ವಾರಣಾಸಿ: ಯುದ್ಧ್ದಗ್ರಸ್ಥ ಉಕ್ರೇನಿಂದ ‘ಆಪರೇಷನ್ ಗಂಗಾ’ (Operation Ganga) ಮೂಲಕ ಭಾರತಕ್ಕೆ ಸುರಕ್ಷಿತವಾಗಿ ತರಲ್ಪಟ್ಟ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿರುವ ಉತ್ತರ ಪ್ರದೇಶದ (Uttar Pradesh) ಕೃತಿಕಾ (Kritika) ಸೋಮವಾರದಂದು ತಮ್ಮ ರಾಜ್ಯದ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಅಂತಿಮ ಹಂತ ಮತದಾನದಲ್ಲಿ ತಮ್ಮ ಮತ ಚಲಾಯಿಸಿದರು. ವಾರಣಾಸಿಯ ಮತಕೇಂದ್ರವೊಂದರಲ್ಲ ತಮ್ಮ ಹಕ್ಕು ಚಲಾಯಿಸಿದ ಕೃತಿಕಾ ನಂತರ ಮಾಧ್ಯಮಗಳೊಂದಿಗೆ ಮಾತಾಡಿ ವೋಟು ಮಾಡುವುದು ತನ್ನ ಹಕ್ಕಿನ ಜೊತೆ ಜವಾಬ್ದಾರಿಯೂ ಅಗಿತ್ತೆಂದು ಹೇಳಿದರು. ಉಕ್ರೇನಲ್ಲಿ ಅನುಭವಿಸಿದ ನರಕದಂಥ ಸ್ಥಿತಿಯ ಪ್ರಭಾವದಿಂದ ಆಚೆ ಬರಲು ಇನ್ನೂ ಸಾಧ್ಯವಾಗಿಲ್ಲ ಅಂತಲೂ ಅವರು ಹೇಳಿದರು.
ಅಜಂಘಡ್, ಮಾವು, ಜೌನ್ಪುರ್, ಘಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ್, ಭದೋಯಿ ಮತ್ತು ಸೋನಭದ್ರಾ ಮೊದಲಾದ ಜಿಲ್ಲೆಗಳಲ್ಲಿ ಅಂತಿಮ ಹಂತದ ಮತದಾನ ಸೋಮವಾರ ನಡೆಯಿತು.
ಉಕ್ರೇನಿಂದ ಪಲಾಯನ ಮಾಡಿ ಪೋಲೆಂಡ್ ಗಡಿಭಾಗ ಸೇರಲು ತಾನು ಮತ್ತು ಇನ್ನೂ ಕೆಲ ವಿದ್ಯಾರ್ಥಿಗಳು ಸ್ವಂತ ವ್ಯವಸ್ಥೆ ಮಾಡಿಕೊಂಡು ಅಲ್ಲಿಗೆ ಹೋಗಿದ್ದಾಗಿ ಕೃತಿಕಾ ಹೇಳಿದರು.
‘ನಮ್ಮ ಸ್ವಂತ ಪ್ರಯತ್ನದಿಂದ ನಾವು ಪೋಲೆಂಡ್ ಗಡಿ ತಲುಪಿದ ನಂತರ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಂದ ನಮಗೆ ನೆರವು ಸಿಕ್ಕಿತು,’ ಎಂದು ಕೃತಿಕಾ ಹೇಳಿದರು.
ಇನ್ನೂ ಅಲ್ಲೇ ಸಿಲುಕಿರುವ ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ, ಈಗಾಗಲೇ ಭಾರತಕ್ಕೆ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸ ಮುಂದುವರಿಸಬಹುದೆ ಇಲ್ಲವೇ ಅಂತ ಖಚಿತತೆ ಇಲ್ಲ ಎಂದು ಕೃತಿಕಾ ಹೇಳಿದರು.
‘ನಮ್ಮ ಪ್ರಧಾನ ಮಂತ್ರಿಗಳು ಭಾರತದಲ್ಲೇ ವಿದ್ಯಾಭ್ಯಾಸ ಮುಂದುವರೆಸುವ ಅವಕಾಶ ಮಾಡಿಕೊಟ್ಟರೆ, ನಾನು ಇಲ್ಲೇ ಉಳಿದುಬಿಡುತ್ತೇನೆ, ಇಲ್ಲದಿದ್ದರೆ ಉಕ್ರೇನ್ ಗೆ ವಾಪಸ್ಸು ಹೋಗುತ್ತೇನೆ,’ ಎಂದು ಕೃತ್ತಿಕಾ ಹೇಳಿದರು.
‘ಆಪರೇಷನ್ ಗಂಗಾ’ ಅಡಿಯಲ್ಲಿ ಕಳೆದೊಂದು ವಾರದ ಅವಧಿಯಲ್ಲಿ ಇದುವರೆಗೆ 16,000 ಕ್ಕೂ ಹೆಚ್ಚು ಭಾರತೀಯರನ್ನು ಉಕ್ರೇನಿಂದ ಭಾರತಕ್ಕೆ ಕರೆತರಲಾಗಿದೆ.
ಖಾರ್ಕಿವ್ ಮತ್ತು ಸುಮಿ ಪ್ರದೇಶಗಳನ್ನು ಹೊರತುಪಡಿಸಿ, ಉಕ್ರೇನಿನ ಉಳಿದ ಪ್ರಾಂತ್ಯಗಳಲ್ಲಿದ್ದ ಭಾರತೀಯರನ್ನು ವಾಪಸ್ಸು ಕರೆತರಲಾಗಿದೆ.
ಉಕ್ರೇನಿಂದ ಪ್ರತ್ಯೇಕಗೊಂಡಿರುವ ಡೊನೆಕ್ಸ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳಿಗೆ ಮಾಸ್ಕೋ ಮಾನ್ಯತೆ ನೀಡಿದ ಮೂರು ದಿನಗಳ ಬಳಿಕ ಫೆಬ್ರುವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಸೇನಾ ಕಾರ್ಯಚರಣೆ ಆರಂಭಿಸಿತ್ತು.