1 ಕೋಟಿ ಡೋಸ್ ಕೊವಿಡ್ 19 ಲಸಿಕೆ ನೀಡಿ, ಹೆಗ್ಗಳಿಕೆಗೆ ಪಾತ್ರವಾದ ಜಿಲ್ಲೆ ಇದು; ಕೊವಿನ್ ಆ್ಯಪ್ನಲ್ಲಿ ಮಾಹಿತಿ ಬಿಡುಗಡೆ
ಮುಂಬೈನಲ್ಲಿ ಇದುವರೆಗೆ ಒಟ್ಟು 507 ಕೇಂದ್ರಗಳಲ್ಲಿ ಕೊವಿಡ್ 19 ಲಸಿಕೆ ನೀಡಲಾಗಿದೆ. ಅದರಲ್ಲಿ 325 ಸರ್ಕಾರಿ ಕೊರೊನಾ ಲಸಿಕೆ ಕೇಂದ್ರಗಳಾಗಿದ್ದು, 182 ಖಾಸಗಿ ಆಸ್ಪತ್ರೆಗಳ ಕೇಂದ್ರಗಳಾಗಿವೆ.
ಇದುವರೆಗೆ 1 ಕೋಟಿಗೂ ಅಧಿಕ ಡೋಸ್ ಲಸಿಕೆ (Covid 19 Vaccine) ನೀಡಿದ ದೇಶದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಮುಂಬೈ (Mumbai) ಪಾತ್ರವಾಗಿದೆ. ದೇಶದಲ್ಲಿ ಜನವರಿಯಿಂದ ಕೊವಿಡ್ 19 ಲಸಿಕೆ ಅಭಿಯಾನ ಶುರುವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಮುಂಬೈನಲ್ಲಿ 1,00,63,497 ಡೋಸ್ ಲಸಿಕೆ ನೀಡಲಾಗಿದೆ. 72,75,134 ಜನರಿಗೆ ಮೊದಲ ಡೋಸ್ ಮಾತ್ರ ಲಸಿಕೆ ಪಡೆದಿದ್ದು, 27,88,363 ಜನರಿಗೆ ಎರಡೂ ಡೋಸ್ ಸಂಪೂರ್ಣವಾಗಿದೆ. ಈ ಬಗ್ಗೆ ಕೊವಿನ್ ