Bakrid 2025: ತ್ಯಾಗದ ಪ್ರತೀಕವಾಗಿರುವ ಬಕ್ರೀದ್ ಹಬ್ಬ; ಮುಸ್ಲಿಂ ಬಾಂಧವರ ಈ ಪವಿತ್ರ ಹಬ್ಬ ಯಾವಾಗ?
ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಬಕ್ರೀದ್ ಕೂಡಾ ಒಂದು. ಈ ಹಬ್ಬವು ಪ್ರವಾದಿ ಇಬ್ರಾಹಿಂ ಅವರ ಸಮರ್ಪಣಾ ಮನೋಭಾವ ಮತ್ತು ಅವರು ದೇವರಿಗಾಗಿ ಮಗ ಇಸ್ಮಾಯಿಲ್‌ನನ್ನು ತ್ಯಾಗ ಮಾಡಲು ಸಿದ್ಧರಿದ್ದ ಅಚಲ ಭಕ್ತಿ ಮತ್ತು ತ್ಯಾಗವನ್ನು ನೆನಪಿಸುವ ಹಬ್ಬ ಇದಾಗಿದೆ. ಇಸ್ಲಾಂ ಧರ್ಮದಲ್ಲಿ ಈ ಹಬ್ಬಕ್ಕೆ ಬಹಳ ಮಹತ್ವವಿದ್ದು, 6 ಅಥವಾ 7 ಈ ಬಾರಿ ತ್ಯಾಗದ ಪ್ರತೀಕವಾಗಿರುವ ಈ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ ಎಂಬುದರ ಮಾಹಿತಿಯನ್ನು ತಿಳಿಯಿರಿ.

ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬ ಮುಸ್ಲಿಂ (Bakrid Festival) ಬಾಂಧವರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ನಂತರ ಬರುವ ದೊಡ್ಡ ಹಬ್ಬ ಇದಾಗಿದ್ದು, ತ್ಯಾಗದ ಸಂಕೇತವಾಗಿರುವ ಈ ಹಬ್ಬವನ್ನು ಪ್ರಪಂಚದಾದ್ಯಂತ ಮುಸ್ಲಿಮರು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಪ್ರತಿವರ್ಷ ದುಲ್-ಅಜ್-ಹಿಜ್ಜಾದ ಹತ್ತನೇ ದಿನದಂದು, ಪ್ರಪಂಚದಾದ್ಯಂತ ಮುಸ್ಲಿಮರು ಈದ್-ಉಲ್-ಅಧಾ (Eid-ul-Adha) ಅಂದರೆ ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ದಿನ ಸಾಮಾನ್ಯವಾಗಿ ಕುರಿ, ಮೇಕೆಯನ್ನು ದೇವರಿಗಾಗಿ ಬಲಿ ಕೊಡಲಾಗುತ್ತದೆ. ಈ ಬಾರಿ ಹಬ್ಬ ಯಾವಾಗ? 6 ಅಥವಾ 7 ಇದರಲ್ಲಿ ಯಾವ ದಿನದಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ ಎಂಬ ಗೊಂದಲ ಅನೇಕರಲ್ಲಿದೆ. ಹಾಗಿದ್ದರೆ ಶುಕ್ರವಾರ ಅಥವಾ ಶನಿವಾರ ಭಾರತದಲ್ಲಿ ಈ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ, ಇದರ ನಿಖರವಾದ ದಿನಾಂಕವನ್ನು ತಿಳಿಯಿರಿ.
ಭಾರತದಲ್ಲಿ ಬಕ್ರೀದ್ ಹಬ್ಬ ಯಾವಾಗ?
ಬಕ್ರೀದ್ ಹಬ್ಬ ಎಂದು ಕರೆಯಲ್ಪಡುವ ಈದ್-ಉಲ್-ಅಧಾವನ್ನು ಭಾರತದಲ್ಲಿ ಜೂನ್ 7, 2025 ರಂದು ಅರ್ಧಚಂದ್ರದ ದರ್ಶನದ ನಂತರ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಕ್ರಗಳನ್ನು ಆಧರಿಸಿರುವುದರಿಂದ, ಕೆಲವು ದೇಶಗಳಲ್ಲಿ ಈ ಹಬ್ಬದ ದಿನಾಂಕದಲ್ಲಿ ಬದಲಾವಣೆಗಳಿರುತ್ತವೆ. ಸೌದಿ ಅರೇಬಿಯಾ, ಓಮ್, ಯುಎಇ ಮತ್ತು ಇಂಡೋನೇಷ್ಯಾಗಳಲ್ಲಿ ಈ ಹಬ್ಬವನ್ನು ಒಂದು ದಿನದ ಮುಂಚಿತವಾಗಿ ಅಂದರೆ ಜೂನ್ 06 ರಂದು ಆಚರಿಸಲಾಗುತ್ತದೆ. ಅದೇ ಭಾರತ, ನೈಜೀರಿಯಾ, ಮೆರಾಕೊ, ಬಾಂಗ್ಲಾದೇಶ, ಮಲೇಷ್ಯಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಸೇರಿದಂತೆ ಕೆಲವು ದೇಶಗಳಲ್ಲಿ ಜೂನ್ 07 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್ ಹಿಜ್ಜಾದ 10 ನೇ ದಿನದಂದು ಬಕ್ರೀದ್ ಹಬ್ಬ ಬರುತ್ತದೆ. ಈ ಹಬ್ಬವು ಚಂದ್ರನ ದರ್ಶನವನ್ನು ಅವಲಂಬಿಸಿರುವುದರಿಂದ ಹಬ್ಬದ ನಿಖರವಾದ ದಿನಾಂಕ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ.
