ನವದೆಹಲಿ: ಕೇಂದ್ರ ಸಚಿವ ಸಂಪುಟ ಇಂದು ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಅನುಮೋದನೆ ನೀಡಿದೆ. ಇದೀಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಈ ಕುರಿತು ಸಮಗ್ರ ಮಸೂದೆಯನ್ನು ತರುವ ಸಾಧ್ಯತೆಯಿದೆ. ಬುಧವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಸಮರ್ಥನೆ ಮಾಡಿಕೊಂಡಿದ್ದು, ಆಗಾಗ ನಡೆಯುವ ಚುನಾವಣೆಗಳು ರಾಷ್ಟ್ರದ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿವೆ ಎಂದು ಪ್ರತಿಪಾದಿಸಿದರು.
ಲೋಕಸಭೆ ಚುನಾವಣೆ ಮುಗಿದರೆ ವಿಧಾನಸಭೆ ಚುನಾವಣೆ ಬರುತ್ತದೆ. ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಮುಗಿದಿದೆ. ಈಗ ದೆಹಲಿ ವಿಧಾನಸಭಾ ಚುನಾವಣೆಗಳು ಬರಲಿವೆ. ಇವು ಖರ್ಚುಗಳನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಅಭಿವೃದ್ಧಿಗೂ ತೊಡಕು ಉಂಟುಮಾಡುತ್ತದೆ ಎಂದು ಚೌಹಾಣ್ ಹೇಳಿದ್ದರು.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯನ್ನು ಐತಿಹಾಸಿಕ ಎಂದು ಬಣ್ಣಿಸಿದೆ. ಈ ಕ್ರಮವು ವೆಚ್ಚವನ್ನು ನಿಯಂತ್ರಿಸಲು ಪರಿಣಾಮಕಾರಿ ಮತ್ತು ಆಡಳಿತ ಸ್ನೇಹಿಯಾಗಿದೆ ಎಂದು ಹೇಳಿಕೊಂಡಿದೆ. ಹಲವಾರು ಸಂದರ್ಭಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆಯ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಇದು ಸಮಯದ ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ, ಯಾರೊಂದಿಗೂ ಮೈತ್ರಿ ಇಲ್ಲ ಎಂದ ಆಮ್ ಆದ್ಮಿ ಪಕ್ಷ
ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಒಮ್ಮತ ಮೂಡಿಸುವ ಕಸರತ್ತಿನ ನಂತರ ಹಂತ ಹಂತವಾಗಿ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿತು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯು ವ್ಯಾಪಕ ಸಮಾಲೋಚನೆ ನಡೆಸಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವರದಿಯನ್ನು ಸಲ್ಲಿಸಿತು.
Union Cabinet has approved ‘One Nation One Election’ Bill: Sources pic.twitter.com/uAsIyjNcCv
— ANI (@ANI) December 12, 2024
ರಾಮನಾಥ್ ಕೋವಿಂದ್ ಅಧ್ಯಕ್ಷತೆಯ ಸಮಿತಿಯ ಇತರ ಸದಸ್ಯರೆಂದರೆ, ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, 15ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್‌ಕೆ ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಸುಭಾಷ್ ಸಿ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಮುಂತಾದವರು. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮೂರು ಮಸೂದೆಗಳನ್ನು ರೂಪಿಸಿದೆ.
ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಗಳಲ್ಲಿ ಒಂದಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಜೋಡಿಸುವ ಮಸೂದೆಗೆ ಕನಿಷ್ಠ ಶೇ. 50ರಷ್ಟು ರಾಜ್ಯಗಳಿಂದ ಅನುಮೋದನೆಯ ಅಗತ್ಯವಿರುತ್ತದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಹಲವು ಅಚ್ಚರಿಗಳಿಗೆ ಸಾಕ್ಷಿಯಾದ ಮೊದಲ ದಿನದ ಕಲಾಪ, ಇಲ್ಲಿದೆ ವಿವರ
ಪ್ರಸ್ತಾವಿತ ಎರಡನೇ ಸಂವಿಧಾನ ತಿದ್ದುಪಡಿ ಮಸೂದೆಯು ಹೊಸ ವಿಧಿ 324A ಅನ್ನು ಸೇರಿಸುವ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳ ಜೊತೆಗೆ ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ನಿಬಂಧನೆಗಳನ್ನು ರಚಿಸುತ್ತದೆ.
ಪುದುಚೇರಿ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ — ಪುದುಚೇರಿ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ — ಶಾಸಕಾಂಗ ಸಭೆಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಮೂರು ಕಾನೂನುಗಳಲ್ಲಿನ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಮೂರನೇ ಮಸೂದೆಯು ಸೂಚಿಸುತ್ತದೆ. ಈ ಸದನಗಳ ನಿಯಮಗಳನ್ನು ಇತರ ಶಾಸಕಾಂಗ ಸಭೆಗಳು ಮತ್ತು ಲೋಕಸಭೆಯೊಂದಿಗೆ ಜೋಡಿಸಲು ಪ್ರಸ್ತಾಪಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Thu, 12 December 24