Monkeypox: ಭಾರತಕ್ಕೂ ಲಗ್ಗೆಯಿಟ್ಟ ಮಂಕಿಪಾಕ್ಸ್; ಈ ಸೋಂಕಿನಿಂದ ಪಾರಾಗಲು ಏನು ಮಾಡಬೇಕು?
Monkeypox Symptoms: ಮಂಕಿಪಾಕ್ಸ್ ವೈರಸ್ ಬಿರುಕು ಬಿಟ್ಟ ಚರ್ಮ, ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸಬಹುದು. ಸಾಮಾನ್ಯವಾಗಿ ಮಂಕಿಪಾಕ್ಸ್ ನಮ್ಮ ದೇಹದಲ್ಲಿ ಸುಮಾರು 1ರಿಂದ 2 ವಾರಗಳ ಕಾಲ ಇರುತ್ತದೆ.
ಬೆಂಗಳೂರು: ಪಕ್ಕದ ರಾಜ್ಯವಾದ ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ (Monkeypox Case) ಪತ್ತೆಯಾದ ಬಳಿಕ ಕರ್ನಾಟಕದಲ್ಲೂ ಈ ಸೋಂಕಿನ ಭೀತಿ ಹೆಚ್ಚಾಗಿದೆ. ಮೂರು ದಿನಗಳ ಹಿಂದೆ ಯುಎಇಯಿಂದ (UAE) ವಾಪಾಸ್ ಬಂದ ಕೇರಳದ 35 ವರ್ಷದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ತಗುಲಿರುವುದು ದೃಢಪಟ್ಟಿದೆ. ಈ ಸೋಂಕು ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಅಥವಾ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ, ಅವರ ದೇಹದ ದ್ರವಗಳು ಅಥವಾ ವೈರಸ್‌ನಿಂದ, ಕಲುಷಿತಗೊಂಡ ಯಾವುದೇ ವಸ್ತುವಿನ ಸಂಪರ್ಕದಿಂದ, ಚುಂಬನ, ಮುದ್ದಾಡುವುದು ಅಥವಾ ಲೈಂಗಿಕತೆಯಂತಹ ನಿಕಟ ದೈಹಿಕ ಸಂಪರ್ಕದ ಸಮಯದಲ್ಲಿ ಹರಡಬಹುದು. ಹಾಗಾದರೆ, ಈ ಮಂಕಿಪಾಕ್ಸ್ ರೋಗದಿಂದ ಪಾರಾಗಲು ನೀವು ಏನು ಮಾಡಬೇಕು?
ಸಿಡಿಸಿ ಪ್ರಕಾರ, ಮಂಕಿಪಾಕ್ಸ್ ವೈರಸ್ ಬಿರುಕು ಬಿಟ್ಟ ಚರ್ಮ, ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸಬಹುದು. ಸಾಮಾನ್ಯವಾಗಿ ಮಂಕಿಪಾಕ್ಸ್ ನಮ್ಮ ದೇಹದಲ್ಲಿ ಸುಮಾರು 1ರಿಂದ 2 ವಾರಗಳ ಕಾಲ ಇರುತ್ತದೆ. ಇದರ ಮೊದಲ ರೋಗಲಕ್ಷಣಗಳೆಂದರೆ ಜ್ವರ, ಶೀತ, ತಲೆನೋವು, ಸ್ನಾಯು ನೋವು. ಒಂದೆರಡು ದಿನಗಳ ನಂತರ ಮೈಮೇಲೆ ದದ್ದುಗಳು ಬೆಳೆಯಲು ಪ್ರಾರಂಭಿಸುತ್ತವೆ. ಮೊದಲು ಮುಖದಲ್ಲಿ ಉಂಟಾಗುವ ಗುಳ್ಳೆಗಳು ನಂತರ ದೇಹದ ಇತರ ಭಾಗಗಳಿಗೆ ಹರಡುತ್ತವೆ.
