ದೇಶಭ್ರಷ್ಟ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬೆಲ್ಜಿಯಂ ನ್ಯಾಯಾಲಯ ಆದೇಶ

ಭಾರತದಿಂದ ಪಲಾಯನ ಮಾಡಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ 8 ವರ್ಷಗಳ ಬಳಿಕ ಕೊನೆಗೂ ಭಾರತಕ್ಕೆ ಬರಲಿದ್ದಾರೆ. ಇಂದು ಬೆಲ್ಜಿಯಂ ನ್ಯಾಯಾಲಯವು ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಆದೇಶ ನೀಡಿದೆ. ಈ ಮೂಲಕ ಭಾರತ ಸರ್ಕಾರಕ್ಕೆ ಭಾರೀ ಯಶಸ್ಸು ಸಿಕ್ಕಂತಾಗಿದೆ. ಭಾರತ ಬಹಳ ಸಮಯದಿಂದ ಚೋಕ್ಸಿಯನ್ನು ಗಡಿಪಾರು ಮಾಡಲು ಬೆಲ್ಜಿಯಂ ಅನ್ನು ಮನವಿ ಮಾಡಿತ್ತು.

ದೇಶಭ್ರಷ್ಟ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬೆಲ್ಜಿಯಂ ನ್ಯಾಯಾಲಯ ಆದೇಶ
Mehul Choksi

Updated on: Oct 17, 2025 | 10:37 PM

ನವದೆಹಲಿ, ಅಕ್ಟೋಬರ್ 17: ಭಾರತದಿಂದ ಪಲಾಯನ ಮಾಡಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು (Mehul Choksi) ಮರಳಿ ಕರೆತರುವ ಭಾರತದ ಪ್ರಯತ್ನಗಳಿಗೆ ಕೊನೆಗೂ ಫಲ ಸಿಕ್ಕಿದೆ. ಬೆಲ್ಜಿಯಂನ ಆಂಟ್ವೆರ್ಪ್ ನ್ಯಾಯಾಲಯವು ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಆದೇಶಿಸಿದೆ. ಬೆಲ್ಜಿಯಂ ಅಧಿಕಾರಿಗಳು ಅವರನ್ನು ಬಂಧಿಸಿದ್ದು ಮಾನ್ಯವಾಗಿದೆ ಎಂದು ತನ್ನ ಆದೇಶದಲ್ಲಿ ಹೇಳಿದೆ.

ಅಧಿಕಾರಿಗಳ ಪ್ರಕಾರ, ಮೆಹುಲ್ ಚೋಕ್ಸಿ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಆದರೂ ಈ ತೀರ್ಪು ಈ ಪ್ರಕರಣದಲ್ಲಿ ಮೈಲಿಗಲ್ಲಾಗಿದೆ. “ಕೋರ್ಟ್ ಆದೇಶ ನಮ್ಮ ಪರವಾಗಿ ಬಂದಿದೆ. ಭಾರತದ ಕೋರಿಕೆಯ ಮೇರೆಗೆ ಬೆಲ್ಜಿಯಂ ಅಧಿಕಾರಿಗಳಿಂದ ಅವರ ಬಂಧನವು ಮಾನ್ಯವಾಗಿದೆ ಎಂದು ನ್ಯಾಯಾಲಯವು ಹೇಳಿದೆ. ಅವರನ್ನು ಹಸ್ತಾಂತರಿಸುವಲ್ಲಿ ಮೊದಲ ಕಾನೂನು ಹೆಜ್ಜೆ ಇಡಲಾಗಿದೆ” ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮೆಹುಲ್ ಚೋಕ್ಸಿ ಹಸ್ತಾಂತರ ಕೋರಿ ಬೆಲ್ಜಿಯಂಗೆ ಭಾರತ ಮನವಿ

ಭಾರತದ ಕೇಂದ್ರೀಯ ತನಿಖಾ ದಳದ (ಸಿಬಿಐ) ಕೋರಿಕೆಯ ಮೇರೆಗೆ 65 ವರ್ಷದ ಮೆಹುಲ್ ಚೋಕ್ಸಿಯನ್ನು ಏಪ್ರಿಲ್ 11ರಂದು ಬಂಧಿಸಲಾಯಿತು. 4 ತಿಂಗಳಿಗೂ ಹೆಚ್ಚು ಕಾಲದಿಂದ ಅವರು ಬೆಲ್ಜಿಯಂನಲ್ಲಿ ಬಂಧನದಲ್ಲಿದ್ದಾರೆ. ವಿವಿಧ ಬೆಲ್ಜಿಯಂ ನ್ಯಾಯಾಲಯಗಳು ಅವರ ಬಹು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು.


PNB ಹಗರಣ ಎಂದರೇನು?:

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣವು ಭಾರತ ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಹಣಕಾಸು ವಂಚನೆಗಳಲ್ಲಿ ಒಂದಾಗಿದೆ, ಇದು ಸುಮಾರು 13,000 ಕೋಟಿ ರೂ.ಗಳ ವಂಚನೆಯ ವಹಿವಾಟುಗಳನ್ನು ಒಳಗೊಂಡಿದೆ. ಈ ಹಗರಣವು 2018ರ ಆರಂಭದಲ್ಲಿ ಬೆಳಕಿಗೆ ಬಂದಿತು. ಮೊದಲು ಆಭರಣ ವ್ಯಾಪಾರಿ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಮತ್ತು ಕೆಲವು PNB ಉದ್ಯೋಗಿಗಳು ಈ ವಂಚನೆಯಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ದೇಶಭ್ರಷ್ಟ ವಜ್ರೋದ್ಯಮಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿ, ಈ ಎಲ್ಲಾ ಸೌಲಭ್ಯ ಕೊಡ್ತೀವಿ ಎಂದು ಬೆಲ್ಜಿಯಂಗೆ ಭರವಸೆ ನೀಡಿದ ಭಾರತ

ವಿದೇಶಿ ಸಾಲಕ್ಕಾಗಿ ನೀಡಲಾದ ಬ್ಯಾಂಕ್ ಗ್ಯಾರಂಟಿಗಳಾದ ಲೆಟರ್ಸ್ ಆಫ್ ಅಂಡರ್‌ಟೇಕಿಂಗ್ (LoU)ಗಳ ದುರುಪಯೋಗದ ಮೂಲಕ ಈ ವಂಚನೆಯನ್ನು ಮಾಡಲಾಗಿತ್ತು. 2011 ಮತ್ತು 2018ರ ನಡುವೆ PNBಯ ಮುಂಬೈನ ಬ್ರಾಡಿ ಹೌಸ್ ಶಾಖೆಯ ಇಬ್ಬರು ಉದ್ಯೋಗಿಗಳು ಬ್ಯಾಂಕಿನ ಕೋರ್ ಸಿಸ್ಟಮ್‌ಗಳಲ್ಲಿ ಅವುಗಳನ್ನು ದಾಖಲಿಸದೆ SWIFT ಸಿಸ್ಟಮ್ ಮೂಲಕ ಅನಧಿಕೃತ LoUಗಳನ್ನು ನೀಡಿದ್ದರು. ಇದಾದ ನಂತರ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಭಾರತ ಬಿಟ್ಟು ಪಲಾಯನ ಮಾಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:35 pm, Fri, 17 October 25