ಮುಂಬೈ, ನವೆಂಬರ್ 8: ಮರಾಠಾ ಮೀಸಲಾತಿ (Maratha reservation) ವಿಚಾರವಾಗಿ ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ (Maharashtra Cabinet Meeting) ಬುಧವಾರ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಜತೆಗೆ, ಸಚಿವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನೂ ನೀಡಲಾಯಿತು. ಮೀಸಲಾತಿ ವಿಚಾರವಾಗಿ ಸಚಿವರ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಲಿಸಿದ್ದಲ್ಲದೆ, ಸಚಿವರಿಗೆ ಖಡಕ್ ಸೂಚನೆಯನ್ನೂ ನೀಡಿದರು.
ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಛಗನ್ ಭುಜಬಲ್ ಅವರು ಮರಾಠರಿಗೆ ಕುಣಬಿ ಮೀಸಲಾತಿ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಮರಾಠ ನಾಯಕ ಮನೋಜ್ ಜಾರಂಗೆಯವರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಸರ್ಕಾರದ ಪ್ರಯತ್ನಗಳನ್ನು ಛಗನ್ ಭುಜಬಲ್ ಟೀಕಿಸಿದರು. ಅವರ ಟೀಕೆಗೆ ರಾಜ್ಯ ಅಬಕಾರಿ ಸಚಿವ ಶಂಭುರಾಜ್ ದೇಸಾಯಿ ಪ್ರತಿಕ್ರಿಯಿಸಿದ್ದಾರೆ. ಆ ಬಳಿಕ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಅವರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಛಗನ್ ಭುಜಬಲ್ ಅವರು ಸಂಪುಟ ಸಭೆಯಲ್ಲಿ ಮರಾಠ ಮೀಸಲಾತಿ ಕುರಿತು ತಮ್ಮ ನಿಲುವನ್ನು ಮಂಡಿಸಿದರು. ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಿ, ಆದರೆ ಪ್ರತ್ಯೇಕ ಮೀಸಲಾತಿ ನೀಡಿ. ಒಬಿಸಿಗಳ ಪಾಲಿನಲ್ಲಿ ಅವರಿಗೆ ಮೀಸಲಾತಿ ನೀಡಬಾರದು ಎಂದು ಛಗನ್ ಭುಜಬಲ್ ದೃಢ ನಿಲುವು ತಳೆದರು. ನಂತರ ಈ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಈ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರು ಸಮನ್ವಯ ನಿಲುವು ತಳೆಯುವುದು ಅಗತ್ಯ ಎಂದು ಒಮ್ಮತಕ್ಕೆ ಬರಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.
ಮೂಲಗಳ ಪ್ರಕಾರ, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮರಾಠಾ ಮೀಸಲಾತಿ ಕುರಿತು ವಿಸ್ತೃತ ಚರ್ಚೆ ನಡೆದಿದೆ. ಈ ಕುರಿತು ಎಲ್ಲ ಸಚಿವರು ತಮ್ಮ ನಿಲುವು ಮಂಡಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೆಲವು ಸಚಿವರಿಗೆ ಸೂಚನೆಗಳನ್ನು ನೀಡಿದರು. ಎರಡು ಸಮುದಾಯಗಳ ನಡುವೆ ಜಾತಿ ಭೇದ ಇರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಮಾತನಾಡುವಾಗ ಜಾಗರೂಕರಾಗಿರಿ. ಮೀಸಲಾತಿ ವಿಚಾರದಲ್ಲಿ ಸಮನ್ವಯ ನಿಲುವು ತಳೆಯಬೇಕು ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಚಿವರಿಗೆ ತಿಳುವಳಿಕೆ ನೀಡಿದರು.
ಇದನ್ನೂ ಓದಿ: ಮರಾಠಾ ಮೀಸಲಾತಿ: ಮನೋಜ್ ಉಪವಾಸ ಸತ್ಯಾಗ್ರಹ ಅಂತ್ಯಗೊಂಡ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಸಿಎಂ ಶಿಂಧೆ, ಹಲವು ನಿರ್ಧಾರ ಪ್ರಕಟ
ಏತನ್ಮಧ್ಯೆ, ರಾಜ್ಯ ಸಚಿವ ಸಂಪುಟ ಸಭೆಯ ನಂತರ ಇಂದು ಮರಾಠಾ ಮೀಸಲಾತಿ ಹಿನ್ನೆಲೆಯಲ್ಲಿ ಇನ್ನೂ ಕೆಲವು ಮಹತ್ವದ ಬೆಳವಣಿಗೆಗಳು ನಡೆಯಲಿವೆ. ರಾಜ್ಯ ಸರ್ಕಾರದ ನಿಯೋಗ ಇಂದು ಮತ್ತೆ ಮನೋಜ್ ಜಾರಂಗೆ ಅವರನ್ನು ಭೇಟಿ ಮಾಡುತ್ತಿದೆ. ಮರಾಠಾ ಮೀಸಲಾತಿಗೆ ಡಿಸೆಂಬರ್ 24 ಅಥವಾ ಜನವರಿ 2 ಗಡುವು ಎಂದು ಚರ್ಚಿಸಲು ಸಭೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದ ನಿಯೋಗದಲ್ಲಿ ಸಚಿವ ಉದಯ್ ಸಾಮಂತ್, ಸಚಿವ ಸಂದೀಪನ್ ಬುಮ್ರೆ ಮತ್ತು ಸಚಿವ ಅತುಲ್ ಸೇವ್ ಇದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