ಈಗಿನ್ನೂ ಜೂನ್ ಎರಡನೇ ವಾರ.. ನೈಋತ್ಯ ಮಾನ್ಸೂನ್ ಈಗಾಗಲೇ ದೇಶದ ಮೂರನೇ ಎರಡರಷ್ಟು ಭಾಗವನ್ನು ಆವರಿಸಿದೆ..ಬಹುತೇಕ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ನೀವು ಗಮನಿಸಿ, ನೈಋತ್ಯ ಮಾನ್ಸೂನ್ ತುಂಬ ಬೇಗಬೇಗ ದೇಶಾದ್ಯಂತ ಪ್ರವೇಶಿಸುತ್ತಿದೆ. ಈ ಬಾರಿ ನಿಗದಿತ ಸಮಯಕ್ಕಿಂತಲೂ ಎರಡು ದಿನ ತಡವಾಗಿಯೇ ಕೇರಳ ಕರಾವಳಿಯನ್ನು ಪ್ರವೇಶಿಸಿರುವ ಮುಂಗಾರು, ನಂತರ ಕೇವಲ ಹತ್ತೇ ದಿನಗಳಲ್ಲಿ ದೇಶದ ಮೂರರಲ್ಲಿ ಎರಡರಷ್ಟು ಪ್ರದೇಶವನ್ನು ಆವರಿಸಿದೆ.
ಮಂಗಳವಾರ ಮಾನ್ಸೂನ್ನ ಉತ್ತರದ ಮಿತಿ ದಿಯು, ಸೂರತ್, ನಂದರ್ಬಾರ್, ಭೋಪಾಲ್, ನಾಗೌನ್, ಹಮೀರ್ಪುರ, ಬಾರ್ಬಂಕಿ, ಬರೇಲಿ, ಸಹರಾನ್ಪುರ, ಅಂಬಾಲಾ ಮತ್ತು ಅಮೃತಸರ ಮೂಲಕ ಹಾದು ಹೋಗಿದೆ.. ಮಾನ್ಸೂನ್ ನಿರಂತರವಾಗಿ ಎಲ್ಲ ಪ್ರದೇಶಗಳನ್ನೂ ಪ್ರವೇಶಿಸುತ್ತಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಸದ್ಯಕ್ಕಂತೂ ದೇಶದ ಕೆಲವೇ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಮುಂಗಾರು ಮಳೆ ಸುರಿಯುತ್ತಿದೆ. ಈ ವರ್ಷ ಮುಂಗಾರು ಮುಂಚಿತವಾಗಿಯೇ ಕಾಲಿಟ್ಟಿದೆ.
ನೈಋತ್ವ ಮಾನ್ಸೂನ್ ಬೇಗನೇ ವ್ಯಾಪಿಸುತ್ತಿರಲು ಕಾರಣವೇನು?
ಮೇ ಮೂರನೇ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಎದ್ದ ಯಾಸ್ ಚಂಡಮಾರುತದಿಂದ ಈ ಬಾರಿ ಮಾನ್ಸೂನ್ ಸರಿಯಾದ ಸಮಯಕ್ಕೆ, ಅಂದರೆ ಮೇ 21ಕ್ಕೆ ಅಂಡಮಾನ್ ತಲುಪಲು ಸಹಾಯ ಮಾಡಿದೆ. ಜೂ.1ಕ್ಕೆ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಆಗಬೇಕಿತ್ತು. ಆದರೆ ಎರಡು ದಿನಗಳ ನಂತರ ಅಪ್ಪಳಿಸಿತು. ಆದರೆ ದೇಶಾದ್ಯಂತ ಅತ್ಯಂತ ವೇಗವಾಗಿ ವ್ಯಾಪಿಸುತ್ತಿರಲು ಕಾರಣ, ಅರೇಬಿಯನ್ ಸಮುದ್ರದಿಂದ ಗಾಳಿ ಪಶ್ಚಿಮಾಭಿಮುಖವಾಗಿ ಬೀಸುತ್ತಿರುವುದು ಮತ್ತು ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಜೂ.11ರಂದು ಕಡಿಮೆ ಒತ್ತಡ ಉಂಟಾಗಿದ್ದು. ಸದ್ಯ ನೈಋತ್ಯ ಮಾನ್ಸೂನ್ ಬಲಗೊಂಡಿದ್ದು, ಈಶಾನ್ಯ, ಪಶ್ಚಿಮಬಂಗಾಳ, ಓಡಿಶಾ, ಜಾರ್ಖಂಡ, ಬಿಹಾರ ಮತ್ತು ಛತ್ತೀಸ್ಗಢ್ಗಳತ್ತ ವ್ಯಾಪಿಸುತ್ತಿದೆ.
