ಭೂಮಿಗೆ ಬರುತ್ತಿದ್ದಾನೆ ಮಹಾಬಲಿ, ಮಹತ್ವದ ಸೂಚನೆ ನೀಡಿದೆ ಈ ಕಪ್ಪೆ
Mahabali Frog: ವಿಚಿತ್ರವಾಗಿರುವ ನೇರಳೆ ಜೀವಿಯೊಂದು ವರ್ಷಕ್ಕೊಮ್ಮೆ ತನ್ನ ಕಾರ್ಯವನ್ನು ಕೈಗೊಳ್ಳಲು ಭೂಗತ ಗುಹೆಯಿಂದ ಹೊರಬರುತ್ತದೆ. ಹೀಗೆ ಭೂಮಿಯ ಒಳಗಿಂದ ಹೊರಬರುವ ಪ್ರಾಣಿಯನ್ನು ನೇರಳೆ ಕಪ್ಪೆ ಅಥವಾ ಮಹಾಬಲಿ ಕಪ್ಪೆ ಎಂದು ಕರೆಯಲಾಗುತ್ತದೆ. ಇದು ಮಳೆಗಾಲದ ಸಮಯದಲ್ಲಿ ಒಮ್ಮೆ ಮಾತ್ರ ಮೇಲಕ್ಕೆ ಬಂದು ದರುಶನವನ್ನು ನೀಡುತ್ತದೆ! ಹಾಗಾದರೆ ಇದು ಎಲ್ಲಿರುತ್ತದೆ? ಯಾಕೆ ಈ ಸಮಯದಲ್ಲಿ ಮೇಲೆ ಬರುತ್ತದೆ? ಬೇರೆ ಕಪ್ಪೆಗಳಿಗಿಂತ ಇದು ಹೇಗೆ ಭಿನ್ನವಾಗಿದೆ ಎಂಬುದರ ಬಗ್ಗೆ ಸಾಮಾನ್ಯವಾಗಿ ಕುತೂಹಲ ಹುಟ್ಟಬಹುದು. ಇಂತಹ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ.

ಪ್ರಕೃತಿಯಲ್ಲಿ ನಡೆಯುವ ಕೆಲವು ಕುತೂಹಲಕಾರಿ ಘಟನೆಗಳು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಪ್ರತಿನಿತ್ಯವೂ ನಮ್ಮ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿರುತ್ತದೆ. ಇಂತಹ ವಿಚಿತ್ರ ಘಟನೆಗಳಿಗೆ ಪುಷ್ಟಿ ಕೊಡುವ, ವಿಜ್ಞಾನಕ್ಕೇ ಸವಾಲೆಸೆಯುವ ಘಟನೆ ಪಶ್ಚಿಮ ಘಟ್ಟಗಳ ಸುತ್ತ ಮುತ್ತ ಕಂಡು ಬರುತ್ತದೆ. ಅದೇನೆಂದರೆ ಒಂದು ಕಪ್ಪೆಯ (frog) ವರ್ಗ ಇದನ್ನು ನೇರಳೆ ಕಪ್ಪೆ ಅಥವಾ ಮಹಾಬಲಿ ಕಪ್ಪೆ (Mahabali frog) ಎಂದು ಕರೆಯಲಾಗುತ್ತದೆ. ಇದು ವರ್ಷಕ್ಕೆ ಒಮ್ಮೆ ಮಾತ್ರ ಭೂಮಿಗೆ ಬಂದು ಹೋಗುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷ ಕೇರಳದಲ್ಲಿ ಓಣಂ (Onam) ಆರಂಭಕ್ಕೂ ಮೊದಲು ಕಾಣಿಸಿಕೊಳ್ಳುತ್ತದೆ ಎನ್ನಲಾದ ಈ ಕಪ್ಪೆಗಳು ಇಲ್ಲಿನವರಿಗೆ ಶುಭ ಸೂಚಕವಾಗಿದೆ. ಇದು ಮಳೆಗಾಲದ ಸಮಯದಲ್ಲಿ ಒಮ್ಮೆ ಮಾತ್ರ ಮೇಲಕ್ಕೆ ಬಂದು ದರುಶನವನ್ನು ನೀಡುತ್ತದೆ! ಹಾಗಾದರೆ ಇದು ಎಲ್ಲಿರುತ್ತದೆ? ಯಾಕೆ ಈ ಸಮಯದಲ್ಲಿ ಮೇಲೆ ಬರುತ್ತದೆ? ಬೇರೆ ಕಪ್ಪೆಗಳಿಗಿಂತ ಇದು ಹೇಗೆ ಭಿನ್ನವಾಗಿದೆ ಎಂಬುದರ ಬಗ್ಗೆ ಸಾಮಾನ್ಯವಾಗಿ ಕುತೂಹಲ ಹುಟ್ಟಬಹುದು. ಇಂತಹ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ.
