ಮೋದಿ ಅಹಂಕಾರಿ ಎಂದ ಮೇಘಾಲಯ ಗವರ್ನರ್ ; ಮಲಿಕ್ ಆರೋಪ ಸತ್ಯವಾಗಿದ್ದರೆ ಮೋದಿ ಕ್ಷಮೆಯಾಚನೆಗೆ ಕಾಂಗ್ರೆಸ್ ಪಟ್ಟು

| Updated By: ರಶ್ಮಿ ಕಲ್ಲಕಟ್ಟ

Updated on: Jan 03, 2022 | 8:59 PM

ರೈತರ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿಯವರನ್ನು ಭೇಟಿ ಮಾಡಲು ಹೋದಾಗ ಐದೇ ನಿಮಿಷದಲ್ಲಿ ಅವರ ಜತೆ ಜಗಳ ಮಾಡಿ ಮುಗಿಸಿದೆ. ಅವರು ಬಹಳ ಸೊಕ್ಕು ತೋರಿಸಿದರು. ನಮ್ಮವರೇ (ರೈತರು) 500 ಮಂದಿ ಸತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದಾಗ, ‘ಅವರು ನನಗಾಗಿ ಸತ್ತರೇ?’ ಎಂದು  ಕೇಳಿದರು.

ಮೋದಿ ಅಹಂಕಾರಿ ಎಂದ ಮೇಘಾಲಯ ಗವರ್ನರ್ ; ಮಲಿಕ್ ಆರೋಪ ಸತ್ಯವಾಗಿದ್ದರೆ ಮೋದಿ ಕ್ಷಮೆಯಾಚನೆಗೆ ಕಾಂಗ್ರೆಸ್ ಪಟ್ಟು
ಸತ್ಯಪಾಲ್ ಮಲಿಕ್
Follow us on

ದೆಹಲಿ: ಮೇಘಾಲಯದ ರಾಜ್ಯಪಾಲ(Meghalaya Governor)  ಸತ್ಯಪಾಲ್ ಮಲಿಕ್ (Satya Pal Malik) ಅವರು ರೈತರ ಪ್ರತಿಭಟನೆಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾದಾಗ ಅವರು ಅಹಂಕಾರದಿಂದ ವರ್ತಿಸಿದರು ಎಂದು ಹೇಳಿದ್ದಾರೆ. ಮಲಿಕ್ ಅವರ ಆರೋಪದ ಬೆನ್ನಲ್ಲೇ ಪ್ರತಿಪಕ್ಷ ಕಾಂಗ್ರೆಸ್‌ (Congress) ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ಮಲಿಕ್ ಬಹಿರಂಗಪಡಿಸಿರುವ ವಿಷಯದ ಬಗ್ಗೆ ಮೌನ ಮುರಿಯುವಂತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್ ಒತ್ತಾಯಿಸಿದೆ.  “ಗವರ್ನರ್ ಮಲಿಕ್ ಸುಳ್ಳು ಹೇಳುತ್ತಿದ್ದರೆ, ದಯವಿಟ್ಟು ಇಂದೇ ಅವರನ್ನು ವಜಾ ಮಾಡಿ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ. ಅವರ ಆರೋಪ ಸತ್ಯವಾಗಿದ್ದರೆ, ಪ್ರಧಾನಿ ಮೋದಿ , ಗೃಹ ಸಚಿವ ಅಮಿತ್ ಶಾ ಅವರು ಮುಂದೆ ಬಂದು ಭಾರತದ ರೈತರು ಮತ್ತು ರೈತ ಕಾರ್ಮಿಕರಲ್ಲಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಅವರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ರೈತರ ಆಂದೋಲನದ ಕುರಿತು ಗವರ್ನರ್ ಮಲಿಕ್ ಮತ್ತು ಪಿಎಂ ಮೋದಿ ನಡುವಿನ ಸಂಭಾಷಣೆಯ ಪಠ್ಯವನ್ನು ಓದಿದಾಗ ಇಡೀ ರಾಷ್ಟ್ರವು “ದಿಗ್ಭ್ರಮೆಗೊಂಡಿತು ಮತ್ತು ಆಘಾತಕ್ಕೊಳಗಾಯಿತು” ಎಂದು ಅವರು ಹೇಳಿದರು. ಮೋದಿ ಮತ್ತು ಬಿಜೆಪಿ ಸರ್ಕಾರದ ಅಸಲಿ ಮುಖ ಇಂದು ಬಯಲಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
“ಪ್ರಧಾನಿ ಮೋದಿಯವರ ರೈತ ವಿರೋಧಿ ಮುಖ, ಪ್ರಧಾನಿ ಮೋದಿಯವರ ಸಂವೇದನೆ ರಹಿತ ಮುಖ. ಭಾರತದ ರೈತರು ಮತ್ತು ರೈತ ಕಾರ್ಮಿಕರ ನಾಶಕ್ಕಾಗಿ ಕೇವಲ ಬಂಡವಾಳ ಹೂಡುವ ಸ್ನೇಹಿತರಿಗಾಗಿ ಕೆಲಸ ಮಾಡುವ ಬಿಜೆಪಿ ಮತ್ತು ಸರ್ಕಾರದ ನಿಜವಾದ ಮುಖ ಈಗ ಬಹಿರಂಗವಾಗಿದೆ” ಎಂದು ಅವರು ಹೇಳಿದರು.

