Manipur Landslide ಮಣಿಪುರದಲ್ಲಿ ಭಾರೀ ಭೂಕುಸಿತ: 8 ಸಾವು, 50ಕ್ಕೂ ಹೆಚ್ಚು ಮಂದಿ ನಾಪತ್ತೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 30, 2022 | 9:55 PM

ಮಣಿಪುರದ ಜಿರಿಬಾಮ್‌ನಿಂದ ಇಂಫಾಲ್‌ವರೆಗೆ ನಿರ್ಮಾಣ ಹಂತದಲ್ಲಿರುವ ರೈಲು ಮಾರ್ಗದ ರಕ್ಷಣೆಗಾಗಿ ಮಣಿಪುರದ ತುಪುಲ್ ರೈಲು ನಿಲ್ದಾಣದ ಬಳಿ ನಿಯೋಜಿಸಲಾದ ಭಾರತೀಯ ಸೇನೆಯ 107 ಪ್ರಾದೇಶಿಕ ಸೇನೆಯ ಕಂಪನಿಯ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ

Manipur Landslide ಮಣಿಪುರದಲ್ಲಿ ಭಾರೀ ಭೂಕುಸಿತ: 8 ಸಾವು, 50ಕ್ಕೂ ಹೆಚ್ಚು ಮಂದಿ ನಾಪತ್ತೆ
ಮಣಿಪುರದಲ್ಲಿ ಭೂಕುಸಿತ
Follow us on

ಗುರುವಾರ ಮುಂಜಾನೆ ಮಣಿಪುರದ (Manipur) ನೋನಿ ಜಿಲ್ಲೆಯ 107 ಟೆರಿಟೋರಿಯಲ್ ಆರ್ಮಿ (ಟಿಎ) ಶಿಬಿರದ ಬಳಿ ಭಾರಿ ಭೂಕುಸಿತ (landslide) ಸಂಭವಿಸಿದ್ದುಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸತ್ತವರಲ್ಲಿ ಏಳು ಮಂದಿ ಟಿಎ ಜವಾನರು ಮತ್ತು ಒಬ್ಬರು ಇಂಫಾಲ್-ಜಿರಿಬಾಮ್ ರೈಲ್ವೇ ಯೋಜನೆಯ ನಿರ್ಮಾಣದಲ್ಲಿ ತೊಡಗಿರುವ ರೈಲ್ವೇಸ್ ಕೆಲಸಗಾರ ಎಂದು ಮೂಲಗಳು ತಿಳಿಸಿವೆ. ಮಣಿಪುರದ ಜಿರಿಬಾಮ್‌ನಿಂದ ಇಂಫಾಲ್‌ವರೆಗೆ ನಿರ್ಮಾಣ ಹಂತದಲ್ಲಿರುವ ರೈಲು ಮಾರ್ಗದ ರಕ್ಷಣೆಗಾಗಿ ಮಣಿಪುರದ ತುಪುಲ್ ರೈಲು ನಿಲ್ದಾಣದ ಬಳಿ ನಿಯೋಜಿಸಲಾದ ಭಾರತೀಯ ಸೇನೆಯ 107 ಪ್ರಾದೇಶಿಕ ಸೇನೆಯ ಕಂಪನಿಯ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ ಎಂದು ಸೇನೆ ತಿಳಿಸಿದೆ. ನಾಪತ್ತೆಯಾದವರಲ್ಲಿ ನಿರ್ಮಾಣ ಯೋಜನೆಗಾಗಿ ರೈಲ್ವೆಯಿಂದ ತೊಡಗಿಸಿಕೊಂಡಿರುವ ಸಿಬ್ಬಂದಿ ಸೇರಿದ್ದಾರೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಬಂಡೆಗಳು ಮತ್ತು ಮಣ್ಣು ಗುಡ್ಡಗಳು ಕುಸಿದಿದ್ದು ಸೇನಾ ಪೋಸ್ಟ್ ಮಣ್ಣಿನಡಿಯಲ್ಲಾಗಿದೆ. ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದರೂ ಪ್ರತಿಕೂಲ ಹವಾಮಾನದ ಕಾರಣದಿಂದ ಅದನ್ನು ಸ್ಥಗಿತಗೊಳಿಸಲಾಯಿತು. “ಮಣ್ಣು ಮತ್ತು ಕೆಸರು ಇದೆ, ಘಟನಾ ಸ್ಥಳಕ್ಕೆ ತಲುಪಲು ರಸ್ತೆ ಇಲ್ಲ. ಆದರೆ ಆ ನಾಪತ್ತೆಯಾದವರನ್ನು ಪತ್ತೆಹಚ್ಚಲು ಇನ್ನೂ ಪ್ರಯತ್ನಗಳು ನಡೆಯುತ್ತಿವೆ ಎಂದು ಮಣಿಪುರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಗಾಯಗೊಂಡ ವ್ಯಕ್ತಿಗಳಿಗೆ ನೋನಿ ಆರ್ಮಿ ವೈದ್ಯಕೀಯ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರವಾಗಿ ಗಾಯಗೊಂಡಿರುವ ಸಿಬ್ಬಂದಿಗಳ ಸ್ಥಳಾಂತರ ಪ್ರಗತಿಯಲ್ಲಿದೆ. ಭೂಕುಸಿತದಿಂದಾಗಿ ಇಜೈ ನದಿಯ ಹರಿವು ಕೂಡಾ ಜಾಸ್ತಿಯಾಗಿದೆ. ನಿರಂತರ ಭೂಕುಸಿತಗಳು ಮತ್ತು ಕೆಟ್ಟ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸೇನಾ ಹೆಲಿಕಾಪ್ಟರ್‌ಗಳು ಸ್ಟ್ಯಾಂಡ್‌ಬೈನಲ್ಲಿವೆಎಂದು ನೆರೆಯ ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ನಿಯೋಜಿಸಲಾದ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸುಮಿತ್ ಶರ್ಮಾ ಹೇಳಿದ್ದಾರೆ.


ಆದಾಗ್ಯೂ, ಸಾವುನೋವುಗಳ ಅಥವಾ ಕಾಣೆಯಾದ ವ್ಯಕ್ತಿಗಳನ್ನು ಸಂಖ್ಯೆಯನ್ನು ಶರ್ಮಾ ಅವರು ಖಚಿತಪಡಿಸಿಲ್ಲ.


ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಗುರುವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ್ದು ಸೇನೆ, ರಾಜ್ಯ ಪೊಲೀಸರು, ರಾಜ್ಯ ವಿಪತ್ತು ಸ್ಪಂದನಾ ಪಡೆ ಮತ್ತು ಸ್ಥಳೀಯ ನಿವಾಸಿಗಳು ನಡೆಸುತ್ತಿರುವ ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಿದರು. ಮೃತರ ಕುಟುಂಬಕ್ಕೆ ಐದು ಲಕ್ಷ ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರಧನವನ್ನು ಸಿಂಗ್ ಘೋಷಿಸಿದ್ದಾರೆ.

Published On - 4:13 pm, Thu, 30 June 22