ಮಗು ದತ್ತು ಪಡೆಯಲು ಮದುವೆ ಪ್ರಮಾಣಪತ್ರ ಕಡ್ಡಾಯವಲ್ಲ ಎಂದ ಅಲಹಾಬಾದ್ ಹೈಕೋರ್ಟ್; ಮಂಗಳಮುಖಿಗೆ ಸಿಕ್ಕ ಸಮ್ಮತಿ !
ತೃತೀಯಲಿಂಗಿ ಹೆಸರು ರೀನಾ. ಇವರು 2000ನೇ ಇಸ್ವಿಯ ಡಿಸೆಂಬರ್ 16 ರಂದು ವಾರಣಾಸಿಯ ಅರ್ದಾಲಿ ಬಜಾರ್‌ನ ಮಹಾಬೀರ್ ಮಂದಿರದಲ್ಲಿ ವ್ಯಕ್ತಿಯೊಬ್ಬರನ್ನು ವಿವಾಹವಾದರು.
ಮಗುವನ್ನು ದತ್ತು (Child Adopt) ತೆಗೆದುಕೊಳ್ಳಲು ಮದುವೆ ಪ್ರಮಾಣ ಪತ್ರ ಅಗತ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಮಗುವನ್ನು ದತ್ತು ತೆಗೆದುಕೊಳ್ಳಲು ಮದುವೆಯಾಗಿರಬೇಕು ಎಂದೇನೂ ಇಲ್ಲ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ, 1956ರಡಿಯಲ್ಲಿ ಒಂಟಿ ಪೋಷಕರೂ (Single Parent) ಕೂಡ ಮಗುವನ್ನು ದತ್ತು ಪಡೆಯಬಹುದು ಎಂದು ಸ್ಪಷ್ಟಪಡಿಸಿದೆ. ಮಂಗಳಮುಖಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳುವ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾಚರಣೆ ಮಾಡಿದ ನ್ಯಾಯಮೂರ್ತಿಗಳಾದ ಡಾ. ಕೌಶಲ್ ಜಯೇಂದ್ರ ಠಾಕೆ ಮತ್ತು ನ್ಯಾ. ವಿವೇಕ್ ವರ್ಮಾರ ಪೀಠ ಈ ತೀರ್ಪು ನೀಡಿದೆ.
ಈ ತೃತೀಯಲಿಂಗಿ ಹೆಸರು ರೀನಾ. ಇವರು 2000ನೇ ಇಸ್ವಿಯ ಡಿಸೆಂಬರ್ 16 ರಂದು ವಾರಣಾಸಿಯ ಅರ್ದಾಲಿ ಬಜಾರ್‌ನ ಮಹಾಬೀರ್ ಮಂದಿರದಲ್ಲಿ ವ್ಯಕ್ತಿಯೊಬ್ಬರನ್ನು ವಿವಾಹವಾದರು. ನಂತರ ದಂಪತಿ ಮಗುವೊಂದನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿ, ಪ್ರಕ್ರಿಯೆ ಶುರು ಮಾಡಿದರು. ಆದರೆ ದತ್ತು ತೆಗೆದುಕೊಳ್ಳಬೇಕು ಎಂದರೆ, ಹಿಂದು ವಿವಾಹ ಕಾಯ್ದೆಯಡಿ ವಿವಾಹ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಲಾಯಿತು. ಹೀಗಾಗಿ ದಂಪತಿ ವಾರಾಣಸಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ 2021ರಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ತಮ್ಮ ವಿವಾಹವನ್ನು ನೋಂದಣಿ ಮಾಡಿ, ಅದರ ಪ್ರಮಾಣ ಪತ್ರ ನೀಡುವಂತೆ ಕೋರಿದ್ದರು. ತೃತೀಯಲಿಂಗಿ ವಿವಾಹವಾಗಿದ್ದರಿಂದ ಅದನ್ನು ನೋಂದಾಯಿಸಲು ಸಾಧ್ಯವಿಲ್ಲ, ಕಾನೂನು ಪ್ರಕಾರ ವಿವಾಹ ಸರ್ಟಿಫಿಕೇಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಯಿತು.
ಅದಾದ ನಂತರ ದಂಪತಿ ಹೈಕೋರ್ಟ್ ಮೆಟ್ಟಿಲೇರಿ, ತಮಗೆ ಮಗುವನ್ನು ದತ್ತು ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ ಅದಕ್ಕೆ ಸಂಬಂಧಪಟ್ಟಂತೆ ಮ್ಯಾರೇಜ್ ಸರ್ಟಿಫಿಕೇಟ್ ಕೊಡುವಂತೆ ವಾರಾಣಸಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಹಿಂದು ದತ್ತು ಮತ್ತು ನಿರ್ವಹಣಾ ಕಾಯ್ದೆ 1956ರ ಸೆಕ್ಷನ್ 7 (ದತ್ತು ತೆಗೆದುಕೊಳ್ಳಲು ಹಿಂದು ಪುರುಷನ ಸಾಮರ್ಥ್ಯ) ಮತ್ತು ಸೆಕ್ಷನ್ 8 (ದತ್ತು ಸ್ವೀಕರಿಸಲು ಹಿಂದೂ ಮಹಿಳೆಯ ಸಾಮರ್ಥ್ಯ)ಗಳಡಿ ಮಕ್ಕಳನ್ನು ದತ್ತು ಪಡೆಯಲು ವಿವಾಹ ಪ್ರಮಾಣ ಪತ್ರ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ಅಮಾರೈಟ್ : ‘ಇದು ಗೆಳೆತನದ ಗಣಿತ ಸಾಹೇಬ್, ಇಲ್ಲಿ ಎರಡರಲ್ಲಿ ಒಂದು ಕಳೆದರೆ ಏನೂ ಉಳಿಯುವುದಿಲ್ಲ’
Published On - 9:56 am, Tue, 22 February 22