Monkeypox in Kerala: ಕೇರಳದ ಮಲಪ್ಪುರಂನಲ್ಲಿ 3ನೇ ಮಂಕಿಪಾಕ್ಸ್​ ಪ್ರಕರಣ ಪತ್ತೆ

| Updated By: ಸುಷ್ಮಾ ಚಕ್ರೆ

Updated on: Jul 22, 2022 | 3:02 PM

ಜುಲೈ 6ರಂದು ಯುಎಇಯಿಂದ ಮಲ್ಲಪ್ಪುರಂಗೆ ಮರಳಿದ 35 ವರ್ಷದ ವ್ಯಕ್ತಿಯಲ್ಲಿ ದೇಶದ ಮೂರನೇ ಮಂಕಿಪಾಕ್ಸ್​ ರೋಗ ದೃಢಪಟ್ಟಿದೆ.

Monkeypox in Kerala: ಕೇರಳದ ಮಲಪ್ಪುರಂನಲ್ಲಿ 3ನೇ ಮಂಕಿಪಾಕ್ಸ್​ ಪ್ರಕರಣ ಪತ್ತೆ
ಮಂಕಿಪಾಕ್ಸ್​
Follow us on

ತಿರುವನಂತಪುರಂ: ಈ ತಿಂಗಳ ಆರಂಭದಲ್ಲಿ ಯುಎಇಯಿಂದ ಕೇರಳಕ್ಕೆ ಬಂದ 35 ವರ್ಷದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್​ ಪತ್ತೆಯಾಗುವ ಮೂಲಕ ಭಾರತದಲ್ಲಿ ಮೊದಲ ಮಂಕಿಪಾಕ್ಸ್​ ಪ್ರಕರಣ (Monkeypox Case) ದೃಢಪಟ್ಟಿತ್ತು. ನಂತರ 2ನೇ ಮಂಕಿಪಾಕ್ಸ್​ ಕೇಸ್ ಕೂಡ ಅಲ್ಲೇ ಪತ್ತೆಯಾಗಿತ್ತು. ಇದೀಗ ಕೇರಳದಲ್ಲಿ 3ನೇ ಮಂಕಿಪಾಕ್ಸ್​ ಕೇಸ್ ಪತ್ತೆಯಾಗಿದೆ. ಈ ಬಗ್ಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, ಮಂಕಿಪಾಕ್ಸ್​ಗೆ ತುತ್ತಾಗಿರುವ ಮಲಪ್ಪುರಂ ಮೂಲದ ವ್ಯಕ್ತಿಯೊಬ್ಬರು ಜುಲೈ 6ರಂದು ಕೇರಳಕ್ಕೆ ಆಗಮಿಸಿದ್ದು, ಅಲ್ಲಿನ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಂಕಿಪಾಕ್ಸ್​ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ಆ ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಜುಲೈ 6ರಂದು ಯುಎಇಯಿಂದ ಮಲ್ಲಪ್ಪುರಂಗೆ ಮರಳಿದ 35 ವರ್ಷದ ವ್ಯಕ್ತಿಯಲ್ಲಿ ದೇಶದ ಮೂರನೇ ಮಂಕಿಪಾಕ್ಸ್​ ರೋಗ ದೃಢಪಟ್ಟಿದೆ. ಜುಲೈ 13ರಂದು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜ್ವರದಿಂದ ದಾಖಲಾಗಿದ್ದ ಅವರಿಗೆ ಜುಲೈ 15ರಿಂದ ರೋಗಲಕ್ಷಣಗಳು ಪತ್ತೆಯಾಗಿತ್ತು.

