ಜಿ20ಗೆ ಹೇಗೆ ನಡೆದಿತ್ತು ತಯಾರಿ? ಎಡಬದಿಯ ಸ್ಟೇರಿಂಗ್ನಲ್ಲಿ ಚಾಲನೆ ಬಗ್ಗೆ ಮೋದಿ ಜತೆ ಅನುಭವ ಹಂಚಿಕೊಂಡ ಸಿಆರ್ಪಿಎಫ್ ಚಾಲಕ
G20 Summit; ಎಡಬದಿಯಲ್ಲಿ ಸ್ಟೇರಿಂಗ್ ಇರುವ ವಾಹನಗಳ ಚಾಲನೆ ಬಗ್ಗೆ ನಮಗೆ ತರಬೇತಿ ನೀಡಿದರು. ಜಿ20 ಶೃಂಗಸಭೆ ಸಂದರ್ಭ ನನಗೆ ಮೆಕ್ಸಿಕೊದ ಹಣಕಾಸು ಸಚಿವರ ವಾಹನ ಚಾಲನೆ ಮಾಡುವ ಅವಕಾಶ ಸಿಕ್ಕಿತು. ಅವರ ಜತೆ ಮೂರು ದಿನ ಕರ್ತವ್ಯ ನಿರ್ವಹಿಸಿದೆ. ಆ ಅನುಭವ ಬಹಳ ಖುಷಿ ನೀಡಿತು ಎಂದು ಅಕ್ಷರ್ ಸಿಂಗ್ ಹೇಳಿದರು.
ನವದೆಹಲಿ, ಸೆಪ್ಟೆಂಬರ್ 23: ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ಜರುಗಿದ ಜಿ 20 ಶೃಂಗಸಭೆಯ (G20 Summit) ಯಶಸ್ಸಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂಬ ಬಗ್ಗೆ ವಿವಿಧ ಇಲಾಖೆಗಳ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿ (Narendra Modi) ಜತೆ ಅನುಭವ ಹಂಚಿಕೊಂಡರು. ಶೃಂಗಸಭೆಯ ಯಶಸ್ಸಿಗಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿ ಜತೆ ಮೋದಿ ಅವರು ಶುಕ್ರವಾರ ರಾತ್ರಿ ಸಂವಾದ ನಡೆಸಿದ್ದರು. ಇದೇ ವೇಳೆ, ಶೃಂಗಸಭೆಗೆ ಆಗಮಿಸಿದ್ದ ಗಣ್ಯರ ಭದ್ರತೆ ಹಾಗೂ ಸಂಚಾರದ ವ್ಯವಸ್ಥೆಗೆ ಮಾಡಿಕೊಂಡಿದ್ದ ಸಿದ್ಧತೆ, ಪಡೆದಿದ್ದ ತರಬೇತಿ ಹಾಗೂ ಎಡಬದಿಯ ಸ್ಟೇರಿಂಗ್ನಲ್ಲಿ ಚಾಲನೆ ಮಾಡಿದ ಬಗ್ಗೆ ಸಿಆರ್ಪಿಎಫ್ ಕಾನ್ಸ್ಟೇಬಲ್ ಡ್ರೈವರ್ ಅಕ್ಷರ್ ಸಿಂಗ್ ಅವರು ಮೋದಿ ಜತೆ ಅನುಭವ ಹಂಚಿಕೊಂಡರು.
