ಯೌವನದಲ್ಲಿರುವಾಗಲೇ ತಲೆ ಬೋಳಾಗಬಹುದು ಎಂಬ ಚಿಂತೆಯೇ? ಇಲ್ಲಿದೆ ಪರಿಹಾರ
ಕೂದಲು ಉದುರುವ ಸಮಸ್ಯೆ ಕಾಡುತ್ತಿದ್ದರೆ, ತಲೆಬುರುಡೆ ಸಂಪೂರ್ಣವಾಗಿ ಬೋಳಾಗಬಹುದು ಎಂಬ ಚಿಂತೆ ಕಾಡುತ್ತಿದ್ದರೆ ಭಯ ಪಡಬೇಡಿ. ಈ ರೀತಿಯ ಸಮಸ್ಯೆಗೆ ನಾನಾ ರೀತಿಯ ಔಷಧಿಗಳಿಂದ ಸಿಗದಿರುವ ಪರಿಹಾರ ಇಲ್ಲಿ ತಿಳಿಸಿರುವ ಮನೆಮದ್ದಿನಲ್ಲಿ ಸಿಗುತ್ತದೆ. ಈ ಮದ್ದನ್ನು ಮಾಡಲು ಹೆಚ್ಚು ಹೆಚ್ಚು ಹಣ ವ್ಯಯ ಮಾಡುವ ಅಗತ್ಯವಿಲ್ಲ. ಜೊತೆಗೆ ಇದನ್ನು ಬಳಸುವುದಕ್ಕೆ ಕಷ್ಟವೂ ಇಲ್ಲ ಕೇವಲ ಇಲ್ಲಿ ತಿಳಿಸಿರುವ ಎಣ್ಣೆ ತಂದು ಅದನ್ನು ಸರಿಯಾದ ಸಮಯದಲ್ಲಿ ಹೇಳಿದಂತೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಕೂದಲು ಉದುರುವುದು (Hair Fall) ಕೂಡ ಒಂದು. ಇದನ್ನು ತಡೆಯಲು ನಾನಾ ರೀತಿಯಲ್ಲಿ ಪ್ರಯತ್ನಿಸಿರುತ್ತೇವೆ ಆದರೂ ಕೂಡ ಈ ಸಮಸ್ಯೆಗೆ ಪರಿಹಾರ ಸಿಕ್ಕಿರುವುದಿಲ್ಲ. ಇರುವ ಕೂದಲು ದಿನದಿಂದ ದಿನಕ್ಕೆ ಉದುರಿ ತಲೆ ಬೋಳಾಗುತ್ತದೆಯೋ ಏನೋ ಎಂಬ ಭಯ ಕಾಡುತ್ತದೆ. ವಿವಿಧ ರೀತಿಯ ಔಷಧಿ ಮತ್ತು ಎಣ್ಣೆಗಳನ್ನು ಪ್ರಯತ್ನಿಸಿದರೂ ಕೂಡ ಸರಿಯಾದ ಫಲಿತಾಂಶ ಸಿಗುವುದಿಲ್ಲ. ಈ ರೀತಿ ನಿಮಗೂ ಆಗುತ್ತಿದ್ದರೆ ಸರಳ ಮನೆಮದ್ದು (Home Remedies) ಇಲ್ಲಿದೆ. ತಲೆಯ ಮೇಲಿನ ಎಲ್ಲಾ ಕೂದಲು ಉದುರಿ ಹೋಗುವ ಮೊದಲು ಈ ಅದ್ಭುತ ಸಲಹೆಗಳನ್ನು ಪಾಲಿಸಿ (Hair Fall Solution), ಕೂದಲನ್ನು ಚೆನ್ನಾಗಿ ಬೆಳೆಸಿಕೊಳ್ಳಿ.
ನಿಮ್ಮ ಆಹಾರ ಕ್ರಮ ಹೀಗಿರಲಿ
ವಾಸ್ತವದಲ್ಲಿ, ನಾವು ಸೇವನೆ ಮಾಡುವ ಆಹಾರ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಮ್ಮ ಚರ್ಮ ಆರೋಗ್ಯವಾಗಿ, ತಾಜಾತನದಿಂದ ಕಾಂತಿಯುತವಾಗಿ ಕಾಣಬೇಕೆಂದು ಬಯಸುವವರು ಅಥವಾ ನಿಮ್ಮ ಕೂದಲು ಬಲವಾಗಿ, ಉದ್ದವಾಗಿ ಚೆನ್ನಾಗಿರಬೇಕು ಎಂಬ ಆಸೆ ಇದ್ದರೆ ನಿಮ್ಮ ಆಹಾರದಲ್ಲಿ ಪೋಷಕಾಂಶಗಳಿಂದ ಕೂಡಿದ ಪದಾರ್ಥಗಳನ್ನು ಸೇವನೆ ಮಾಡಿ. ಇದು ಅತ್ಯಗತ್ಯ. ಇದಕ್ಕಾಗಿ, ನೀವು ಸೇವನೆ ಮಾಡುವ ಆಹಾರದಲ್ಲಿ ವಿಟಮಿನ್ ಬಿ 5 ಸಮೃದ್ಧವಾಗಿರುವ ಆಹಾರಗಳು ಅಂದರೆ, ಮೊಟ್ಟೆ ಮತ್ತು ಮೊಸರಿನಂತಹ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಆಹಾರದ ಹೊರತಾಗಿ ಕೂದಲಿನ ಬೆಳವಣಿಗೆಗೆ ಬೇರೆ ಯಾವ ರೀತಿಯಲ್ಲಿ ಪೋಷಣೆ ನೀಡಬಹುದು? ಇದಕ್ಕೆ ಉತ್ತರ ಇಲ್ಲಿದೆ.
