ಮಾವೋವಾದಿ ನಿರ್ಮೂಲನೆ ಮಾಡುತ್ತೇವೆ, 75 ಗಂಟೆಗಳಲ್ಲಿ 308ಕ್ಕೂ ಹೆಚ್ಚು ನಕ್ಸಲರ ಶರಣಾಗತಿ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ನಕ್ಸಲಿಸಂ ವಿರುದ್ಧ ಗುಡುಗಿದ್ದಾರೆ. ನಕ್ಸಲಿಸಂ'ಕೆಂಪು ಭಯೋತ್ಪಾದನೆ' ಎಂದು ಕರೆದಿದ್ದಾರೆ. ಮಾವೋವಾದಿ ಉಗ್ರವಾದವು ಯುವಕರಿಗೆ ಮಾಡಿದ ಅನ್ಯಾಯವಾಗಿದ್ದು, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ತಮ್ಮ ಸರ್ಕಾರ ದೃಢಸಂಕಲ್ಪ ಮಾಡಿದೆ. ಸರ್ಕಾರದ ಕ್ರಮಗಳಿಂದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 125 ರಿಂದ 11 ಕ್ಕೆ ಇಳಿದಿದ್ದು, 300ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರತದಲ್ಲಿರುವ ನಕ್ಸಲಿಸಂ (Naxalism India) ಸಂಪೂರ್ಣ ನಾಶ ಮಾಡುತ್ತೇವೆ ಎಂದು ಈ ಹಿಂದೆ ದೇಶದ ಗೃಹಮಂತ್ರಿ ಅಮಿತ್ ಶಾ ಹೇಳುತ್ತಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ನಕ್ಸಲಿಸಂ ಬಗ್ಗೆ ಗುಡುಗಿದ್ದಾರೆ. ಪ್ರಧಾನಿ ಮೋದಿ ನಕ್ಸಲಿಸಂನ್ನು ಕೆಂಪು ಭಯೋತ್ಪಾದನೆ ಎಂದು ಕರೆದಿದ್ದಾರೆ. ಈ ಕೆಂಪು ಭಯೋತ್ಪಾದನೆಯನ್ನು ನಾಶ ಮಾಡುವ ದಿನ ದೂರವಿಲ್ಲ, ನಕ್ಸಲಿಸಂ ದೇಶದ ವಿರುದ್ಧದ ಪಾಪ ಎಂದು ಹೇಳಿದ್ದಾರೆ. ಮಾವೋವಾದಿ ಉಗ್ರವಾದವು ಭಾರತದ ಯುವಕರಿಗೆ ಮಾಡಿದ ಅನ್ಯಾಯ, ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವುದೇ ತಮ್ಮ ಸರ್ಕಾರದ ದೃಢಸಂಕಲ್ಪ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆಯ ವಿರುದ್ಧ ಭಾರತ ಬಲವಾದ ನಿಲುವನ್ನು ತೆಗೆದುಕೊಂಡಿದೆ. ಪಹಲ್ಗಾಮ್ನಲ್ಲಿ ಭಾರತೀಯರನ್ನು ಹತ್ಯೆ ಮಾಡಿದ್ದಕ್ಕಾಗಿ ಪಾಕಿಸ್ತಾನ ಹಾಗೂ ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಮೂಲಕ ಉತ್ತರ ನೀಡಿದ್ದೇವೆ. ದೇಶವು ಗಡಿಯಾಚೆಗಿನ ಬೆದರಿಕೆಗಳನ್ನು ನಾಶ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಭಾರತವು ಈಗ ಚಿಪ್‌ಗಳಿಂದ ಹಿಡಿದು ಹಡಗುಗಳವರೆಗೆ ಎಲ್ಲವನ್ನೂ ತಯಾರಿಸುತ್ತಿದೆ. ಸ್ವಾವಲಂಬನೆ ಮೂಲಕ ಭಾರತ ಪ್ರಗತಿ ಸಾಧಿಸುತ್ತಿದೆ. ಜತೆಗೆ ಈಗಾಗಲೇ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ರಾಷ್ಟ್ರಗಳಲ್ಲಿ ಒಂದಾಗಿದೆ. ಇದರ ನಡುವೆ ಇಡೀ ಮಾವೋವಾದಿ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ವಿರುದ್ಧವು ಕೂಡ ಟೀಕೆ ಮಾಡಿದರು, ಹಿಂದಿನ ಯುಪಿಎ ಸರ್ಕಾರವೂ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿದೆ. ವಿದೇಶಿ ಶಕ್ತಿಗಳ ಜತೆಗೆ ಭಾರತದ ವಿರುದ್ಧ ಕೈಜೋಡಿಸಿತ್ತು. ಕಾಂಗ್ರೆಸ್ ಬಲವಂತದ ರಾಜಕೀಯವನ್ನು ಮಾಡುತ್ತಿತ್ತು. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಹಾನಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 11 ವರ್ಷದಲ್ಲಿ ಭಯೋತ್ಪಾದನೆಗೆ ಭಾರತದ ಪ್ರತ್ಯುತ್ತರ, ಆರ್ಥಿಕತೆಯಲ್ಲೂ ನಮ್ಮದೇ ಮೇಲುಗೈ: ಪ್ರಧಾನಿ ಮೋದಿ
ಈಗಾಗಲೇ 75 ಗಂಟೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಸರ್ಕಾರ ನೀಡಿದ ಅಂತಿಮ ಸೂಚನೆಯ ನಂತರ 308 ಕ್ಕೂ ಹೆಚ್ಚು ಕಟ್ಟಾ ಮಾವೋವಾದಿ ಕಾರ್ಯಕರ್ತರು ಶರಣಾಗತಿಯಾಗಿದ್ದಾರೆ. ಇನ್ನು ದೇಶದಲ್ಲಿರುವ ಅನೇಕ ಜಿಲ್ಲೆಗಳು ಮಾವೋವಾದಿ ಪೀಡಿತದಿಂದ ಮುಕ್ತವಾಗುತ್ತಿದೆ. ಸುಮಾರು 11 ವರ್ಷಗಳ ಹಿಂದೆ 125 ಜಿಲ್ಲೆಗಳು ಮಾವೋವಾದಿ ಹಿಂಸಾಚಾರಕ್ಕೆ ಒಳಗಾಗಿತ್ತು. ಆದರೆ ಇದೀಗ ಇದು 11 ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




