ನಿಮ್ಮ ದೇಹದಲ್ಲಿ ಈ ಬದಲಾವಣೆ ಕಂಡ್ರೆ ಅದು ಲಿವರ್ ಕ್ಯಾನ್ಸರ್ ಲಕ್ಷಣ
ಯಕೃತ್ತು ಅಥವಾ ಲಿವರ್ ಜೀರ್ಣಕ್ರಿಯೆಗೆ ಪ್ರಮುಖವಾದ ಅಂಗವಾಗಿರುವುದರಿಂದ, ಇದರಲ್ಲಿ ಯಾವುದೇ ರೀತಿಯ ಅಡಚಣೆ ಆದರೆ ಅದು ನಾನಾ ರೀತಿಯ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ. ಅದರಲ್ಲಿಯೂ ಯಕೃತ್ತಿನ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿದ್ದಾಗ ಕೆಲವು ಲಕ್ಷಣಗಳು ಸೌಮ್ಯವಾಗಿದ್ದು ಅದನ್ನು ಗುರುತಿಸುವುದು ಕಷ್ಟವಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಈ ವಿಷಯಗಳ ಬಗ್ಗೆ ತಿಳಿದುಕೊಂಡು ನಿಮಗೂ ಆ ರೀತಿ ಆಗುತ್ತಿದ್ದರೆ ಅದಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿಕೊಳ್ಳುವುದು ಒಳ್ಳೆಯದು ಇದರಿಂದ ಮಾರಣಾಂತಿಕ ಕಾಯಿಲೆಗಳು ಬರುವುದನ್ನು ತಡೆಯಬಹುದಾಗಿದೆ.

ಲಿವರ್ ಕ್ಯಾನ್ಸರ್ (Liver Cancer) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಇವುಗಳ ಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಆದ ಕಾರಣ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಲ್ಲದೆ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಕ್ಯಾನ್ಸರ್ (Cancer) ಸಂಬಂಧಿಸಿದಂತೆ ಸಾವುಗಳ ಹೆಚ್ಚಳಕ್ಕೆ ಇದು ಪ್ರಮುಖ ಕಾರಣವಾಗಿದೆ. ಮನುಷ್ಯನ ಯಕೃತ್ತಿನ ಅಥವಾ ಲಿವರ್ ಅಂಗಾಂಶಗಳಲ್ಲಿ ಕ್ಯಾನ್ಸರ್ ಕೋಶಗಳು ರೂಪುಗೊಂಡಾಗ ಈ ಕ್ಯಾನ್ಸರ್ ಬರುತ್ತದೆ. ಆದರೆ ದುರದೃಷ್ಟವಶಾತ್, ಲಿವರ್ ಕ್ಯಾನ್ಸರ್ ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಬಹಳ ಕಷ್ಟ, ಇದು ಮುಂದುವರೆದರೆ ಇದನ್ನು ಕಡಿಮೆ ಮಾಡುವುದು ಅಥವಾ ಇದನ್ನು ನಿಯಂತ್ರಣದಲ್ಲಿ ಇಡುವುದು ಇನ್ನಷ್ಟು ಕಷ್ಟಕರವಾಗುತ್ತದೆ. ಹಾಗಾಗಿ ಈ ರೋಗದ ಬಗ್ಗೆ ತಿಳಿದಿರುವುದು ಮಾತ್ರವಲ್ಲ, ಇದು ನೀಡುವ ಮುನ್ಸೂಚನೆಯ ಬಗ್ಗೆ, ಇದರ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದಿರಬೇಕು. ಆಗ ಮಾತ್ರ ಇಂತಹ ಮಾರಣಾಂತಿಕ ಕಾಯಿಲೆಗಳು ಬರದಂತೆ ತಡೆಯಲು ಸಾಧ್ಯವಾಗುತ್ತದೆ. ಹಾಗಾದರೆ ಯಕೃತ್ತಿನ ಕ್ಯಾನ್ಸರ್‌ನ ಆರಂಭದಲ್ಲಿ (liver cancer early signs) ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ತ್ವರಿತವಾಗಿ ತೂಕ ಕಡಿಮೆಯಾಗುವುದು
ಯಾವುದೇ ರೀತಿಯಲ್ಲಿ ಡಯಟ್ ಮಾಡದೆಯೇ ಅಥವಾ ಆಹಾರ ಕ್ರಮದಲ್ಲಿ ಬದಲಾವಣೆ ಆಗದೆಯೇ ಒಮ್ಮೆಲೇ ತೂಕ ಕಡಿಮೆಯಾಗುವುದು ಯಕೃತ್ತಿನ ಅಥವಾ ಲಿವರ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ನೀವು ಕೂಡ ಇದ್ದಕ್ಕಿದ್ದಂತೆ ತೂಕ ಕಡಿಮೆ ಆಗಿದ್ದರೆ ಅದು ಡೇಗಾ ನಿಮಗೆ ನೀಡಿದ ಎಚ್ಚರಿಕೆಯ ಸಂಕೇತವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡಿಕೊಳ್ಳದ ತೂಕ ನಷ್ಟ ಎಂದಿಗೂ ಒಳ್ಳೆಯ ಸಂಕೇತವಲ್ಲ.