ಹರ್ಯಾಣದ ದಾದ್ರಿಯಲ್ಲಿ ಭಾನುವಾರ ಸಾಮಾಜಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಲಿಕ್, ರೈತರ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿಯವರನ್ನು ಭೇಟಿ ಮಾಡಲು ಹೋದಾಗ ಐದೇ ನಿಮಿಷದಲ್ಲಿ ಅವರ ಜತೆ ಜಗಳ ಮಾಡಿ ಮುಗಿಸಿದೆ. ಅವರು ಬಹಳ ಸೊಕ್ಕು ತೋರಿಸಿದರು. ನಮ್ಮವರೇ (ರೈತರು) 500 ಮಂದಿ ಸತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದಾಗ, ‘ಅವರು ನನಗಾಗಿ ಸತ್ತರೇ?’ ಎಂದು  ಕೇಳಿದರು. ಅದಕ್ಕೆ ನಾನು ಹೌದು, ನಿಮಗಾಗಿ ಸತ್ತರು, ಏಕೆಂದರೆ ನೀವು ರಾಜರಾಗಿದ್ದೀರಿ. ನಾನು ಅವರೊಂದಿಗೆ ಜಗಳವಾಡಿದ್ದೇನೆ. ಅವರು ಅಮಿತ್ ಶಾರನ್ನು ಭೇಟಿಯಾಗುವಂತೆ ಹೇಳಿದ್ದರು. ನಾನು ಭೇಟಿ ಮಾಡಿದ್ದೇನೆ ಎಂದಿದ್ದರು.
“ದೇಶದ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಈ ದೇಶದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಇಂತಹ ಮಾತುಗಳನ್ನು ಹೇಳುವ ಧೈರ್ಯ ಮಾಡಿಲ್ಲ”

ಪ್ರಧಾನಮಂತ್ರಿಗಳೇ, ರೈತರು ಮತ್ತು ರೈತ ಕಾರ್ಮಿಕರಿಂದ ಚುನಾಯಿತರಾದವರು, ಅತ್ಯುನ್ನತ ಸಾರ್ವಜನಿಕ ಹುದ್ದೆಯನ್ನು ಹೊಂದಿರುವ ನೀವು ಬಳಸುವ ಭಾಷೆಯೇ ಇದು. ಆ ರೈತರು ಬಿಜೆಪಿಗಾಗಿ ಸಾಯಲಿಲ್ಲ, ಪ್ರಧಾನಿ ಮೋದಿಗಾಗಿ ಸಾಯಲಿಲ್ಲ. ಅವರು ಈ ದೇಶದ ಆಹಾರ ಭದ್ರತೆಯನ್ನು ರಕ್ಷಿಸಲು ಸತ್ತರು. ಈ ದೇಶದ 62 ಕೋಟಿ ರೈತರಿಗೆ ಮತ್ತು ರೈತ ಕಾರ್ಮಿಕರಿಗೆ ನ್ಯಾಯ ಸಿಗಲಿ ಎಂದು ಅವರು ಸತ್ತರು. ಅವರ ಸ್ಮರಣೆಯನ್ನು ಪ್ರಧಾನ ಮಂತ್ರಿ ಅವಮಾನಿಸುವುದು ಅತ್ಯಂತ ವಿಷಾದನೀಯ ಮತ್ತು ಖಂಡನೀಯ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಒಂದು ವರ್ಷದ ರೈತರ ಆಂದೋಲನದಲ್ಲಿ ಮೃತಪಟ್ಟ 700 ರೈತರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

“ಸರ್ಕಾರವು ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಬೇಕು ಮತ್ತು ಉತ್ತರ ಪ್ರದೇಶದಿಂದ ಹರ್ಯಾಣದವರೆಗೆ ರೈತರ ವಿರುದ್ಧ ಸುಳ್ಳು ದಾಖಲಿಸಿದ ಪ್ರತಿಯೊಂದು ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯುವಂತೆ ಘೋಷಿಸಬೇಕು. ಕಡ್ಡಾಯ ಎಂಎಸ್‌ಪಿ ಆರ್ಕಿಟೆಕ್ಚರ್ ಕುರಿತು ನಿರ್ಧರಿಸಲು ಸಮಿತಿಯ ಸಂವಿಧಾನವನ್ನು ಪ್ರಕಟಿಸಬೇಕು ಮತ್ತು ಸಮಿತಿಯು ಮುಂದಿನ 30 ದಿನಗಳಲ್ಲಿ ವರದಿಯನ್ನು ತಲುಪಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸುರ್ಜೇವಾಲಾ ಹೇಳಿದರು.

ಇದನ್ನೂ ಓದಿ: ಸುವೇಂದು ಅಧಿಕಾರಿಗೆ ಬಂಧನದಿಂದ ರಕ್ಷಣೆ ನೀಡಿದ ಹೈಕೋರ್ಟ್ ಆದೇಶದ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂಕೋರ್ಟ್