Monkeypox: ಇಂಗ್ಲೆಂಡ್‌ನಲ್ಲಿ 36 ಹೊಸ ಮಂಕಿಪಾಕ್ಸ್ ವೈರಸ್ ಪತ್ತೆ; ಲೈಂಗಿಕ ಕ್ರಿಯೆಯಿಂದಲೂ ಹರಡುತ್ತಂತೆ ಈ ರೋಗ!
ಇಂಗ್ಲೆಂಡ್‌ನಲ್ಲಿ ಮೇ 7ರಿಂದ ಇದುವರೆಗೆ ಒಟ್ಟು 56 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ. ಹಾಗೇ, ಮಂಕಿಪಾಕ್ಸ್ ಲೈಂಗಿಕ ಕ್ರಿಯೆಯಿಂದಲೂ ಹರಡುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಲಂಡನ್: ಇಂಗ್ಲೆಂಡ್‌ನಲ್ಲಿ ಮತ್ತೆ 36 ಹೊಸ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ. ಸ್ಕಾಟ್ಲೆಂಡ್‌ನಲ್ಲಿ ಮೊದಲ ಮಂಕಿಪಾಕ್ಸ್ ಸೋಂಕಿನ (Monkeypox Virus) ಪ್ರಕರಣವನ್ನು ಪತ್ತೆಹಚ್ಚಲಾಗಿದೆ ಎಂದು ಇಂಗ್ಲೆಂಡ್ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಇಂಗ್ಲೆಂಡ್‌ನಲ್ಲಿ ಮೇ 7ರಿಂದ ಇದುವರೆಗೆ ಒಟ್ಟು 56 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ ಎಂದು ಮಾಹಿತಿ ನೀಡಿದೆ. ಹಾಗೇ, ಮಂಕಿಪಾಕ್ಸ್ ಲೈಂಗಿಕ ಕ್ರಿಯೆಯಿಂದಲೂ ಹರಡುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ತನ್ನ ಸರ್ಕಾರವು ಮಂಕಿಪಾಕ್ಸ್ ಹರಡುವಿಕೆಯ ಸಂದರ್ಭಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಹೇಳಿದ್ದಾರೆ. ಮಂಕಿಪಾಕ್ಸ್ ಬಹಳ ಅಪರೂಪದ ಕಾಯಿಲೆಯಾಗಿದೆ. ಇಲ್ಲಿಯವರೆಗೆ ಇದರ ಪರಿಣಾಮಗಳು ತುಂಬಾ ಗಂಭೀರವಾಗಿದೆ ಎಂದು ತೋರುತ್ತಿಲ್ಲವಾದರೂ ನಾವು ಅದರ ಮೇಲೆ ನಿಗಾ ಇಡುವುದು ಮುಖ್ಯವಾಗಿದೆ ಎಂದು ಜಾನ್ಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಂಕಿಪಾಕ್ಸ್ ಸೋಂಕು ಸಾಮಾನ್ಯವಾಗಿ ಜನರ ನಡುವೆ ಸುಲಭವಾಗಿ ಹರಡುವುದಿಲ್ಲ. ಜಾಗತಿಕವಾಗಿ ಇತರ ದೇಶಗಳಲ್ಲಿ ಮಂಕಿಪಾಕ್ಸ್ನ ಮತ್ತಷ್ಟು ಪ್ರಕರಣಗಳನ್ನು ಗುರುತಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ಮತ್ತು ಯುರೋಪ್‌ನಲ್ಲಿ ಇತ್ತೀಚಿನ ಪ್ರಕರಣಗಳ ಗಮನಾರ್ಹ ಪ್ರಮಾಣವು ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರಲ್ಲಿ ಕಂಡುಬಂದಿದೆ. ಆದ್ದರಿಂದ ಈ ವರ್ಗದ ಪುರುಷರಲ್ಲಿ ರೋಗಲಕ್ಷಣಗಳ ಬಗ್ಗೆ ಎಚ್ಚರವಾಗಿರಲು ವಿಶೇಷವಾಗಿ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Monkeypox: ಬೆಲ್ಜಿಯಂನಲ್ಲಿ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ಪತ್ತೆ | ರೋಗಿಗಳಿಗೆ 21 ದಿನಗಳ ಕಾಲ ಕ್ವಾರಂಟೈನ್