ಸಂಶೋಧಕರು ಕಂಡುಕೊಂಡ ಮಾಹಿತಿಯ ಪ್ರಕಾರ, ಅಳಿವಿನಂಚಿನಲ್ಲಿರುವ ಈ ಮಹಾಬಲಿ ಅಥವಾ ನೇರಳೆ ಕಪ್ಪೆ (ನಾಸಿಕಾಬಟ್ರಾಕಸ್ ಸಹ್ಯಾಡ್ರೆನ್ಸಿಸ್) ಮಳೆಗಾಲದ ಸಮಯದಲ್ಲಿ ಅಂದರೆ ವರ್ಷಕ್ಕೆ ಒಂದು ಬಾರಿ ಸಂತಾನೋತ್ಪತ್ತಿ ಮಾಡಲು ಭೂಮಿಯ ಮೇಲ್ಮೈಗೆ ಬರುತ್ತದೆ. ಮಣ್ಣಿನ ಬಿಲಗಳಿಂದ ಹೊರಬರುವ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಗಳನ್ನು ಹುಡುಕುತ್ತವೆ, ಅವು ಗಂಡು ಕಪ್ಪೆಗಳಿಗಿಂತ ಸುಮಾರು ಮೂರು ಪಟ್ಟು ದೊಡ್ಡದಾಗಿರುತ್ತವೆ ಮತ್ತು ಮಾಗಿದ ಬಿಳಿ ಬದನೆಗಳ ಬಣ್ಣದ್ದಾಗಿರುತ್ತವೆ. ಬಳಿಕ ಇವು ಸಂಯೋಗ ನಡೆಸಿ ಸಾವಿರಾರು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ಇಟ್ಟು ಭೂಮಿಯ ಆಳಕ್ಕೆ ಮರಳುತ್ತದೆ. ಸಾಮಾನ್ಯವಾಗಿ ಈ ಕಪ್ಪೆಗಳು ಪಶ್ಚಿಮ ಘಟ್ಟಗಳ ಬೆಚ್ಚಗಿನ ಪ್ರದೇಶಗಳಲ್ಲಿ ವಾಸ ಮಾಡುತ್ತವೆ ಎನ್ನಲಾಗುತ್ತದೆ. ವರ್ಷದ 364 ದಿನಗಳ ವರೆಗೆ ಈ ಕಪ್ಪೆಗಳು ಭೂಗತವಾಗಿರುತ್ತವೆ. ಯಾರ ಕಣ್ಣಿಗೂ ಬೀಳುವುದಿಲ್ಲ ಇನ್ನೇನು ಮಳೆ ಆರಂಭವಾದ ಮೇಲೆ ಮೊಟ್ಟೆ ಇಡಲು ವರ್ಷಕ್ಕೆ ಒಮ್ಮೆ ಹೊರಗೆ ಬರುತ್ತವೆ.
ಮಹಾಬಲಿ ಕಪ್ಪೆಗಳು ಹೇಗಿರುತ್ತವೆ?
