ರಾಹುಲ್ ಗಾಂಧಿ ವಿದೇಶದಲ್ಲಿ ಕೂತು ಸರ್ಕಾರವನ್ನು ಪ್ರಶ್ನಿಸಲಿದ್ದಾರೆಯೇ?

  • Publish Date - 4:46 pm, Mon, 14 September 20
ರಾಹುಲ್ ಗಾಂಧಿ ವಿದೇಶದಲ್ಲಿ ಕೂತು ಸರ್ಕಾರವನ್ನು ಪ್ರಶ್ನಿಸಲಿದ್ದಾರೆಯೇ?

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾಲೆಳೆಯುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಲಿಚ್ಛಿಸದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಇಂದು ಮತ್ತೊಂದು ಟ್ವೀಟ್ ಮೂಲಕ ಪ್ರಧಾನಿಯನ್ನು ಛೇಡಿಸಿದ್ದಾರೆ.

ಭಾರತದಲ್ಲಿ ಕೊವಿಡ್-19 ವ್ಯಾಪಕವಾಗಿ ಹರಡಲು ಮೋದಿಯವರ ಅವೈಜ್ಞಾನಿಕ, ಅನಿಯೋಜಿತ ಲಾಕ್​ಡೌನ್ ಕಾರಣ ಎಂದು ಆರೋಪಿಸಿರುವ ರಾಹುಲ್, ಜನರು ತಮ್ಮ ಜೀವ ರಕ್ಷಿಸಿಕೊಳ್ಳಲು ತಾವೇ ಪ್ರಯತ್ನಪಡಬೇಕು ಯಾಕೆಂದರೆ, ಪ್ರಧಾನಿ ಮೋದಿಯವರು ನವಿಲಿನೊಂದಿಗೆ ಆಟವಾಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ಮೂದಲಿಸಿದ್ದಾರೆ.

‘‘ಭಾರತದಲ್ಲಿ ಈ ವಾರ ಕೊವಿಡ್-19 ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ತಲುಪಲಿದೆ. ಒಬ್ಬ ವ್ಯಕ್ತಿಯ ಅಹಂಕಾರದ ಪ್ರತೀಕವಾಗಿರುವ ಅವೈಜ್ಞಾನಿಕ ಲಾಕ್​ಡೌನ್ ಇಡೀ ದೇಶದಲ್ಲಿ ಕೊರೊನಾ ಸೋಂಕು ಹರಡಲು ಕಾರಣವಾಯಿತು. ಮೋದಿ ಸರ್ಕಾರ ಜನರಿಗೆ ಆತ್ಮನಿರ್ಭರರಾಗಲು ಹೇಳುತ್ತಿದೆ. ಅದರರ್ಥ ನಿಮ್ಮ ಜೀವ ಉಳಿಸಿಕೊಳ್ಳಲು ನೀವೇ ಹೋರಾಡಬೇಕು, ಯಾಕೆಂದರೆ, ಪ್ರಧಾನಿಯವರು ನವಿಲಿನೊಂದಿಗೆ ಆಡುವುದರಲ್ಲಿ ವ್ಯಸ್ತರಾಗಿದ್ದಾರೆ@RahulGandhi’’

ಆದರೆ, ವಿಪರ್ಯಾಸದ ಸಂಗತಿಯೆಂದರೆ, ಸರ್ಕಾರದ ತಪ್ಪುಗಳತ್ತ ಬೊಟ್ಟು ಮಾಡಿ ತೋರುವ ರಾಹುಲ್ ಗಾಂಧಿ ಇಂದು ಆರಂಭಗೊಂಡಿರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಉಪಸ್ಥಿತರಿಲ್ಲ. ಅವರ ತಾಯಿ ಸೋನಿಯಾ ಗಾಂಧಿಯವರ ವೈದ್ಯಕೀಯ ತಪಾಸಣೆಗೆ ವಿದೇಶಕ್ಕೆ ಹಾರಿದ್ದಾರೆ. ಸಂಸತ್ತಿನಲ್ಲಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಇದಕ್ಕಿಂತ ಉತ್ತಮ ಅವಕಾಶ ರಾಹುಲ್​ಗಾಗಲೀ, ಕಾಂಗ್ರೆಸ್​ಗಾಗಲೀ ಅಥವಾ ವಿರೋಧಪಕ್ಷಗಳ ಮಿತ್ರಕೂಟಕ್ಕಾಗಲೀ ಮತ್ತೊಂದಿಲ್ಲ.

ನೂರೆಂಟು ಜ್ವಲಂತ ಸಮಸ್ಯೆಗಳು ದೇಶವನ್ನು ಶೊಚನೀಯ ಸ್ಥಿತಿಗೆ ನೂಕಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಖುದ್ದು ರಾಹುಲ್ ಹೇಳಿರುವಂತೆ ಅಪಾಯಕಾರಿಯಾಗಿ ಹಬ್ಬುತ್ತಿರುವ ಕೊವಿಡ್ ಸೋಂಕು, ಪಾತಾಳಕ್ಕೆ ಕುಸಿದಿರುವ ಜಿಡಿಪಿ (-23.9%), ಕಳೆದ ಅರ್ಧ ಶತಮಾನದಲ್ಲೇ ಕಂಡರಿಯದ ನಿರುದ್ಯೋಗ ಸಮಸ್ಯೆ, ರಾಜ್ಯಗಳಿಗೆ ಅವುಗಳ ಪಾಲಿನ ಜಿಎಸ್​ಟಿಯನ್ನು ಹಂಚದಿರುವುದು, ಚೀನಾದೊಂದಿಗೆ ನಿಲ್ಲದ ಗಡಿ ಸಂಘರ್ಷ, ಎಲ್​ಒಸಿಯಲ್ಲಿ ಮುಂದುವರಿದಿರುವ ಭಯೋತ್ಪಾದಕ ಚಟುವಟಿಕೆಗಳು, ಇನ್ನೂ ಹತ್ತಾರು ಸಮಸ್ಯೆಗಳು.

ವಿದೇಶದಲ್ಲಿ ಕೂತು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವ ನಿರ್ಧಾರವನ್ನು ರಾಹುಲ್ ಮಾಡಿಕೊಂಡಿದ್ದಾರೆಯೇ?

Click on your DTH Provider to Add TV9 Kannada