ಯುನೈಟೆಡ್ ಸ್ಟೇಟ್ಸ್‌ನ ಮ್ಯಾಸಚೂಸೆಟ್ಸ್ನಲ್ಲಿ ಮಂಕಿಪಾಕ್ಸ್ನ ಅಪರೂಪದ ಪ್ರಕರಣ ವರದಿಯಾಗಿದೆ. ಇದು ಈ ವರ್ಷ ವರದಿಯಾದ ಮೊದಲ ಪ್ರಕರಣವಾಗಿದೆ. ಹೊಸ ಪ್ರಕರಣಗಳನ್ನು ಪರೀಕ್ಷಿಸಿದ ನಂತರ, ಮಂಕಿಪಾಕ್ಸ್ ವೈರಸ್ ಲೈಂಗಿಕ ಕ್ರಿಯೆಯ ಮೂಲಕವೂ ಹರಡುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಆರೋಗ್ಯ ಅಧಿಕಾರಿಗಳ ಪ್ರಕಾರ, ಯುರೋಪ್‌ನಲ್ಲಿ ತಿಳಿದಿರುವ ಹೆಚ್ಚಿನ ಪ್ರಕರಣಗಳು ನಿರಂತರವಾಗಿ ಲೈಂಗಿಕ ಸಂಬಂಧ ಹೊಂದಿರುವ ಪುರುಷರಲ್ಲಿವೆ. ಈ ಹಿಂದೆ ಆರೋಗ್ಯ ಸಂಸ್ಥೆ ತುರ್ತು ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಡೇವಿಡ್ ಹೇಮನ್ ರೋಗದ ಹರಡುವಿಕೆಯನ್ನು ವಿವರಿಸುವ ಪ್ರಮುಖ ಸಿದ್ಧಾಂತವೆಂದರೆ ಲೈಂಗಿಕ ಸಂಬಂಧ ಎಂದಿದ್ದಾರೆ. ಸ್ಪೇನ್ ಮತ್ತು ಬೆಲ್ಜಿಯಂನಲ್ಲಿ ಲೈಂಗಿಕ ಸೋಂಕು ಹರಡಿರುವುದು ತಿಳಿದುಬಂದಿದೆ. ಲೈಂಗಿಕ ಚಟುವಟಿಕೆಯು ನಿಕಟ ಸಂಪರ್ಕವನ್ನು ಒಳಗೊಂಡಿರುತ್ತದೆ. ಹಾಗೇ, ಅನಾರೋಗ್ಯದ ವ್ಯಕ್ತಿ, ಅವರ ಬಟ್ಟೆ ಅಥವಾ ಬೆಡ್‌ಶೀಟ್‌ಗಳ ನಿಕಟ ಸಂಪರ್ಕದ ಮೂಲಕ ಯಾರಾದರೂ ಮಂಕಿಪಾಕ್ಸ್ ಸೋಂಕಿಗೆ ಒಳಗಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದನ್ನೂ ಓದಿ: Monkeypox: ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ರೂ ಆಫ್ರಿಕಾದ ಹೊರಗೂ ಹಬ್ಬುತ್ತಿದೆ ಮಂಕಿಪಾಕ್ಸ್
ಇಲ್ಲಿಯವರೆಗೆ, ಕೆನಡಾ, ಸ್ಪೇನ್, ಇಸ್ರೇಲ್, ಫ್ರಾನ್ಸ್, ಸ್ವಿಜರ್ಲೆಂಡ್, ಅಮೆರಿಕಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ 12 ದೇಶಗಳಲ್ಲಿ 90ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳನ್ನು ದಾಖಲಿಸಿದೆ. ಮಂಗನ ಕಾಯಿಲೆಯ ಪ್ರಕರಣಗಳು ಇಲ್ಲಿಯವರೆಗೆ ಸೌಮ್ಯವಾಗಿದ್ದು, ಯಾವುದೇ ಸಾವುಗಳು ವರದಿಯಾಗಿಲ್ಲ. ಇದುವರೆಗೂ ಮಂಕಿಪಾಕ್ಸ್ ಆರೋಗ್ಯವಂತ ವ್ಯಕ್ತಿಯ ದೇಹವನ್ನು ಉಸಿರಾಟದ ಪ್ರದೇಶ, ಗಾಯಗಳು, ಮೂಗು, ಬಾಯಿ ಅಥವಾ ಕಣ್ಣುಗಳ ಮೂಲಕ ಪ್ರವೇಶಿಸಬಹುದು ಎಂದು ತಜ್ಞರು ಭಾವಿಸಿದ್ದರು. ಆದರೆ ಹೊಸ ಪ್ರಕರಣಗಳನ್ನು ಪರೀಕ್ಷಿಸಿದ ನಂತರ, ಮಂಕಿ ವೈರಸ್ ಲೈಂಗಿಕ ಕ್ರಿಯೆಯ ಮೂಲಕವೂ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ನೀವು ಮಂಕಿ ಪಾಕ್ಸ್ ಹೊಂದಿರುವ ಯಾರೊಂದಿಗಾದರೂ ಲೈಂಗಿಕ ಕ್ರಿಯೆ ನಡೆಸಿದರೆ, ಅವರ ಸಂಗಾತಿಗೂ ಮಂಕಿ ಪಾಕ್ಸ್ ಬರುವ ಸಾಧ್ಯತೆಯಿದೆ ಎಂದು ತಜ್ಞರ ವಿಭಾಗವೊಂದು ತಿಳಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Tue, 24 May 22