ವಿವಾಹಿತ ಮಹಿಳೆಯಲ್ಲಿ ಮನೆಗೆಲಸ ಮಾಡಲು ಹೇಳಿದರೆ ಅದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಭಾಗ್ಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ತನ್ನ ಅತ್ತೆ ಮತ್ತು ಪತಿ ವಿರುದ್ಧ ದೂರು ನೀಡಿದ್ದರು, ಮದುವೆಯಾದ ಒಂದು ತಿಂಗಳವರೆಗೆ ತನಗೆ ಚೆನ್ನಾಗಿ ಉಪಚಾರ ಮಾಡಿದರು. ಆದರೆ ನಂತರ ಅವರು ತನ್ನನ್ನು ದಾಸಿಯಂತೆ ನಡೆಸಿಕೊಳ್ಳಲಾರಂಭಿಸಿದರು ಎಂದು ದೂರು ನೀಡಿದ್ದರು.
ವಿವಾಹಿತ ಮಹಿಳೆಗೆ ಮನೆಕೆಲಸ ಮಾಡುವಂತೆ ಕೇಳಿದರೆ, ಅದನ್ನು ಮನೆ ಕೆಲಸದಾಕೆಯ ಕೆಲಸದಂತೆ ನೋಡಬಾರದು. ಇದು ಕ್ರೌರ್ಯವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ (Bombay High Court) ಔರಂಗಾಬಾದ್ ಪೀಠ ಹೇಳಿದೆ. ತನಗೆ ಇಷ್ಟವಿಲ್ಲದಿದ್ದರೆ ಮನೆಕೆಲಸ ಮಾಡುವುದಿಲ್ಲ ಎಂದು ಮದುವೆಗೆ ಮುನ್ನವೇ ಮಹಿಳೆ ಹೇಳಬೇಕು ಎಂದು ನ್ಯಾಯಾಲಯ ಹೇಳಿದೆ. ವಿವಾಹಿತ ಮಹಿಳೆಯಲ್ಲಿ ತಮ್ಮ ಕುಟುಂಬಕ್ಕಾಗಿ ಮನೆಕೆಲಸ ಮಾಡಬೇಕೆಂದು ಕೇಳಿದರೆ ಆಕೆ ಮನೆಕೆಲಸದಾಕೆಯಂತೆ ಎಂದು ಹೇಳಲಾಗುವುದಿಲ್ಲ. ಆಕೆ ತನ್ನ ಮನೆಯ ಕೆಲಸಗಳನ್ನು ಮಾಡಲು ಬಯಸದಿದ್ದರೆ, ಮದುವೆಗೆ ಮುಂಚೆಯೇ ಅವಳು ಅವರಿಗೆ ತಿಳಿಸಬೇಕಾಗಿತ್ತು, ಇದರಿಂದ ವರನು ಮದುವೆಯ ಬಗ್ಗೆ ಮರು ಯೋಚಿಸಬಹುದು ಅಥವಾ ಮದುವೆಯ ಮುಂಚೆಯೇ ವಿಷಯವನ್ನು ಪರಿಹರಿಸಬಹುದು ಎಂದು ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರಾಜೇಶ್ ಪಾಟೀಲ್ ಅವರ ಪೀಠ ಹೇಳಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯ ನಡೆದಿದೆ ಎಂದು ಪತ್ನಿ ದಾಖಲಿಸಿದ ಪ್ರಕರಣದ ವಿರುದ್ಧ ಆಕೆಯ ಪತಿ ಮತ್ತು ಅವರ ಕುಟುಂಬ ಸದಸ್ಯರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.
