡೆದರು. ಪ್ರಸ್ತುತ ಅವರು ಕಾನೂನು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಗಂಡನ ಬಗ್ಗೆ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ.
ಮತ್ತಷ್ಟು ಓದಿ: Manmohan Singh: ಎಂದೂ ಈಡೇರದೇ ಉಳಿದ ಮನಮೋಹನ್ ಸಿಂಗ್ರ ಕನಸೇನು?
ರಾಜಕೀಯ ಮತ್ತು ಆರ್ಥಿಕ ಕೊಡುಗೆ ಡಾ. ಸಿಂಗ್ ಅವರ ಸಾರ್ವಜನಿಕ ಜೀವನವು ಅವರ ಶ್ರೇಷ್ಠತೆ ಮತ್ತು ಪ್ರಾಮಾಣಿಕತೆಯ ಪ್ರತಿಬಿಂಬವಾಗಿತ್ತು. ಭಾರತದ 13ನೇ ಪ್ರಧಾನಿಯಾಗಿ 2004ರಿಂದ 2014ರವರೆಗೆ ದೇಶವನ್ನು ಮುನ್ನಡೆಸಿದ್ದರು. ಅವರನ್ನು ಆರ್ಥಿಕ ಸುಧಾರಣೆಗಳ ಪಿತಾಮಹ ಎಂದು ಕರೆಯಲಾಗುತ್ತದೆ, ಇದು 1991 ರಲ್ಲಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರ ತಂದಿತು. ಇದಕ್ಕೂ ಮೊದಲು, ಅವರು ಮುಖ್ಯ ಆರ್ಥಿಕ ಸಲಹೆಗಾರ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಂತಹ ಅನೇಕ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು. ಮೂವರು ಹೆಣ್ಣುಮಕ್ಕಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ತಂದೆಯ ಪರಂಪರೆಯನ್ನು ಮುನ್ನಡೆಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