ಲಾಲು ಪ್ರಸಾದ್ ಸಹಾಯ ಮಾಡಿದ್ದು ತಮ್ಮ ಹೆಂಡತಿಗೆ ಮಾತ್ರ; ಚುನಾವಣಾ ರ್ಯಾಲಿಯಲ್ಲಿ ಆರ್‌ಜೆಡಿ ವಿರುದ್ಧ ನಿತೀಶ್ ಕುಮಾರ್ ವಾಗ್ದಾಳಿ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬೆಂಬಲವನ್ನು ಒತ್ತಿ ಹೇಳಿದ್ದಾರೆ. ಲಾಲು ಪ್ರಸಾದ್ ಮಹಿಳೆಯರಿಗಾಗಿ ಯಾವುದೇ ಉತ್ತಮ ಕೆಲಸಗಳನ್ನು ಮಾಡಲಿಲ್ಲ, ಅವರು ಸಹಾಯ ಮಾಡಿದ್ದು ತಮ್ಮ ಹೆಂಡತಿಗೆ ಮಾತ್ರ ಎಂದು ಲೇವಡಿ ಮಾಡಿದ್ದಾರೆ. ಒಟ್ಟು 243 ಸ್ಥಾನಗಳಲ್ಲಿ, 121 ಕ್ಷೇತ್ರಗಳಿಗೆ ನವೆಂಬರ್ 6 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ.

ಪಾಟ್ನಾ, ಅಕ್ಟೋಬರ್ 17: ಬಿಹಾರ ರಾಜ್ಯದಲ್ಲಿ ಎನ್‌ಡಿಎ ಬಣದಲ್ಲಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭಾ ಚುನಾವಣೆ (Bihar Elections) ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ಈ ವೇಳೆ ಅವರು ಬಿಹಾರದ ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷವನ್ನೂ ಗುರಿಯಾಗಿಸಿಕೊಂಡಿದ್ದಾರೆ. ಚುನಾವಣಾ ವೇಳಾಪಟ್ಟಿ ಘೋಷಣೆಯ ನಂತರ ತಮ್ಮ ಮೊದಲ ದೊಡ್ಡ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಇಂದು ಮಾತನಾಡಿದ ನಿತೀಶ್ ಕುಮಾರ್, “ಕೇಂದ್ರ ಸರ್ಕಾರ ನಮಗೆ ದೊಡ್ಡ ಬೆಂಬಲವನ್ನು ನೀಡಿದೆ. ಪ್ರಧಾನಿ ಮೋದಿ ಬಿಹಾರಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಮಗೆ ಪ್ರದರ್ಶಿಸಲು ಹಲವು ಯೋಜನೆಗಳಿವೆ” ಎಂದು ಒತ್ತಿ ಹೇಳಿದ್ದಾರೆ.
“ನಾನು ಎಲ್ಲಾ ಗುಂಪುಗಳ ಅಭಿವೃದ್ಧಿಯನ್ನು ಮಾಡಿದ್ದೇನೆ. ಅದು ಹಿಂದೂಗಳು, ಮುಸ್ಲಿಮರು, ಹಿಂದುಳಿದವರಇರಲಿ ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್ ಕುಮಾರ್, ಲಾಲು ಪ್ರಸಾದ್ ಮಹಿಳೆಯರಿಗಾಗಿ ಯಾವುದೇ ಉತ್ತಮ ಕೆಲಸಗಳನ್ನು ಮಾಡಲಿಲ್ಲ, ಅವರು ಸಹಾಯ ಮಾಡಿದ್ದು ತಮ್ಮ ಹೆಂಡತಿಗೆ ಮಾತ್ರ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆಗೆ ಶಹಾಬುದ್ದೀನ್ ಮಗನನ್ನು ಕಣಕ್ಕಿಳಿಸಿದ್ದಕ್ಕೆ ಆರ್‌ಜೆಡಿ ವಿರುದ್ಧ ಅಮಿತ್ ಶಾ ವಾಗ್ದಾಳಿ
ಈ ಹೇಳಿಕೆಯು 1997ರಲ್ಲಿ ಲಾಲು ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಸಿಲುಕಿದ ನಂತರ ತಮ್ಮ ಪತ್ನಿ ರಾಬ್ರಿ ದೇವಿಯನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರವನ್ನು ನೇರವಾಗಿ ಉಲ್ಲೇಖಿಸುತ್ತದೆ. ಈ ನಿರ್ಧಾರವನ್ನು ನಿತೀಶ್ ಕುಮಾರ್ ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆ ಇಂದು ಕೊನೆಗೊಂಡಿದೆ. ಒಟ್ಟು 243 ಸ್ಥಾನಗಳಲ್ಲಿ, 121 ಕ್ಷೇತ್ರಗಳಿಗೆ ನವೆಂಬರ್ 6 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದ್ದು, ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