ಇದನ್ನೂ ಓದಿ: Kerala Monkeypox: ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ; ತಜ್ಞರ ತಂಡ ಕಳುಹಿಸಿದ ಕೇಂದ್ರ ಸರ್ಕಾರ
ಹೀಗಾಗಿ, ಬೇರೆ ದೇಶಕ್ಕೆ ಪ್ರಯಾಣ ಬೆಳೆಸಿ, ವಾಪಾಸಾದ ಜನರು ತಕ್ಷಣ ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಬೇಕು. ಹೀಗೆ 3 ವಾರಗಳವರೆಗೆ ಮನೆಯಲ್ಲೇ ಕ್ವಾರಂಟೈನ್ ಆಗಬೇಕು. ಮಂಕಿಪಾಕ್ಸ್ ಭಾರತವನ್ನು ತಲುಪಿರುವ ಹಿನ್ನೆಲೆಯಲ್ಲಿ ಈ ವೈರಸ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ತಜ್ಞರ ಸಲಹೆಗಳು ಇಲ್ಲಿವೆ.
ಮುಂಬೈ ಸೆಂಟ್ರಲ್‌ನ ವೊಕಾರ್ಡ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ಸ್ ಕನ್ಸಲ್ಟೆಂಟ್ ಡಾ. ಹನಿ ಸಾವ್ಲಾ ನೀಡಿರುವ ಸಲಹೆಯ ಪ್ರಕಾರ ಮಂಕಿಪಾಕ್ಸ್ ಹರಡದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಹೀಗಿದೆ.
– ಸೋಂಕಿಗೆ ಒಳಗಾಗಿರುವ ಶಂಕಿತ ಜನರೊಂದಿಗೆ ಚರ್ಮದ ಸಂಪರ್ಕ ಮಾಡುವುದನ್ನು ತಪ್ಪಿಸಿ. ಗುಳ್ಳೆಗಳನ್ನು ಹೊಂದಿರುವ ವ್ಯಕ್ತಿಯೊಂದಿಗೆ ಯಾವುದೇ ಸಂಪರ್ಕ ಮಾಡಬೇಡಿ.
– ಸೋಪ್ ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನೊಂದಿಗೆ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ.
– ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ತೋಳನ್ನು ಅಡ್ಡ ಇಟ್ಟುಕೊಳ್ಳಿ.
– ಶಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಸೈಂಗಿಕ ಕ್ರಿಯೆ ಮಾಡಬೇಡಿ.
– ಅನಾರೋಗ್ಯ ಇರುವ ರೋಗಿಯ ಮೈಯಿಂದ ಹೊರಹೊಮ್ಮುವ ಯಾವುದೇ ದ್ರವ ಅಥವಾ ವಸ್ತುವನ್ನು ಮುಟ್ಟಬೇಡಿ.
– ಮಾಂಸವನ್ನು ತಿನ್ನುವ ಮೊದಲು ಚೆನ್ನಾಗಿ ಬೇಯಿಸಿ.
ಇದನ್ನೂ ಓದಿ: Monkeypox: ಮಂಕಿಪಾಕ್ಸ್ ಕೂಡ ಲೈಂಗಿಕವಾಗಿ ಹರಡುವ ಇತರೆ ಸೋಂಕಿನಂತೆಯೇ ಎಂದ ತಜ್ಞರು
ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ಅಪರೂಪದ ಸೋಂಕು. ಇದು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಅರಣ್ಯ ಪ್ರದೇಶಗಳಲ್ಲಿ ಕೆಲವು ಪ್ರಾಣಿಗಳಿಂದ ಹಬ್ಬುತ್ತದೆ. ಮನುಷ್ಯರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಸಿಡುಬಿನ ಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ. ಮಂಕಿಪಾಕ್ಸ್ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಬಳಲಿಕೆಯಿಂದ ಪ್ರಾರಂಭವಾಗುತ್ತದೆ. ಸಿಡುಬು ಮತ್ತು ಮಂಕಿಪಾಕ್ಸ್ ರೋಗಲಕ್ಷಣಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳು ಊದಿಕೊಳ್ಳಲು ಕಾರಣವಾಗುತ್ತದೆ (ಲಿಂಫಡೆನೋಪತಿ), ಆದರೆ ಸಿಡುಬು ಇದನ್ನು ಮಾಡುವುದಿಲ್ಲ. ಮಂಕಿಪಾಕ್ಸ್‌ಗೆ ಅವಧಿಯು (ಸೋಂಕಿನಿಂದ ರೋಗಲಕ್ಷಣಗಳವರೆಗೆ) ಸಾಮಾನ್ಯವಾಗಿ 7-14 ದಿನಗಳು ಅಥವಾ 5-21 ದಿನಗಳವರೆಗೆ ಇರುತ್ತದೆ.