ಪಿಎಂ ಮನ್ ಕೀ ಬಾತ್​ನಲ್ಲಿ ಹೊಯ್ಸಳರ ದೇವಸ್ಥಾನ, ಜಿ20, ಚಂದ್ರಯಾನ ಪ್ರಸ್ತಾಪಿಸಿದ ನರೇಂದ್ರ ಮೋದಿ

|

Updated on: Sep 24, 2023 | 11:51 AM

PM Mann Ki Baat 105th Episode: ಕರ್ನಾಟಕದ ಹೆಮ್ಮೆಯ ರಾಜಮನೆತನ ಹೊಯ್ಸಳರು ಹಲವು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ಸುಂದರ, ಅತಿಸುಂದರ. ಈ ಪೈಕಿ ಹಾಸನದ ಬೇಲೂರು ಮತ್ತು ಹಳೇಬೀಡಿನಲ್ಲಿರುವ ಚೆನ್ನಕೇಶವ ದೇವಸ್ಥಾನ, ಹೊಯ್ಸಲೇಶ್ವರ ದೇವಸ್ಥಾನ ಮತ್ತು ಕೇಶವ ದೇವಸ್ಥಾನಗಳನ್ನು ಯುನೆಸ್ಕೋ ಸಂಸ್ಥೆ ತನ್ನ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿತ್ತು. ಈ ವಿಚಾರವನ್ನು ಇಂದು ಪಿಎಂ ನರೇಂದ್ರ ಮೋದಿ ತಮ್ಮ 105ನೇ ಮನ್ ಕೀ ಬಾತ್ ಸಂಚಿಕೆಯಲ್ಲಿ ಪ್ರಸ್ತಾಪಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪಿಎಂ ಮನ್ ಕೀ ಬಾತ್​ನಲ್ಲಿ ಹೊಯ್ಸಳರ ದೇವಸ್ಥಾನ, ಜಿ20, ಚಂದ್ರಯಾನ ಪ್ರಸ್ತಾಪಿಸಿದ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ, ಸೆಪ್ಟೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 105ನೇ ಸಂಚಿಕೆಯ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ (Mann Ki Baat Episode 105) ಚಂದ್ರಯಾನ ಯೋಜನೆ, ಜಿ20 ಶೃಂಗಸಭೆ ಆಯೋಜನೆಯ ಯಶಸ್ಸನ್ನು ಮೆಲುಕು ಹಾಕಿದ್ದಾರೆ. ಹಾಗೆಯೇ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಹೊಯ್ಸಳರಿಂದ ನಿರ್ಮಿತವಾದ ದೇವಸ್ಥಾನಗಳು (Temples built by Hoysalas) ಒಳಗೊಂಡಿರುವ ವಿಚಾರವನ್ನೂ ಪ್ರಸ್ತಾಪಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ್ ರಾಜ್ಯದ ನೈನಿತಾಲ್ ಜಿಲ್ಲೆಯಲ್ಲಿ ಯುವಸಮುದಾಯದವರು ಸೇರಿ ಮಕ್ಕಳಿಗಾಗಿ ‘ಘೋಡಾ ಲೈಬ್ರರಿ’ (ghoda library) ಸ್ಥಾಪಿಸಿರುವ ವಿಚಾರವನ್ನು ಪಿಎಂ ಪ್ರಸ್ತಾಪಿಸಿದ್ದಾರೆ. ಭಾರತ, ಮಧ್ಯಪ್ರಾಚ್ಯ ಮತ್ತು ಯೋರೋಪ್ ನಡುವಿನ ಆರ್ಥಿಕ ಕಾರಿಡಾರ್ ಯೋಜನೆ ಮುಂಬರುವ ದಿನಗಳಲ್ಲಿ ಜಾಗತಿಕ ವ್ಯಾಪಾರದ ರಹದಾರಿ ಆಗಲಿದೆ ಎಂಬ ಸಂಗತಿಯನ್ನು ಪಿಎಂ ತಮ್ಮ ಬಾನುಲಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಹೊಯ್ಸಳರ ದೇವಸ್ಥಾನಗಳು

ಕರ್ನಾಟಕದ ಹೆಮ್ಮೆಯ ರಾಜಮನೆತನ ಹೊಯ್ಸಳರು ಹಲವು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ಸುಂದರ, ಅತಿಸುಂದರ. ಈ ಪೈಕಿ ಹಾಸನದ ಬೇಲೂರು ಮತ್ತು ಹಳೇಬೀಡಿನಲ್ಲಿರುವ ಚೆನ್ನಕೇಶವ ದೇವಸ್ಥಾನ, ಹೊಯ್ಸಲೇಶ್ವರ ದೇವಸ್ಥಾನ ಮತ್ತು ಕೇಶವ ದೇವಸ್ಥಾನಗಳನ್ನು ಯುನೆಸ್ಕೋ ಸಂಸ್ಥೆ ತನ್ನ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿತ್ತು. ಈ ವಿಚಾರವನ್ನು ಇಂದು ಪಿಎಂ ನರೇಂದ್ರ ಮೋದಿ ತಮ್ಮ 105ನೇ ಮನ್ ಕೀ ಬಾತ್ ಸಂಚಿಕೆಯಲ್ಲಿ ಪ್ರಸ್ತಾಪಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ರವೀಂದ್ರನಾಥ್ ಠಾಗೋರ್ ಅವರ ಶಾಂತಿನಿಕೇತನ್ ಅನ್ನೂ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿರುವುದನ್ನು ಪಿಎಂ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಜಿ20ಗೆ ಹೇಗೆ ನಡೆದಿತ್ತು ತಯಾರಿ? ಎಡಬದಿಯ ಸ್ಟೇರಿಂಗ್​​ನಲ್ಲಿ ಚಾಲನೆ ಬಗ್ಗೆ ಮೋದಿ ಜತೆ ಅನುಭವ ಹಂಚಿಕೊಂಡ ಸಿಆರ್​​ಪಿಎಫ್ ಚಾಲಕ