ಕೇರಳದಲ್ಲಿ ಮಂಕಿಪಾಕ್ಸ್‌ ಸೋಂಕಿನ 3 ಪ್ರಕರಣ ಪತ್ತೆಯಾಗಿದ್ದು, ದೇಶದ ಜನತೆಯಲ್ಲಿ ಭೀತಿ ಹುಟ್ಟಿಸಿದೆ. ನೆರೆ ರಾಜ್ಯದಲ್ಲಿ ಈ ಸೋಂಕು ಪತ್ತೆಯಾಗಿರುವುದು ಕರ್ನಾಟಕದಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೈ ಅಲರ್ಟ್‌ ಘೋಷಿಸಿ, ಮಾರ್ಗಸೂಚಿ ಹೊರಡಿಸಿದೆ.

ಇದನ್ನೂ ಓದಿ: Monkeypox: ಮಂಕಿಪಾಕ್ಸ್​ ರೋಗದ ಲಕ್ಷಣಗಳೇನು? ಯಾವಾಗ ಚಿಕಿತ್ಸೆ ಪಡೆಯಬೇಕು?

ಮಂಕಿಪಾಕ್ಸ್‌ ಕುರಿತು ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮಂಕಿಪಾಕ್ಸ್‌ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮಂಕಿಪಾಕ್ಸ್‌ ರೋಗ ಲಕ್ಷಣಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ಈ ಕುರಿತು ಜನತೆಯಲ್ಲಿ ಅರಿವು ಮೂಡಿಸಬೇಕು. ವಿಮಾನ ನಿಲ್ದಾಣ, ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಕ್ರಮ ವಹಿಸಬೇಕು. ರೋಗ ಲಕ್ಷಣ ಇರುವವರ ಚಿಕಿತ್ಸೆ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಸರ್ಕಾರದ ಮಾರ್ಗಸೂಚಿಗಳು ಹೀಗಿವೆ:
ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಸ್ಕ್ರೀನಿಂಗ್ ‌ಕಡ್ಡಾಯ, ಸೋಂಕಿತ ಪ್ರದೇಶಗಳಿಂದ ಬಂದ ಜನರಿಗೆ ರೋಗ ಲಕ್ಷಣ ಇದೆಯಾ? ಎಂದು ಪತ್ತೆ ಹಚ್ಚುವುದು, ರೋಗ ಲಕ್ಷಣರಹಿತ ವ್ಯಕ್ತಿಗಳ ವಿವರ ಕಡ್ಡಾಯವಾಗಿ ದಾಖಲಿಸಬೇಕು. ಅವರಲ್ಲಿ ಮಂಕಿಪಾಕ್ಸ್​ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತಾ? ಎಂದು 21 ದಿನಗಳ ಕಾಲ ನಿಗಾ ವಹಿಸಬೇಕು.

ಇದನ್ನೂ ಓದಿ: Kerala Monkeypox: ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್​ ಕೇಸ್ ಪತ್ತೆ; ತಜ್ಞರ ತಂಡ ಕಳುಹಿಸಿದ ಕೇಂದ್ರ ಸರ್ಕಾರ

ಮಂಕಿಪಾಕ್ಸ್ ಸೋಂಕಿನ ಶಂಕಿತರನ್ನು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿ ನಿಗಾ ವಹಿಸಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು 21 ದಿನಗಳ ಕಾಲ ಐಸೊಲೇಟ್ ಮಾಡಿ ನಿಗಾ ವಹಿಸಬೇಕು. ಮಂಕಿಪಾಕ್ಸ್​ ವೈರಸ್ ಕಂಡುಬಂದರೆ ಕ್ವಾರಂಟೈನ್ ಆಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕೇರಳದಲ್ಲಿ ಮಂಕಿಪಾಕ್ಸ್‌ ಸೋಂಕಿನ 2 ಪ್ರಕರಣ ಪತ್ತೆಯಾಗಿದ್ದು, ದೇಶದ ಜನತೆಯಲ್ಲಿ ಭೀತಿ ಹುಟ್ಟಿಸಿದೆ. ನೆರೆಯ ರಾಜ್ಯದಲ್ಲಿ ಈ ಸೋಂಕು ಪತ್ತೆಯಾಗಿರುವುದು ಕರ್ನಾಟಕದಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಿಸಿ, ಮಾರ್ಗಸೂಚಿ ಹೊರಡಿಸಿದೆ.