2011ರಿಂದ ಅಂದರೆ ಕಳೆದೊಂದು ದಶಕಗಳಿಂದ ಮಾನ್ಸೂನ್ ಜೂನ್ನಲ್ಲಿಯೇ ಇಡೀ ದೇಶಕ್ಕೆ ವ್ಯಾಪಿಸುತ್ತಿದೆ. 2020ರಲ್ಲಿ ಜೂ.1ರಿಂದ ಶುರವಾಗಿ 26ರಹೊತ್ತಿಗೆ ದೇಶಾದ್ಯಂತ ಮುಂಗಾರು ಪ್ರವೇಶ ಆಗಿತ್ತು. 2018ರಲ್ಲಿ ಮೇ 28ರಲ್ಲೇ ಮುಂಗಾರು ಪ್ರಾರಂಭವಾಗಿತ್ತು. ಆದರೆ ದೇಶಾದ್ಯಂತ ವ್ಯಾಪಿಸಲು ಜೂ.29ರವರೆಗೆ ಸಮಯ ತೆಗೆದುಕೊಂಡಿತ್ತು. 2015ರಲ್ಲಿ ಜೂ.5ರಿಂದ 26ರವರೆಗೆ ಇಡೀ ದೇಶದಲ್ಲಿ ಮಾನ್ಸೂನ್ ಶುರುವಾಗಿತ್ತು. ಹಾಗೇ 2013ರಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಜೂ.1ರಲ್ಲಿ ಪ್ರವೇಶಿಸಿದ್ದ ಮುಂಗಾರು 16ರ ಹೊತ್ತಿಗೆ ಇಡೀ ದೇಶಕ್ಕೆ ವ್ಯಾಪಿಸಿಯಾಗಿತ್ತು. ಇನ್ನುಳಿದಂತೆ 2019ರಲ್ಲಿ ವಾಯು ಚಂಡಮಾರುತದಿಂದ, 2017ರಲ್ಲಿ ಮೋರಾ ಸೈಕ್ಲೋನ್ನಿಂದಾಗಿ, ಪ್ರಮುಖ ನಗರಗಳಿಗೆ ಮುಂಗಾರು ಪ್ರವೇಶ ವಿಳಂಬವಾಗಿತ್ತು.
ಮುಂಚಿತ ಮುಂಗಾರಿನಿಂದ ವಿಪರೀತ ಮಳೆಯಾಗುತ್ತದೆಯೇ?
ಮುಂಗಾರು ಆಗಮನಕ್ಕೂ..ಮಳೆಯ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು. ಯಾವುದೇ ಪ್ರದೇಶದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಮಯಕ್ಕೂ, ನಂತರ ಬೀಳುವ ಮಳೆಗೂ ಸಂಬಂಧವಿರುವುದಿಲ್ಲ. 2014ರಲ್ಲಿ ಮಾನ್ಸೂನ್ ಇಡೀ ದೇಶವನ್ನು ಆವರಿಸಲು ಒಟ್ಟಾರೆ 42 ದಿನಗಳು ಬೇಕಾದವು. 2015ರಲ್ಲಿ 22ದಿನಗಳಲ್ಲೇ ಇಡೀ ದೇಶಕ್ಕೆ ಮುಂಗಾರು ಆವರಿಸಿತು. ಆದರೆ ಈ ಎರಡೂ ವರ್ಷಗಳಲ್ಲಿ ಭಾರತದಲ್ಲಿ ಮಳೆಯ ಪ್ರಮಾಣ ತುಂಬ ಕಡಿಮೆ ದಾಖಲಾಗಿದೆ. ಈ ವರ್ಷವೂ ಸಹ ಜೂನ್ ಅಂತ್ಯದ ಒಳಗೇ ಇಡೀ ದೇಶಾದ್ಯಂತ ಮುಂಗಾರು ಪ್ರವೇಶ ಮಾಡುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಾಮನ್ ಫ್ರೆಂಡ್ ಮೂಲಕ ಯುವತಿ ಪರಿಚಯ; ವಿಚಾರಣೆ ವೇಳೆ ನರೇಶ್ ಮಾಹಿತಿ
Monsoon hit the Kerala coast two days behind schedule but already covered two thirds of the country