ಸೆಕ್ಷನ್ 498A ಹೇಳುವುದೇನೆಂದರೆ ಒಬ್ಬ ಮಹಿಳೆಯ ಗಂಡ ಅಥವಾ ಸಂಬಂಧಿಯು ಅವಳನ್ನು ಕ್ರೌರ್ಯಕ್ಕೆ ಒಳಪಡಿಸಿದರೆ, ಅವರು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ಅವರಿಗೆ ದಂಡ ವಿಧಿಸಲಾಗುತ್ತದೆ. ಸೆಕ್ಷನ್ 498 ಎ ಜೊತೆಗೆ ಪತಿ ವಿರುದ್ಧ ಐಪಿಸಿಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಭಾಗ್ಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ತನ್ನ ಅತ್ತೆ ಮತ್ತು ಪತಿ ವಿರುದ್ಧ ದೂರು ನೀಡಿದ್ದರು, ಮದುವೆಯಾದ ಒಂದು ತಿಂಗಳವರೆಗೆ ತನಗೆ ಚೆನ್ನಾಗಿ ಉಪಚಾರ ಮಾಡಿದರು. ಆದರೆ ನಂತರ ಅವರು ತನ್ನನ್ನು ದಾಸಿಯಂತೆ ನಡೆಸಿಕೊಳ್ಳಲಾರಂಭಿಸಿದರು ಎಂದು ದೂರು ನೀಡಿದ್ದರು.
ಮದುವೆಯಾದ ಒಂದು ತಿಂಗಳ ನಂತರ ಆಕೆಯ ಅತ್ತೆ ಮತ್ತು ಪತಿ ಕಾರು ಖರೀದಿಸಲು 4 ಲಕ್ಷ ರೂಪಾಯಿಗೆ ಬೇಡಿಕೆಯಿಡಲು ಪ್ರಾರಂಭಿಸಿದರು, ಅದನ್ನು ತನ್ನ ತಂದೆಗೆ ಭರಿಸಲಾಗುತ್ತಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ನಂತರ ಪತಿ ತನಗೆ ಥಳಿಸಿ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಹಿಂದೆ ಮದುವೆಯಾಗಿದ್ದ ಆತನ ಪತ್ನಿ ತನ್ನ ಮೊದಲ ಪತಿ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದಾರೆ ಎಂದು ಆರೋಪಿ ವ್ಯಕ್ತಿ ಮತ್ತು ಆತನ ಕುಟುಂಬದವರು ಪೀಠಕ್ಕೆ ತಿಳಿಸಿದರು. ಅವಳು ಈ ಚಿತ್ರಹಿಂಸೆ ಕತೆಗಳನ್ನು ಹೆಣೆದಿದ್ದಾಳೆ. ಪತ್ನಿಯ ಮೊದಲ ಪತಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ವ್ಯಕ್ತಿ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಮಹಿಳೆಗೆ ಈ ರೀತಿ ಆರೋಪ ಹೊರಿಸಿ ಹಣ ಕೀಳುವ ಅಭ್ಯಾಸವಿದೆ ಎಂದು ಹಿಂದಿನ ದೂರುಗಳಿಂದ ತೀರ್ಮಾನಿಸಲು ಸಾಧ್ಯವಿಲ್ಲ. ಆಕೆಯ ವಿರುದ್ಧ ಪತಿ ಸಲ್ಲಿಸಿದ ಅಂತಹ ಸಲ್ಲಿಕೆಗಳನ್ನು ಅವರು ಸಾಬೀತುಪಡಿಸಬೇಕು ಎಂದು ಪೀಠ ಹೇಳಿದೆ. ಆದಾಗ್ಯೂ, ಅಂತಹ ಕೃತ್ಯಗಳನ್ನು ವಿವರಿಸದ ಹೊರತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ರ ನಿಬಂಧನೆಗಳನ್ನು ವಿಧಿಸಲು ‘ಮಾನಸಿಕ ಮತ್ತು ದೈಹಿಕವಾಗಿ’ ಕಿರುಕುಳ ಎಂಬ ಪದಗಳ ಬಳಕೆ ಸಾಕಾಗುವುದಿಲ್ಲ ಎಂದು ಪೀಠವು ಒತ್ತಿಹೇಳಿತು.
Published On - 3:26 pm, Fri, 28 October 22