ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದ ಬಳಿ ಧಗಧಗನೆ ಹೊತ್ತಿ ಉರಿದ ಅಂಗಡಿ
ಶಾರ್ಟ್ ಸರ್ಕ್ಯೂಟ್‌ನಿಂದ ದೇವಸ್ಥಾನದ ಸಮೀಪವಿರುವ ಫೋಟೋ ಫ್ರೇಮ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ದೆಹಲಿ: ಆಂಧ್ರಪ್ರದೇಶದ (Andhra pradesh) ತಿರುಪತಿಯ(Tirupati) ಗೋವಿಂದರಾಜ ಸ್ವಾಮಿ ದೇವಸ್ಥಾನದ (Govindaraja Swamy Temple)ಬಳಿ ಇರುವ ಅಂಗಡಿಯೊಂದರಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದೀಗ ಬೆಂಕಿ ಹತೋಟಿಗೆ ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ದೇವಸ್ಥಾನದ ಸಮೀಪವಿರುವ ಫೋಟೋ ಫ್ರೇಮ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ದೇವಾಲಯದ ಬಳಿಯಲ್ಲಿರುವ ಕಟ್ಟಡ ಧಗಧಗನೆ ಉರಿಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿಯಿಂದ 6 ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.ಅಕ್ಕಪಕ್ಕದಲ್ಲಿ ಇದ್ದ 6 ಅಂಗಡಿಗಳಿಗೂ ಬೆಂಕಿಯಿಂದ ಹಾನಿಯಾಗಿದೆ. ಟಿಟಿಡಿ ಇಒ ಧರ್ಮಾ ರೆಡ್ಡಿ, ಶಾಸಕ ಭೂಮಣ, ಜೆಇಒ ವೀರಬ್ರಹ್ಮ, ಆಯುಕ್ತೆ ಹರಿತಾ ಅವರು ಅಗ್ನಿ ಅವಘಡ ಸಂಭವಿಸಿದ ಪ್ರದೇಶವನ್ನು ಪರಿಶೀಲಿಸಿದ್ದಾರೆ..
#WATCH | A fire broke out in a photo frames manufacturing unit located in a building, in Tirupati, today; no casualties were reported#AndhraPradesh pic.twitter.com/GUDR7TE9YH
— ANI (@ANI) June 16, 2023
ನಾಲ್ಕು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದು ಗೋವಿಂದರಾಜ ಸ್ವಾಮಿ ದೇವಸ್ಥಾನದ ರಥದ ಕಡೆಗೆ ವ್ಯಾಪಿಸಿರುವ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ.
ಪ್ರಸಿದ್ಧ ದೇವಸ್ಥಾನದ ಪಕ್ಕದಲ್ಲಿರುವ ಲಾವಣ್ಯ ಫೋಟೋ ಫ್ರೇಮ್ ವರ್ಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಇಡೀ ಕಟ್ಟಡವನ್ನು ಆವರಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಐದು ಅಂತಸ್ತಿನ ಕಟ್ಟಡದಲ್ಲಿ ಒಂದು ಮಹಡಿಯಲ್ಲಿರುವ ಫೋಟೋ ಫ್ರೇಮ್ ಅಂಗಡಿಯಲ್ಲಿ ಮೊದಲಿಗೆ ಬೆಂಕಿ ಹತ್ತಿಕೊಂಡಿದೆ. ಅಂಗಡಿಯಲ್ಲಿದ್ದ ಕಾರ್ಮಿಕರು ಮತ್ತು ಕಟ್ಟಡದಲ್ಲಿದ್ದ ಇತರ ಜನರು ಸುರಕ್ಷಿತವಾಗಿ ಹೊರಗೆ ಓಡಿದ್ದಾರೆ.
ಇದನ್ನೂ ಓದಿ: ಜಿ20 ಕೃಷಿ ಸಚಿವರ ಸಮಾವೇಶದಲ್ಲಿ ಜಾಗತಿಕ ಆಹಾರ ಭದ್ರತೆ ಕುರಿತು ಚರ್ಚೆಗೆ ಪ್ರಧಾನಿ ಮೋದಿ ಕರೆ
ಕಟ್ಟಡದ ಮುಂದೆ ನಿಲ್ಲಿಸಿದ್ದ ಐದು ದ್ವಿಚಕ್ರ ವಾಹನಗಳೂ ಬೆಂಕಿಗೆ ಆಹುತಿಯಾಗಿವೆ. ಫೋಟೋ ಫ್ರೇಮ್ ಅಂಗಡಿಯಿಂದ ಸುಮಾರು 1 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಅಂಗಡಿಯಲ್ಲಿನ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ. ಲ್ಯಾಮಿನೇಶನ್ ಹಾಗೂ ಇತರೆ ಫೋಟೋ ಸಂಬಂಧಿತ ಕೆಲಸಗಳಿಗಾಗಿ ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ ರಾಸಾಯನಿಕಗಳಿಂದ ಬೆಂಕಿ ಮತ್ತಷ್ಟು ಹೊತ್ತಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Fri, 16 June 23