ಹಸಿವು ಕಡಿಮೆ ಆಗುವುದು
ಯಕೃತ್ತು ಜೀರ್ಣಕ್ರಿಯೆಗೆ ಪ್ರಮುಖ ಅಂಗವಾಗಿರುವುದರಿಂದ, ಅದರಲ್ಲಿ ಯಾವುದೇ ಅಡಚಣೆಯಾದರೂ ಕೂಡ ಹಸಿವು ಕಡಿಮೆ ಆಗುತ್ತದೆ. ಅದರಲ್ಲಿಯೂ ಲಿವರ್ ಅಥವಾ ಯಕೃತ್ತಿನ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಇರುವವರಿಗೆ ಸ್ವಲ್ಪ ಪ್ರಮಾಣದಲ್ಲಿ ತಿಂದರೂ ಸಹ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಏಕೆಂದರೆ ಯಕೃತ್ತಿನ ಕ್ಯಾನ್ಸರ್ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ ಎರಡಕ್ಕೂ ಅಡ್ಡಿಪಡಿಸುತ್ತದೆ, ಹಾಗಾಗಿ ದೇಹಕ್ಕೆ ಆಹಾರವನ್ನು ಸಂಸ್ಕರಿಸಲು ಕಷ್ಟವಾಗುತ್ತದೆ.
ಆಯಾಸ ಮತ್ತು ದೌರ್ಬಲ್ಯ
ಎಷ್ಟೇ ವಿಶ್ರಾಂತಿ ಪಡೆದರೂ ಸಹ ದಣಿವಾದ ಅನುಭವಾಗುತ್ತಿದ್ದರೆ ಅದು ಸಾಮಾನ್ಯ ಸ್ಥಿತಿಯಲ್ಲ. ಈ ರೀತಿ ನಿಮಗೂ ಆಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಈ ರೀತಿ ಆಗುವುದು ಗಂಭೀರ ಕಾಯಿಲೆ ಬಂದಿರುವ ಸೂಚನೆ ಆಗಿರಬಹುದು. ಏಕೆಂದರೆ ಸಾಮಾನ್ಯವಾಗಿ ಕ್ಯಾನ್ಸರ್ ವಿರುದ್ಧ ಹೋರಾಡಲು ದೇಹವು ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ, ಈ ರೀತಿಯಾದಾಗ ನಿಮಗೆ ದೇಹ ದಣಿದ ಅನುಭವಾಗುತ್ತದೆ. ಅದಲ್ಲದೆ ಈ ಆಯಾಸವು ಸಾಮಾನ್ಯ ಆಯಾಸಕ್ಕಿಂತ ಭಿನ್ನವಾಗಿರುತ್ತದೆ ಮತ್ತು ಇದು ಬಹಳ ದಿನಗಳಾದರೂ ಕೂಡ ಕಡಿಮೆಯಾಗುವ ಸೂಚನೆಯೂ ಕಂಡುಬರುವುದಿಲ್ಲ. ಹಾಗಾಗಿ ಈ ರೀತಿ ಆಗುತ್ತಿದ್ದರೆ ಸ್ವಲ್ಪ ಜಾಗರೂಕರಾಗಿರಿ. ವೈದ್ಯರ ಸಲಹೆ ಪಡೆದುಕೊಳ್ಳಿ.
