ಪಂಜಾಬ್ ರೈತರು ಮತ್ತು ಜನಸಾಮಾನ್ಯರು ನೆಮ್ಮದಿಯಿಂದ ಬದುಕಬೇಕಾದರೆ ಕಾಂಗ್ರೆಸ್​ ಪಕ್ಷ ಪದಚ್ಯುತಗೊಂಡು ಎಸ್​ಎಡಿ-ಬಿಎಸ್​ಪಿ ಮೈತ್ರಿ ಕೂಟ ಅಧಿಕಾರಕ್ಕೆ ಬರಬೇಕು: ಮಾಯಾವತಿ

|

Updated on: Jul 03, 2021 | 8:52 PM

ಒಂದು ಸಂಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ಬರುವುದನ್ನು ಪಂಜಾಬ್ ಜನ ಖಾತರಿಪಡಿಸಿಕೊಳ್ಳಬೇಕೆಂದು ಮಾಯಾವತಿ ಕರೆ ನೀಡಿದ್ದಾರೆ.

ಪಂಜಾಬ್ ರೈತರು ಮತ್ತು ಜನಸಾಮಾನ್ಯರು ನೆಮ್ಮದಿಯಿಂದ ಬದುಕಬೇಕಾದರೆ ಕಾಂಗ್ರೆಸ್​ ಪಕ್ಷ ಪದಚ್ಯುತಗೊಂಡು ಎಸ್​ಎಡಿ-ಬಿಎಸ್​ಪಿ ಮೈತ್ರಿ ಕೂಟ ಅಧಿಕಾರಕ್ಕೆ ಬರಬೇಕು: ಮಾಯಾವತಿ
ಬಿಎಸ್​ಪಿ ನಾಯಕಿ ಮಾಯಾವತಿ
Follow us on

ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಧುರೀಣೆ ಮಾಯಾವತಿ ಅವರು ಮುಂಬರುವ ಪಂಜಾಬ್ ವಿಧಾನ ಸಭೆ ಚುನಾವಣೆಯಲ್ಲಿ ಅಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರು ಬಿಎಸ್​ಪಿಶಿರೋಮಣಿ ಅಕಾಲಿ ದಳ (ಎಸ್ಎಡಿ) ಮೈತ್ರಿ ಕೂಟಕ್ಕೆ ವೋಟು ನೀಡಬೇಕೆಂದು ಹೇಳಿದ್ದಾರೆ. ಸರಣಿ ಟ್ವೀಟ್​ಗಳ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸಿರುವ ಮಾಯಾವತಿ, ತಮ್ಮ ಒಳಜಗಳಗಳಿಂದಾಗಿ ಅವರು ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಿದ್ದಾರೆ ಮತ್ತು ರಾಜ್ಯದ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

‘ಪಂಜಾಬ್​ನಲ್ಲಿ ಉದ್ಯಮವಹಿವಾಟು, ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಿರ್ವಹಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ವಿದ್ಯುಚ್ಛಕ್ತಿ ಬಿಕ್ಕಟ್ಟಿನಿಂದಾಗಿ ಈ ಸಮಸ್ಯೆಗಳು ತಲೆದೋರಿವೆ. ಆದರೆ ಅಧಿಕಾರರೂಢ ಕಾಂಗ್ರೆಸ್ ಪಕ್ಷದ ನಾಯಕರಿಗೆ ಇದ್ಯಾವುದರ ಬಗ್ಗೆ ಚಿಂತೆ ಇಲ್ಲ. ಅವರ ಮಧ್ಯೆ ನಡೆಯುತ್ತಿರುವ ಜಗಳಗಳು ನಗೆಪಾಟಿಲಿಗೀಡಾಗಿವೆ. ಸರ್ಕಾರದಲ್ಲಿ ಎರಡು ಬಣಗಳಾಗಿವೆ. ಪ್ರತಿದಿನ ನಾಯಕರ ನಡುವೆ ಕಾದಾಟ, ಕೆಸರೆರಚಾಟದ ಸುದ್ದಿಗಳು ಹೊರಬರುತ್ತಿವೆ,’ ಎಂದು ಮಾಯಾವತಿ ತಮ್ಮ ಒಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಒಂದು ಸಂಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ಬರುವುದನ್ನು ಪಂಜಾಬ್ ಜನ ಖಾತರಿಪಡಿಸಿಕೊಳ್ಳಬೇಕೆಂದು ಮಾಯಾವತಿ ಕರೆ ನೀಡಿದ್ದಾರೆ.