ಇದು ಎಲ್ಲ ಕಪ್ಪಗಳಂತೆ ಜಿಗಿಯುವುದಿಲ್ಲ ಏಕೆಂದರೆ ಅದರ ಹಿಂಗಾಲುಗಳು ಚಿಕ್ಕದಾಗಿರುವ ಕಾರಣ ಇದಕ್ಕೆ ಎಲ್ಲ ಕಪ್ಪೆಗಳಂತೆ ಜಿಗಿಯಲು ಬರುವುದಿಲ್ಲ. ಇದರ ದೇಹವು ಸುಮಾರು ಏಳು ಸೆಂಟಿಮೀಟರ್ ನಷ್ಟು ಉದ್ದವಿದ್ದು ಚಿಕ್ಕ ಕಾಲುಗಳನ್ನು ಹೊಂದಿದ್ದು, ಕಡು ಬಣ್ಣದಲ್ಲಿರುತ್ತದೆ. ನೋಡುವುದಕ್ಕೆ ಸ್ವಲ್ಪ ಉಬ್ಬಿಕೊಂಡಿರುವಂತೆ ಕಾಣುತ್ತದೆ. ಇದರ ಮೊನಚಾದ ಮೂಗುಗಳಿಂದಾಗಿ ಹಂದಿ ಮೂತಿ ಕಪ್ಪೆ ಎಂದೂ ಕರೆಯುತ್ತಾರೆ. ದಪ್ಪ ಸ್ನಾಯುಗಳನ್ನು ಹೊಂದಿರುವ ಸಣ್ಣ ಕಾಲುಗಳು ಮತ್ತು ತೋಳುಗಳು ಮಣ್ಣಿನಲ್ಲಿ ಅಗೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಾವಿನ ಹಣ್ಣುತಿಂದು ಗೊರಟೆ ಬಿಸಾಡುವ ಮುನ್ನ ಅದರ ಪ್ರಯೋಜನ ತಿಳಿದುಕೊಳ್ಳಿ
ಮಹಾಬಲಿ ಕಪ್ಪೆಗಳು ಹೆಚ್ಚಾಗಿ ಕಂಡು ಬರದಿರಲು ಕಾರಣವೇನು?
ಇದನ್ನು ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟದ (IUCN) ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವಂತೆ ಪಟ್ಟಿ ಮಾಡಲಾಗಿದೆ. ಇವು ನದಿಗಳು ಮತ್ತು ತೊರೆಗಳ ಬಳಿ ಮಣ್ಣಿನಲ್ಲಿ ವಾಸಿಸುತ್ತವೆ. ಆಹಾರಕ್ಕಾಗಿ ಎರೆಹುಳುಗಳು, ಗೆದ್ದಲುಗಳು, ಇರುವೆಗಳು ಮತ್ತು ಸಣ್ಣ ಕೀಟಗಳನ್ನು ತಿನ್ನುತ್ತವೆ. ಅರಣ್ಯ ಇಲಾಖೆಯ ಶಿಫಾರಸಿನಂತೆ ಮಹಾಬಲಿ ಕಪ್ಪೆಯನ್ನು ರಾಜ್ಯದ ಅಧಿಕೃತ ಕಪ್ಪೆ ಎಂದು ಘೋಷಿಸಲು ಕ್ರಮಕೈಗೊಳ್ಳಲಾಗಿದೆ. ಇದು ಒಂದು ವಿಶಿಷ್ಟ ಪ್ರಭೇದವಾಗಿದ್ದು, ದಕ್ಷಿಣ ಪಶ್ಚಿಮ ಘಟ್ಟಗಳ ಈ ಭಾಗಕ್ಕೆ ಸ್ಥಳೀಯವಾಗಿದ್ದು, ಬೇರೆಲ್ಲಿಯೂ ಕಂಡುಬಂದಿಲ್ಲ. 2003 ರಲ್ಲಿ ಕೇರಳದ ಕಾಡುಗಳಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದವು. ಮನುಷ್ಯ ಮಾಡುತ್ತಿರುವ ಅರಣ್ಯನಾಶ ಮತ್ತು ಅರಣ್ಯ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸುತ್ತಿರುವುದು, ಪ್ರಾಣಿಗಳ ಆವಾಸ ಸ್ಥಾನಗಳನ್ನು ಕಬಳಿಸುತ್ತಿರುವುದು ಇವುಗಳ ಅವನತಿಗೆ ಕಾರಣವಾಗಿದೆ. ಅಲ್ಲದೆ ಇವು ಸಾವಿರಾರು ಮೊಟ್ಟೆ ಇಟ್ಟರೂ ಕೂಡ ಅವುಗಳಲ್ಲಿ ಎಷ್ಟು ಬದುಕುತ್ತವೆ, ಎಷ್ಟು ಗಾಳಿ ಮಳೆಗೆ ಅಥವಾ ಇನ್ನಿತರ ಪ್ರಾಣಿಗಳ ಬಾಯಿಗೆ ಆಹಾರವಾಗುತ್ತದೆ ಎಂಬುದು ತಿಳಿಯುವುದಿಲ್ಲ ಹಾಗಾಗಿ ಈ ಎಲ್ಲಾ ಕಾರಣಗಳು ಕೂಡ ಇವುಗಳ ಅವನತಿಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








