Kerala Monkeypox: ಕೇರಳದಲ್ಲಿ ಭಾರತದಲ್ಲೇ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ; ಕರ್ನಾಟಕದಲ್ಲೂ ಹೆಚ್ಚಿದ ಆತಂಕ
ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಪಕ್ಕದ ರಾಜ್ಯವಾದ ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆಯಾಗುವ ಮೂಲಕ ಕರ್ನಾಟಕದಲ್ಲೂ ಆತಂಕ ಹೆಚ್ಚಿಸಿದೆ.
ಕೊಚ್ಚಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಮಂಕಿಪಾಕ್ಸ್ (Monkeypox) ಕೇಸ್ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಈಗಾಗಲೇ ಹಲವು ದೇಶಗಳಲ್ಲಿ ಮಾರಣಾಂತಿಕ ಭೀತಿ ಸೃಷ್ಟಿಸಿರುವ ಮಂಕಿಪಾಕ್ಸ್ ಇದೀಗ ನೆರೆಯ ರಾಜ್ಯವಾದ ಕೇರಳಕ್ಕೂ ಲಗ್ಗೆಯಿಟ್ಟಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಿಂದ 3 ದಿನಗಳ ಹಿಂದೆ ಕೇರಳಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.
ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಈ ರೋಗದ ಹರಡುವಿಕೆ ವೇಗವಾಗಿದ್ದರೂ ಅದರಿಂದ ಜೀವ ಕಳೆದುಕೊಳ್ಳುವ ಆತಂಕ ಕಡಿಮೆ ಎನ್ನಲಾಗಿದೆ.
ಪಕ್ಕದ ರಾಜ್ಯವಾದ ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆಯಾಗುವ ಮೂಲಕ ಕರ್ನಾಟಕದಲ್ಲೂ ಆತಂಕ ಹೆಚ್ಚಿಸಿದೆ. ಆದರೆ, ಈ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಕೇರಳದ ಆರೋಗ್ಯ ಇಲಾಖೆ ಯುಎಇಯಿಂದ ಬಂದಿದ್ದ ವ್ಯಕ್ತಿಯ ರಕ್ತದ ಸ್ಯಾಂಪಲ್ ಅನ್ನು ಪುಣೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದೆ. ಇಂದು ಸಂಜೆಯೊಳಗೆ ಫಲಿತಾಂಶ ಲಭ್ಯವಾಗಲಿದ್ದು, ಅದು ಮಂಕಿಪಾಕ್ಸ್ ಸೋಂಕು ಹೌದೋ, ಅಲ್ಲವೋ ಎಂಬುದು ಖಚಿತವಾಗಲಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದನ್ನೂ ಓದಿ: Monkeypox: ಮಂಕಿಪಾಕ್ಸ್ ರೋಗದ ಲಕ್ಷಣಗಳೇನು? ಯಾವಾಗ ಚಿಕಿತ್ಸೆ ಪಡೆಯಬೇಕು?
ಇದೀಗ ಕ್ವಾರಂಟೈನ್ನಲ್ಲಿ ಇರಿಸಲಾಗಿರುವ ವ್ಯಕ್ತಿ ಮೂರು ದಿನಗಳ ಹಿಂದೆ ಯುಎಇಯಿಂದ ಕೇರಳ ತಲುಪಿದ್ದರು. ಅವರಿಗೆ ಮಂಕಿಪಾಕ್ಸ್ ರೋಗದ ಲಕ್ಷಣಗಳು ಕಂಡುಬಂದ ನಂತರ ಅವರ ರಕ್ತದ ಮಾದರಿಗಳನ್ನು ಪುಣೆಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಇಂದು ಸಂಜೆ ವೇಳೆಗೆ ಅಂತಿಮ ಫಲಿತಾಂಶ ಕೈಸೇರಲಿದೆ. ಯುಎಇಯಿಂದ ಬಂದಿದ್ದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಇನ್ನೋರ್ವ ವ್ಯಕ್ತಿಗೂ ಪರೀಕ್ಷೆ ಮಾಡಿದಾಗ ಮಂಕಿಪಾಕ್ಸ್ ಪಾಸಿಟಿವ್ ಬಂದಿದೆ. ಹೀಗಾಗಿ, ಆತನನ್ನು ಕೂಡ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಲಾಗಿದೆ.