ಕಾಮಾಲೆ (ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು)
ಸಾಮಾನ್ಯವಾಗಿ ಕಾಮಾಲೆ ಬಗ್ಗೆ ತಿಳಿದಿರಬಹುದು. ಇದು ಬಂದರೆ ಚರ್ಮ ಮತ್ತು ಕಣ್ಣುಗಳ ಬಿಳಿ ಭಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಯಕೃತ್ತು ರಕ್ತದಿಂದ ಬಿಲಿರುಬಿನ್ ಎಂಬ ವಸ್ತುವನ್ನು ತೆಗೆದುಹಾಕುವುದಕ್ಕೆ ಸಾಧ್ಯವಾಗದಿದ್ದಾಗ ಈ ರೀತಿಯಾಗುತ್ತದೆ. ಈ ಸಂದರ್ಭಗಳಲ್ಲಿ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ, ಅಲ್ಲದೆ ತುರಿಕೆ, ಮೂತ್ರ ಗಾಢ ಬಣ್ಣಕ್ಕೆ ತಿರುಗುವುದು ಹೀಗೆ ಕೆಲವು ಲಕ್ಷಣಗಳನ್ನು ನೀವು ಗಮನಿಸಬಹುದು. ಈ ರೀತಿ ಕಂಡು ಬರುವ ಲಕ್ಷಣಗಳು ನಿಮ್ಮ ಯಕೃತ್ತು ಅಥವಾ ಲಿವರ್ ಅಪಾಯದಲ್ಲಿದೆ ಎಂಬುದನ್ನು ಸೂಚಿಸುತ್ತದೆ.
ಇದನ್ನೂ ಓದಿ: ಥೈರಾಯ್ಡ್ಗೆ ಕಡಿಮೆ ಮಾಡಲು ಇದು ಒಂದೇ ದಾರಿ, ಇದನ್ನು ಸೇವಿಸಿ
ಸೌಮ್ಯವಾಗಿರುವ ಲಕ್ಷಣಗಳನ್ನು ಅಲಕ್ಷ್ಯ ಮಾಡಬೇಡಿ
ಆದರೆ ಈ ಲಕ್ಷಣಗಳೆಲ್ಲವೂ ಕ್ಯಾನ್ಸರ್ ಆಗಿರಬೇಕೆಂಬುದಿಲ್ಲ. ಹಾಗಂತ ಈ ರೀತಿ ಲಕ್ಷಣಗಳನ್ನು ನೀವು ಅಲಕ್ಷ್ಯ ಮಾಡುವುದು ಕೂಡ ಒಳ್ಳೆಯದಲ್ಲ. ಈ ರೋಗದ ಮೊದಲು ಕಂಡುಬರುವ ಹಲವಾರು ರೀತಿಯ ಲಕ್ಷಣಗಳು ಬಹಳ ಸಾಮಾನ್ಯವಾಗಿರುವುದರಿಂದ ಇದನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಅಸ್ಪಷ್ಟ ಅಥವಾ ಸೌಮ್ಯವಾಗಿರುವ ಈ ಲಕ್ಷಣಗಳನ್ನು ಸರಿಯಾಗಿ ಗುರುತಿಸಿ ಜನರು ಸಾಮಾನ್ಯವಾಗಿ ವೈದ್ಯರನ್ನು ಭೇಟಿ ಮಾಡುವುದನ್ನು ವಿಳಂಬ ಮಾಡುತ್ತಾರೆ. ಈ ವಿಳಂಬವು ಕ್ಯಾನ್ಸರ್ ಮುಂದುವರಿದ ಹಂತಕ್ಕೆ ಹೋಗುವುದಕ್ಕೆ ನೀವೇ ಅನುವು ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ದೇಹದಲ್ಲಾಗುವ ಬದಲಾವಣೆಯನ್ನು ಸರಿಯಾಗಿ ಗಮನಿಸಿ, ಈ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