ಕ್ಯಾಸ್ಟರ್ ಆಯಿಲ್ ಈ ರೀತಿ ಬಳಸಿ
ಆರೋಗ್ಯಕರ ಆಹಾರ ಸೇವನೆ ಮಾಡುವುದರ ಜೊತೆಗೆ ಕೂದಲಿನ ಬೆಳವಣಿಗೆಗೆ ಹೊರಗಿನಿಂದ ಯಾವ ರೀತಿಯಲ್ಲಿ ಪೋಷಣೆ ನೀಡಬಹುದು ಎಂಬ ಗೊಂದಲವಿದ್ದರೆ ಅದಕ್ಕೆ ಸರಳವಾಗಿರುವ ಸಲಹೆ ಇಲ್ಲಿದೆ. ಒಂದು ಸಣ್ಣ ಬಟ್ಟಲಿನಲ್ಲಿ ನಾಲ್ಕು ಚಮಚ ಕ್ಯಾಸ್ಟರ್ ಆಯಿಲ್ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಮೆಂತ್ಯ ಬೀಜಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಈ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ, ನೆತ್ತಿ ಭಾಗಕ್ಕೆ ಚೆನ್ನಾಗಿ ಹಚ್ಚಿ. ಮರುದಿನ ಬೆಳಿಗ್ಗೆ, ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ. ರಾತ್ರಿ ಸಮಯದಲ್ಲಿ ಈ ರೀತಿ ಮಾಡುವುದರಿಂದ, ಕೂದಲು ಉದುರುವುದು ಕಡಿಮೆಯಾಗುತ್ತದೆ. ಇದರ ಫಲಿತಾಂಶ ಕೂಡ ಸ್ವಲ್ಪ ದಿನದಲ್ಲಿಯೇ ನಿಮಗೆ ತಿಳಿಯುತ್ತದೆ.
ಇದನ್ನೂ ಓದಿ: Health Tips: ಕೂದಲಿನ ಬೆಳವಣಿಗೆ ಈ ಆಹಾರಗಳಿಂದ ಸಾಧ್ಯ
ಎಳ್ಳೆಣ್ಣೆಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ
ನಿಮಗೆ ಕ್ಯಾಸ್ಟರ್ ಆಯಿಲ್ ಹಚ್ಚುವುದಕ್ಕೆ ಇಷ್ಟವಾಗದಿದ್ದರೆ ನಾಲ್ಕು ಚಮಚ ಎಳ್ಳೆಣ್ಣೆಯನ್ನು ತೆಗೆದುಕೊಂಡು ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಬಿಸಿ ಮಾಡಿ. ಅದು ತಣ್ಣಗಾದ ನಂತರ, ಈ ಎಣ್ಣೆಯನ್ನು ನೆತ್ತಿಗೆ ಹಚ್ಚಿ. ಅರ್ಧ ಗಂಟೆ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಇದು ನೆತ್ತಿಯ ಮೇಲೆ ಹೊಸ ಕೂದಲುಗಳು ಬೆಳೆಯಲು ಸಹಾಯ ಮಾಡುತ್ತದೆ. ಇದರ ಬದಲು ಎಳ್ಳೆಣ್ಣೆಯಲ್ಲಿ ಸ್ವಲ್ಪ ಬೆಲ್ಲವನ್ನು ಬಿಸಿ ಮಾಡಿ, ಎಣ್ಣೆ ತಣ್ಣಗಾದ ನಂತರ ತಲೆಗೆ ಹಚ್ಚಬೇಕು. ಅರ್ಧ ಗಂಟೆ ಹಾಗೆಯೇ ಇರಿಸಿ ನಂತರ ಕೂದಲಿಗೆ ಶಾಂಪೂ ಹಚ್ಚಿ ತೊಳೆದುಕೊಳ್ಳಬೇಕು. ಇದು ನಿಮ್ಮ ಕೂದಲು ಉದುರುವುದನ್ನು ತಡೆಯುತ್ತದೆ ಜೊತೆಗೆ ಕೂದಲಿಗೆ ಉತ್ತಮ ಹೊಳಪನ್ನು ನೀಡುತ್ತದೆ. ಅಲ್ಲದೆ ನಿಮ್ಮ ಕೂದಲಿನ ಬೇರುಗಳು ಸಹ ಬಲಗೊಳ್ಳುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