‘ಪರಿಸ್ಥಿತಿ ಆ ಮಟ್ಟಿಗೆ ಹದಗೆಟ್ಟಿರುವುದರಿಂದ ಪಂಜಾಬ ರಾಜ್ಯದ ಉತ್ತಮ ಭವಿಷ್ಯಕ್ಕೆ ಮತ್ತು ಅಲ್ಲಿನ ಜನರ ಅಭ್ಯುದಯಕ್ಕೆ ಜನರ ಮುಂದಿರುವ ಅಯ್ಕೆ ಎಂದರೆ, ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯ್ಯುವುದು ಮತ್ತು ಶೀರೋಮಣಿ ಅಕಾಲಿ ದಳ ಹಾಗೂ ಬಹುಜನ ಸಮಾಜ ಪಕ್ಷ ಮೈತ್ರಿಕೂಟ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ಖಾತ್ರಿಪಡಿಸಿಕೊಳ್ಳುವುದು,’ ಎಂದು ಮಾಯಾವತಿ ಹೇಳಿದ್ದಾರೆ.

ಪಂಜಾಬಿನ ಕಾಂಗ್ರೆಸ್​ ಘಟಕದಲ್ಲಿ ಜಗಳಗಳು ನಡೆಯತ್ತಿರುವಂತೆಯೇ ಅವುಗಳನ್ನು ಪರಿಹರಿಸಲು ಮತ್ತು ಗುಂಪುಗಾರಿಕೆಯನ್ನು ತಡೆಯಲು ಪಕ್ಷದ ಹಿರಿಯ ನಾಯಕರು ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಚಿಸಿರುವ ತ್ರಿಸದಸ್ಯರ ಸಮಿತಿಯು ಕಳೆದ ಕೆಲ ವಾರಗಳಿಂದ ಹಲವಾರು ಸಭೆಗಳನ್ನು ನಡೆಸಿದ್ದಾರೆ.

ಏತನ್ಮಧ್ಯೆ, ಮಾಯಾವತಿ ಅವರು ಹೇಳಿಕೆಯನ್ನು ಸಮರ್ಥಿಸಿರುವ ಎಸ್​ಎಡಿ ಧುರೀಣ ಸುಖ್ಬೀರ್ ಸಿಂಗ್ ಬಾದಲ್ ಅವರು ಕಾಂಗ್ರೆಸ್​ ನಾಯಕರಿಗೆ, ರಾಜ್ಯದ ರೈತರ ಬಗ್ಗೆಯಾಗಲಿ ಜನಸಾಮಾನ್ಯರ ಬಗ್ಗೆಯಾಗಲೀ ಯಾವುದೇ ಚಿಂತೆಯಿಲ್ಲ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ನಾಯಕರಲ್ಲಿ ಭತ್ತ ಬೆಳೆಯುವ ರೈತರು ಪಡುತ್ತಿರುವ ಸಂಕಷ್ಟ ಮತ್ತು ಪದೇಪದೆ ಪವರ್ ಕಟ್​ಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕಿಂಚಿತ್ತೂ ಪರಿವೆ ಇಲ್ಲ ಎಂದು ಬೆಹೆನ್ ಜೀ ಮಾಯಾವತಿ ಅವರು ಹೇಳಿರುವುದರಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಕಾಂಗ್ರೆಸ್ ನಾಯಕರಿಗೆ ಕೇವಲ ತಮ್ಮ ಕಲ್ಯಾಣದ ಬಗ್ಗೆ ಮಾತ್ರ ಯೋಚನೆಯಿದೆ,’ ಎಂದು ಬಾದಲ್​ ಹೇಳಿದ್ದಾರೆ.

ಜೂನ್ 12 ರಂದು ಎಸ್​ಎಡಿ ಮತ್ತು ಬಿಎಸ್​ಪಿ ಮೈತ್ರಿಯನ್ನು ತಮ್ಮ ನಡುವೆ ಮೈತ್ರಿಯನ್ನು ರಚಿಸಿಕೊಂಡಿದ್ದು ಎರಡು ಪಕ್ಷಗಳ ಮಧ್ಯೆ ಅಗಿರುವ ಒಪ್ಪಂದದ ಪ್ರಕಾರ 117 ವಿಧಾನ ಸಭೆಯ ಕ್ಷೇತ್ರಗಳ ಪೈಕಿ ಎಸ್​ಎಡಿ 97 ರಲ್ಲಿ ಸ್ಪರ್ಧಿಸಲಿದೆ ಬಿಎಸ್​ಪಿ 20 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಪಂಜಾಬಿನ ವಿಧಾನ ಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ನವಜೋತ್ ಸಿದ್ಧು ಮತ್ತು ಪ್ರಿಯಾಂಕಾ ನಡುವೆ ಮಾತುಕತೆ ನಡೆದ ನಂತರ ವರಸೆ ಬದಲಿಸಿದ ರಾಹುಲ್ ಪಂಜಾಬಿನ ನಾಯಕನನ್ನು ಮನೆಗೆ ಕರೆಸಿಕೊಂಡರು!