ಭಾರತದಲ್ಲಿ ಮಂಕಿಪಾಕ್ಸ್ (monkeypox) ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಇಲ್ಲಿಯವರೆಗೆ ಕೇರಳದಲ್ಲಿ ಮೂರು ಮತ್ತು ದೆಹಲಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Ministry of health and family welfare) ಮಂಕಿಪಾಕ್ಸ್ ಕಾಯಿಲೆಯ ಸಾಮಾನ್ಯ ಲಕ್ಷಣಗಳು, ರೋಗ ಬಾಧಿತ ವ್ಯಕ್ತಿಯೊಂದಿಗೆ ಸಂಪರ್ಕಹೊಂದಿದ್ದರೆ ಅಂಥಾ ವ್ಯಕ್ತಿಗಳು ಏನು ಮಾಡಬೇಕು ಎಂಬುದರ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಮಂಕಿಪಾಕ್ಸ್ನಿಂದ ನೀವು ಸುರಕ್ಷಿತರಾಗಿರಿ. ರೋಗಕ್ಕೆ ಕಾರಣ ಮತ್ತು ರೋಗ ಲಕ್ಷಣಗಳ ಬಗ್ಗೆ ಅರಿತು ಸೋಂಕು ಬಾಧಿಕರಾಗದಂತೆ ಎಚ್ಚರವಹಿಸಿ ಎಂದು ಆರೋಗ್ಯ ಸಚಿವಾಲಯ ಭಾನುವಾರ ಟ್ವಿಟರ್ ಹ್ಯಾಂಡಲ್ ನಲ್ಲಿ ಮಾರ್ಗಸೂಚಿ ಪ್ರಕಟಿಸಿದೆ.
Keep yourself safe from #Monkeypox. Know the causes and symptoms of the disease as well as precautions to be taken to avoid infection. pic.twitter.com/izq8jlE7a6
— Ministry of Health (@MoHFW_INDIA) July 24, 2022
ರೋಗ ಲಕ್ಷಣಗಳು
ಜ್ವರ, ಚರ್ಮದ ಮೇಲೆ ದದ್ದುಗಳು ( ಇವುಗಳು ಮುಖದಲ್ಲಿ ಆರಂಭವಾಗಿ ಆಮೇಲೆ ತೋಳು, ಕಾಲು, ಅಂಗೈ ಮತ್ತು ಹಿಮ್ಮಡಿಗೂ ಹರಡುತ್ತದೆ).
ದುಗ್ಧರಸ ಗ್ರಂಥಿಯ ಹಿರಿದಾಗುವಿಕೆ
ತಲೆನೋವು, ಮಾಂಸಖಂಡಗಳ ನೋವು ಅಥವಾ ಬಳಲಿಕೆ
ಕೆಮ್ಮು, ಗಂಟಲಲ್ಲಿ ನೋವು
ರೋಗ ಬಾಧಿತ ಅಥವಾ ಸೋಂಕಿತರೆಂದು ಶಂಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬಂದರೆ ಏನು ಮಾಡಬೇಕು?
ಯಾವುದೇ ವ್ಯಕ್ತಿ ಕಳೆದ 21ದಿನಗಳಲ್ಲಿ ರೋಗಬಾಧಿತ ಅಥವಾ ಸೋಂಕಿತರೆಂದು ಶಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರೆ ಅವರು ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರಲ್ಲಿ ಯಾವುದಾದರೂ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯಬೇಕು.
ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಸರ್ಕಾರ
ದೇಶದಲ್ಲಿ ನಾಲ್ಕನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಬಳಿಕ ಕೇಂದ್ರ ಸರ್ಕಾರ ಭಾನುವಾರ ಉನ್ನತ ಮಟ್ಟದ ಅವಲೋಕನ ಸಭೆ ನಡೆಸಿದೆ. ನಾಲ್ಕನೇ ಪ್ರಕರಣದಲ್ಲಿ ಯಾವುದೇ ಪ್ರಯಾಣದ ಹಿಸ್ಟರಿ ಇಲ್ಲದ ವ್ಯಕ್ತಿಗೆ ಸೋಂಕು ತಗಲಿದೆ. ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಭೆಯ ನೇತೃತ್ವವನ್ನು ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ ವಹಿಸಿದ್ದು, ಆರೋಗ್ಯ ಸಚಿವಾಲಯ, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (NCDC) ಮತ್ತು ಐಸಿಎಂಆರ್ ಭಾಗವಹಿಸಿದೆ.
ರೋಗಿಯು ಲೋಕ ನಾಯಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿನ ಸ್ಟಾಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಪಿಟಿಐಗೆ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಈ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಮೂರು ದಿನ ಐಸೋಲೇಟ್ ಮಾಡಿದಾಗ ಅವರಲ್ಲಿ ರೋಗ ಲಕ್ಷಣ ಕಾಣಿಸಿತ್ತು. ಈ ವ್ಯಕ್ತಿಯ ಮಾದರಿಯನ್ನು ಶನಿವಾರ ನ್ಯಾಷನಲ್ ಇನ್ಸಿಟ್ಯೂಟ್ ಆಫ ವೈರಾಲಜಿ(NIV) ಪುಣೆಗೆ ಕಳುಹಿಸಿದ್ದು, ಅಲ್ಲಿ ಅದು ಪಾಸಿಟಿವ್ ಎಂದು ತೋರಿಸಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನೂ ಕ್ವಾರಂಟೈನ್ನಲ್ಲಿರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.