ಮಂಕಿಪಾಕ್ಸ್ ಹೇಗೆ ಹರಡುತ್ತದೆ?:

– ಇದು ಸಿಡುಬು ವೈರಸ್‌ಗೆ ನಿಕಟ ಸಂಬಂಧ ಹೊಂದಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ಹರಡಬಹುದು.

– ಸಾಮಾನ್ಯವಾಗಿ ದದ್ದು, ಹುಣ್ಣುಗಳು ಹೊಂದಿರುವ ವ್ಯಕ್ತಿಯೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಒಳಗಾದರೆ ಮನುಷ್ಯನಿಂದ ಮನುಷ್ಯನಿಗೆ ಈ ಸೋಂಕು ಹರಡುತ್ತದೆ.

– ಇದು ನಿಕಟ ಲೈಂಗಿಕ ಸಂಪರ್ಕದ ಸಮಯದಲ್ಲಿ ಉಸಿರಾಟದ ಹನಿಗಳು ಅಥವಾ ಮೌಖಿಕ ದ್ರವಗಳ ಮೂಲಕವೂ ಹರಡಬಹುದು (ಚುಂಬನ; ಮೌಖಿಕ, ಗುದ, ಅಥವಾ ಯೋನಿ ಸಂಭೋಗ).

– ಮಂಕಿಪಾಕ್ಸ್ ವೈರಸ್‌ನಿಂದ ಕಲುಷಿತಗೊಂಡಿರುವ ಬಟ್ಟೆಗಳು, ವಸ್ತುಗಳು ಅಥವಾ ಮೇಲ್ಮೈಗಳೊಂದಿಗಿನ ಸಂಪರ್ಕವು (ಬಟ್ಟೆ, ಹಾಸಿಗೆ ಅಥವಾ ಟವೆಲ್‌ಗಳಂತಹವು) ಸಹ ಸೋಂಕು ಹರಡಲು ಕಾರಣವಾಗಬಹುದು.

ಇದನ್ನೂ ಓದಿ: Monkeypox: ಭಾರತಕ್ಕೂ ಲಗ್ಗೆಯಿಟ್ಟ ಮಂಕಿಪಾಕ್ಸ್​; ಈ ಸೋಂಕಿನಿಂದ ಪಾರಾಗಲು ಏನು ಮಾಡಬೇಕು?

ಮಂಕಿಪಾಕ್ಸ್‌ನ ಲಕ್ಷಣಗಳು?:

ಮಾನವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಸಿಡುಬಿನ ಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ. ಮಂಕಿಪಾಕ್ಸ್​ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಬಳಲಿಕೆಯಿಂದ ಪ್ರಾರಂಭವಾಗುತ್ತದೆ. ಸಿಡುಬು ಮತ್ತು ಮಂಕಿಪಾಕ್ಸ್ ರೋಗಲಕ್ಷಣಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳು ಊದಿಕೊಳ್ಳಲು ಕಾರಣವಾಗುತ್ತದೆ (ಲಿಂಫಡೆನೋಪತಿ), ಆದರೆ ಸಿಡುಬು ಇದನ್ನು ಮಾಡುವುದಿಲ್ಲ. ಮಂಕಿಪಾಕ್ಸ್‌ಗೆ ಅವಧಿಯು (ಸೋಂಕಿನಿಂದ ರೋಗಲಕ್ಷಣಗಳವರೆಗೆ) ಸಾಮಾನ್ಯವಾಗಿ 7-14 ದಿನಗಳು ಅಥವಾ 5-21 ದಿನಗಳವರೆಗೆ ಇರುತ್ತದೆ.

Published On - 3:01 pm, Fri, 22 July 22