ಇಲ್ಲಿಯವರೆಗೆ, ಭಾರತದಲ್ಲಿ ಮಂಕಿಪಾಕ್ಸ್ ವೈರಸ್ ಪ್ರಕರಣಗಳು ವರದಿಯಾಗಿಲ್ಲ. ಜುಲೈ 11ರ ಹೊತ್ತಿಗೆ ಅಮೆರಿಕಾದಲ್ಲಿ ಮಂಕಿಪಾಕ್ಸ್‌ನ ಸುಮಾರು 800 ಪ್ರಕರಣಗಳು ದಾಖಲಾಗಿತ್ತು. ಆದರೆ, ಜಾಗತಿಕವಾಗಿ 57 ದೇಶಗಳಲ್ಲಿ 8,200ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ.
ಮಂಕಿಪಾಕ್ಸ್ ಹೇಗೆ ಹರಡುತ್ತದೆ?:
– ಇದು ಸಿಡುಬು ವೈರಸ್‌ಗೆ ನಿಕಟ ಸಂಬಂಧ ಹೊಂದಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ಹರಡಬಹುದು.
– ಸಾಮಾನ್ಯವಾಗಿ ದದ್ದು, ಹುಣ್ಣುಗಳು ಹೊಂದಿರುವ ವ್ಯಕ್ತಿಯೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಒಳಗಾದರೆ ಮನುಷ್ಯನಿಂದ ಮನುಷ್ಯನಿಗೆ ಈ ಸೋಂಕು ಹರಡುತ್ತದೆ.
– ಇದು ನಿಕಟ ಲೈಂಗಿಕ ಸಂಪರ್ಕದ ಸಮಯದಲ್ಲಿ ಉಸಿರಾಟದ ಹನಿಗಳು ಅಥವಾ ಮೌಖಿಕ ದ್ರವಗಳ ಮೂಲಕವೂ ಹರಡಬಹುದು (ಚುಂಬನ; ಮೌಖಿಕ, ಗುದ, ಅಥವಾ ಯೋನಿ ಸಂಭೋಗ).
– ಮಂಕಿಪಾಕ್ಸ್ ವೈರಸ್‌ನಿಂದ ಕಲುಷಿತಗೊಂಡಿರುವ ಬಟ್ಟೆಗಳು, ವಸ್ತುಗಳು ಅಥವಾ ಮೇಲ್ಮೈಗಳೊಂದಿಗಿನ ಸಂಪರ್ಕವು (ಬಟ್ಟೆ, ಹಾಸಿಗೆ ಅಥವಾ ಟವೆಲ್‌ಗಳಂತಹವು) ಸಹ ಸೋಂಕು ಹರಡಲು ಕಾರಣವಾಗಬಹುದು.
ಮಂಕಿಪಾಕ್ಸ್‌ನ ಲಕ್ಷಣಗಳು?:
ಮಾನವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಸಿಡುಬಿನ ಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ. ಮಂಕಿಪಾಕ್ಸ್ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಬಳಲಿಕೆಯಿಂದ ಪ್ರಾರಂಭವಾಗುತ್ತದೆ. ಸಿಡುಬು ಮತ್ತು ಮಂಕಿಪಾಕ್ಸ್ ರೋಗಲಕ್ಷಣಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳು ಊದಿಕೊಳ್ಳಲು ಕಾರಣವಾಗುತ್ತದೆ (ಲಿಂಫಡೆನೋಪತಿ), ಆದರೆ ಸಿಡುಬು ಇದನ್ನು ಮಾಡುವುದಿಲ್ಲ. ಮಂಕಿಪಾಕ್ಸ್‌ಗೆ ಅವಧಿಯು (ಸೋಂಕಿನಿಂದ ರೋಗಲಕ್ಷಣಗಳವರೆಗೆ) ಸಾಮಾನ್ಯವಾಗಿ 7-14 ದಿನಗಳು ಅಥವಾ 5-21 ದಿನಗಳವರೆಗೆ ಇರುತ್ತದೆ.
Published On - 9:52 am, Thu, 14 July 22