‘ನಾನು ಸಿಆರ್ಪಿಎಫ್ನ ಕಾನ್ಸ್ಟೇಬಲ್ ಡ್ರೈವರ್ ಅಕ್ಷರ್ ಸಿಂಗ್. ಹಿಮಾಚಲ ಪ್ರದೇಶದಲ್ಲಿ ವಾಸವಿದ್ದೇನೆ. ಜಿ20 ಶೃಂಗಸಭೆಗೆ ಹಲವಾರು ದೇಶಗಳ ಮುಖ್ಯಸ್ಥರು ಬಂದಿದ್ದರು. ಅವರ ಭದ್ರತೆ ಹಾಗೂ ಅವರನ್ನು ಸುರಕ್ಷಿತವಾಗಿ ನಿಗದಿತ ಜಾಗಕ್ಕೆ ಕರೆದೊಯ್ಯುವ ಜವಾಬ್ದಾರಿ ನಮ್ಮ ಸಿಆರ್ಪಿಎಫ್ ಸಿಬ್ಬಂದಿಗೆ ವಹಿಸಲಾಗಿತ್ತು. ಇದಕ್ಕಾಗಿ ಗ್ರೆಟರ್ ನೋಯ್ಡಾದಲ್ಲಿ ನಮಗೆ ಎರಡು ತಿಂಗಳ ವಿಶೇಷ ತರಬೇತಿ ನೀಡಲಾಗಿತ್ತು. ಆ ಸಂದರ್ಭ, ಎಡಬದಿಯಲ್ಲಿ ಸ್ಟೇರಿಂಗ್ ಇರುವ ವಾಹನಗಳ ಚಾಲನೆ ಬಗ್ಗೆ ನಮಗೆ ತರಬೇತಿ ನೀಡಿದರು. ಜಿ20 ಶೃಂಗಸಭೆ ಸಂದರ್ಭ ನನಗೆ ಮೆಕ್ಸಿಕೊದ ಹಣಕಾಸು ಸಚಿವರ ವಾಹನ ಚಾಲನೆ ಮಾಡುವ ಅವಕಾಶ ಸಿಕ್ಕಿತು. ಅವರ ಜತೆ ಮೂರು ದಿನ ಕರ್ತವ್ಯ ನಿರ್ವಹಿಸಿದೆ. ಆ ಅನುಭವ ಬಹಳ ಖುಷಿ ನೀಡಿತು’ ಎಂದು ಅಕ್ಷರ್ ಸಿಂಗ್ ಹೇಳಿದರು.
ಇದನ್ನೂ ಓದಿ: ಜಿ 20 ಶೃಂಗಸಭೆ: ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ
‘ಇಷ್ಟು ದೊಡ್ಡ ಕಾರ್ಯಕ್ರಮ ಮಾಡುವಾಗ ಎಡ ಬದಿಯಲ್ಲಿ ಸ್ಟೇರಿಂಗ್ ಇರುವ ವಾಹನವನ್ನೂ ಚಾಲನೆ ಮಾಡಬೇಕಾಗಿ ಬರುತ್ತದೆ ಎಂಬುದು ನಮ್ಮ ಅರಿವಿಗೆ ಬಂತು ನೋಡಿ. ಸರಿಯಾಗಿ ಯೋಜನೆ ರೂಪಿಸಿಕೊಂಡರೆ, ಅದನ್ನು ಹೇಗೆ ನಿರ್ವಹಿಸವಬೇಕು ಎಂಬುದು ತಿಳಿಯುತ್ತದೆ’ ಎಂದು ಮೋದಿ ನಸುನಗುತ್ತಾ ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ, ತಮ್ಮ ಅನುಭವಗಳು ಮತ್ತು ಕಲಿಕೆಗಳನ್ನು ದಾಖಲಿಸುವಂತೆ ಸಿಬ್ಬಂದಿಗೆ ಮೋದಿ ಸಲಹೆ ನೀಡಿದ್ದಾರೆ. ಹೀಗೆ ಮಾಡುವುದರಿಂದ, ಹೀಗೆ ಸಿದ್ಧಪಡಿಸಿದ ದಾಖಲೆಗಳು ಭವಿಷ್ಯದ ಕಾರ್ಯಕ್ರಮಗಳಿಗೆ ಉಪಯುಕ್ತ ಮಾರ್ಗಸೂಚಿಗಳನ್ನು ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