ಸಿಡಿಎಸ್ ಬಿಪಿನ್ ರಾವತ್ ಅವರೊಂದಿಗೆ ಹುತಾತ್ಮರಾಗಿದ್ದ ಲ್ಯಾನ್ಸ್ ನಾಯಕ್ ಸಾಯಿ ತೇಜಾ ಪಾರ್ಥಿವ ಶರೀರದ ಅಂತ್ಯಕ್ರಿಯೆ
ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜಾ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಭಾನುವಾರ ಆಂಧ್ರ ಪ್ರದೇಶ ಚಿತ್ತೂರು ಜಿಲ್ಲೆ ಮದನಪಲ್ಲಿ ಸಮೀಪದ ಸ್ವಗ್ರಾಮ ಎಗುವರೆಗದ್ದಿಯಲ್ಲಿ ನಡೆಯಿತು
ಮದನಪಲ್ಲಿ: ತಮಿಳುನಾಡಿನ ಕೂನೂರು ಸಮೀಪ ಅಪಘಾತಕ್ಕೀಡಾದ ಹೆಲಿಕಾಪ್ಟರ್ನಲ್ಲಿ ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ದಿವಂಗತ ಬಿಪಿನ್ ರಾವತ್ ಅವರೊಂದಿಗೆ ಇದ್ದ ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜಾ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಭಾನುವಾರ ಆಂಧ್ರ ಪ್ರದೇಶ ಚಿತ್ತೂರು ಜಿಲ್ಲೆ ಮದನಪಲ್ಲಿ ಸಮೀಪದ ಸ್ವಗ್ರಾಮ ಎಗುವರೆಗದ್ದಿಯಲ್ಲಿ ನಡೆಯಿತು. ಪಾರ್ಥಿವ ಶರೀರಕ್ಕೆ ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರು ಅಂತಿಮ ನಮನ ಸಲ್ಲಿಸಿ, ಕಣ್ಣೀರಿನ ವಿದಾಯ ಹೇಳಿದರು. ಪಾರ್ಥಿವ ಶರೀರ ನೋಡುತ್ತಿದಂತೆ ಸಾಯಿ ತೇಜಾ ಅವರ ಪತ್ನಿ ಶ್ಯಾಮಲಾ ಕುಸಿದುಬಿದ್ದರು. ಮೂರು ದಿನಗಳಿಂದ ಊಟ, ನಿದ್ದೆ ಇಲ್ಲದೆ ಅವರು ನಿತ್ರಾಣಗೊಂಡಿದ್ದರು.
ಸಾಯಿ ತೇಜಾ ಅವರ ಪಾರ್ಥಿವ ಶರೀರವು ದೆಹಲಿಯಿಂದ ಬೆಂಗಳೂರಿಗೆ ಶನಿವಾರ ತಲುಪಿತ್ತು. ಬೆಂಗಳೂರಿನಿಂದ ಮದನಪಲ್ಲಿಗೆ ರಸ್ತೆ ಮಾರ್ಗದಲ್ಲಿ ಕಳುಹಿಸಿಕೊಡಲಾಗಿತ್ತು. ಮಾರ್ಗದ ಹಲವು ಗ್ರಾಮಗಳಲ್ಲಿ ಜನರು ಆ್ಯಂಬುಲೆನ್ಸ್ ಮೇಲೆ ಹೂ ಹಾಕಿ ಮೃತ ಯೋಧನನ್ನು ಗೌರವಿಸಿದ್ದರು. 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಸಾಯಿ ತೇಜಾ ಅವರಿಗೆ ಪತ್ನಿ ಶ್ಯಾಮಲಾ ಮತ್ತು ಐದು ವರ್ಷದ ಮಗ ಮೋಕ್ಷಜ್ಞ ಹಾಗೂ ಮೂರು ವರ್ಷದ ಮಗಳು ದರ್ಶಿನಿ ಇದ್ದಾರೆ. ಆಂಧ್ರ ಪ್ರದೇಶದ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.
ಖುಷಿಯಾಗಿರು: ಮೃತ ಯೋಧನ ಕೊನೆಯ ಸಂದೇಶ ಲ್ಯಾನ್ಸ್ ನಾಯಕ್ ಸಾಯಿ ತೇಜಾ ಅವರು ತಮ್ಮ ಪತ್ನಿಗೆ ಕಳಿಸಿರುವ ಕೊನೆಯ ಮೆಸೇಜ್ ‘ಹ್ಯಾಪಿ ಗಾ ಉಂಡು’ (ಖುಷಿಯಾಗಿರು). ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಭದ್ರತಾ ಅಧಿಕಾರಿಯಾಗಿದ್ದ ಸಾಯಿ ತೇಜಾ ಸಹ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು.
ಹೆಲಿಕಾಪ್ಟರ್ ಅಪಘಾತಕ್ಕೀಡಾಗುವ ನಾಲ್ಕು ಗಂಟೆಗಳ ಮೊದಲಷ್ಟೇ ಸಾಯಿ ತೇಜಾ ಮದನಪಲ್ಲಿಯಲ್ಲಿದ್ದ ತಮ್ಮ ಪತ್ನಿಗೆ ವಿಡಿಯೊ ಕಾಲ್ ಮಾಡಿದ್ದರು. ‘ಯಾವಾಗ ಫೋನ್ ಮಾಡಿದರೂ ಮೊದಲು ಚಿಕ್ಕಮಗಳನ್ನು ವಿಚಾರಿಸುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಗಂಟೆಗಟ್ಟಲೆ ವ್ಯಾಯಾಮ ಮಾಡುತ್ತಿದ್ದರು. ಸೇನೆಯನ್ನು ಬಿಟ್ಟುಬಿಡುವಂತೆ ಹಲವು ಬಾರಿ ವಿನಂತಿಸಿದ್ದೆವು. ಅದರೆ ಅವರು ನಮ್ಮ ಮಾತು ಕೇಳಿರಲಿಲ್ಲ’ ಎಂದು ಸಾಯಿ ತೇಜಾ ಅವರ ಪತ್ನಿ ಶ್ಯಾಮಲಾ ಕಣ್ಣೀರಿಟ್ಟರು.
ಇದನ್ನೂ ಓದಿ: ಮಿಲಿಟರಿ ಗೌರವಗಳೊಂದಿಗೆ ನೆರವೇರಿತು ಭಾರತದ ಮೊದಲ ಸಿಡಿಎಸ್ ಅಧಿಕಾರಿ ಬಿಪಿನ್ ರಾವತ್ ಅಂತ್ಯಕ್ರಿಯೆ; ಫೋಟೋಗಳು ಇಲ್ಲಿವೆ ಇದನ್ನೂ ಓದಿ: Bipin Rawat: ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನು? ತಜ್ಞರು ಏನಂತಾರೆ?; ಇಲ್ಲಿದೆ ಮಾಹಿತಿ