ಬಕ್ರೀದ್ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?
ಅಲ್ಲಾಹನಿಗೆ ನಿಷ್ಠೆ ಮತ್ತು ಸಂಪೂರ್ಣ ಸಮರ್ಪಣೆಯನ್ನು ತೋರಿಸಲು ಬಕ್ರೀದ್ ಆಚರಿಸಲಾಗುತ್ತದೆ. ಜೊತೆಗೆ ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ನೆನಪಿಗಾಗಿ ಆಚರಿಸಲಾಗುತ್ತದೆ. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಅಲ್ಲಾಹನು ಒಂದು ಬಾರಿ ತನ್ನ ಭಕ್ತರು ದಾನ, ತ್ಯಾಗದ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸುವರು ಎಂದು ನೋಡಬೇಕೆನ್ನುವ ನಿಟ್ಟಿನಲ್ಲಿ ಹಜರತ್ ಇಬ್ರಾಹಿಂ ಅವರ ಕನಸಿನಲ್ಲಿ ಬಂದು ನಿನಗೆ ಇಷ್ಟವಾದ ಒಂದು ವಸ್ತುವನ್ನು ನನಗೆ ನೀಡಬೇಕು ಎಂದು ಕೇಳಿಕೊಳ್ಳುತ್ತಾರೆ. ಆಗ ಪ್ರವಾದಿ ಇಬ್ರಾಹಿಂ ತನ್ನಿಷ್ಟದ ಮಗ ಇಸ್ಮಾಯಿಲ್‌ನನ್ನೇ ಅಲ್ಲಾಹನಿಗೆ ತ್ಯಾಗ ಮಾಡಲು ನಿರ್ಧರಿಸಿದರು. ಹೀಗೆ ಇಬ್ರಾಹಿಂ ತನ್ನ ಮಗನನ್ನು ಬಲಿ ಕೊಡಲು ಮುಂದಾದಾಗ ಅಲ್ಲಾಹನು ಅವರ ನಿಷ್ಠೆಯನ್ನು ಮೆಚ್ಚಿ ಇಸ್ಮಾಯಿಲ್ ಬದಲಿಗೆ ಕುರಿಯನ್ನು ಬಲಿ ಕೊಡಿ ಎಂದು ಕೇಳಿಕೊಂಡರಂತೆ. ಹಾಗಾಗಿ ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಮತ್ತು ಸಮರ್ಪಣೆಯ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮತ್ತು ಈ ಹಬ್ಬದ ದಿನ ಕುರಿ ಅಥವಾ ಮೇಕೆಯನ್ನು ಸಹ ಬಲಿ ಕೊಡಲಾಗುತ್ತದೆ.
ಇದನ್ನೂ ಓದಿ: ಹಸಿರೇ ಉಸಿರು; ಪ್ರಕೃತಿ ಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಬಕ್ರೀದ್ ಹಬ್ಬದ ಮಹತ್ವ:
ಸಾಮಾನ್ಯವಾಗಿ ಪವಿತ್ರ ರಂಜಾನ್ ತಿಂಗಳ 70 ದಿನಗಳ ನಂತರ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ತ್ಯಾಗದ ಸಂದೇಶವನ್ನು ಸಾರುತ್ತದೆ. ಅಲ್ಲದೆ ಈ ದಿನ ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸಲಾಗುತ್ತದೆ.
ಮುಸ್ಲಿಮರು ಬಕ್ರೀದ್ ಹಬ್ಬದಂದು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಾಣಿಗಳನ್ನು ಕುರಿ, ಮೇಕೆಯನ್ನು ಬಲಿ ಕೊಡುತ್ತಾರೆ. ಬಲಿ ಕೊಟ್ಟ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಿ. ಮೊದಲನೆ ಭಾಗವನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ, ಎರಡನೆಯ ಭಾಗವನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ನೀಡಲಾಗುತ್ತದೆ. ಮೂರನೇ ಭಾಗವನ್ನು ಕುಟುಂಬಕ್ಕಾಗಿ ಇಡಲಾಗುತ್ತದೆ. ಅದಲ್ಲದೆ ಈ ದಿನ ಮಸೀದಿಗಳಲ್ಲಿ ಅಥವಾ ಮೈದಾನಗಳಲ್ಲಿ ನಮಾಜ್ ಮಾಡುವ ಮೂಲಕ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಹಾಗೂ ಪರಸ್ಪರ ಈದ್ ಮುಬಾರಕ್ ಶುಭಾಶಯಗಳನ್ನು ತಿಳಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Thu, 5 June 25