ಜಿ20 ಶೃಂಗಸಭೆ ಬಗ್ಗೆ ಪಿಎಂ ಮಾತು

ಮೂರನೇ ಚಂದ್ರಯಾನ ಯೋಜನೆ ಯಶಸ್ಸಿನ ಬಳಿಕ ಜಿ20 ಶೃಂಗಸಭೆ ಆಯೋಜನೆ ಪ್ರತಿಯೊಬ್ಬ ಭಾರತೀಯನ ಖುಷಿಯನ್ನು ಇಮ್ಮಡಿಸಿಗೊಳಿಸಿದೆ. ಶೃಂಗಸಭೆ ನಡೆದ ಭಾರತ್ ಮಂಡಪಂ ಸ್ಥಳವೇ ಸೆಲಬ್ರಿಟಿಯಾಗಿಬಿಟ್ಟಿತ್ತು. ಜನರು ಹೆಮ್ಮೆಯಿಂದ ಇಲ್ಲಿ ನಿಂತು ಸೆಲ್ಫಿ ಪಡೆಯುತ್ತಿದ್ದರು ಎಂದು ನರೇಂದ್ರ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಈ ಜಿ20 ಶೃಂಗಸಭೆಯ ಯಶಸ್ಸಿನಲ್ಲಿ ಈ ದೇಶದ ಯುವಕರ ಪಾತ್ರ ಬಹಳ ಮಹತ್ತರದಿತ್ತು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಚಂದ್ರಯಾನ ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲದ ಮೇಲೆ ಇಳಿಯುತ್ತಿರುವ ಲೈವ್ ಪ್ರಸಾರವನ್ನು 80 ಲಕ್ಷ ಮಂದಿ ನೋಡಿರುವ ವಿಚಾರವನ್ನು ಪಿಎಂ ಮೋದಿ ಪ್ರಸ್ತಾಪಿಸಿದ್ದಾರೆ.

105ನೇ ಮನ್ ಕೀ ಬಾತ್ ಎಪಿಸೋಡ್

ಮನ್ ಕೀ ಬಾತ್ ಎಂಬುದು ಪ್ರಧಾನಿಗಳು ಮೊದಲೇ ರೆಕಾರ್ಡ್ ಮಾಡಿದ ಭಾಷಣದ ರೇಡಿಯೋ ಪ್ರಸಾರವಾಗಿರುತ್ತದೆ. ಇದು ತಿಂಗಳಿಗೊಮ್ಮೆ ನಡೆಯುವಂಥದ್ದು. 2014ರಲ್ಲೇ ಮೊದಲ ಸಂಚಿಕೆ ಪ್ರಸಾರವಾಗಿತ್ತು. 2023ರ ಏಪ್ರಿಲ್​ನಲ್ಲಿ 100ನೇ ಸಂಚಿಕೆ ಪ್ರಸಾರವಾಗಿತ್ತು. ಅದು ಅಮೆರಿಕದ ನ್ಯೂಯಾರ್ಕ್​ನ ವಿಶ್ವಸಂಸ್ಥೆ ಮುಖ್ಯಕಚೇರಿಯಿಂದ ಆ ಎಪಿಸೋಡ್ ಪ್ರಸಾರವಾಗಿದ್ದು ವಿಶೇಷ.

ಇದನ್ನೂ ಓದಿ: ಭಾಷಾ ಸಂವಹನಕ್ಕೆ G20 ಆ್ಯಪ್; ಟರ್ಕಿಯ ಪ್ರಥಮ ಮಹಿಳೆ ಜತೆ ಕೆಲಸ ಮಾಡಿದ ದೆಹಲಿ ಎಸ್ಐ ಅನುಭವದ ಮಾತು

ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ವಿದ್ಯಮಾನಗಳು ಮತ್ತು ಸಾಧಕರ ಬಗ್ಗೆ ಪ್ರಸ್ತಾಪಿಸುತ್ತಾರೆ. ಕರ್ನಾಟಕದ ಹಲವು ವಿಶೇಷ ಸಂಗತಿಗಳನ್ನೂ ಅವರು ಪ್ರಸ್ತಾಪಿಸಿದ್ದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Sun, 24 September 23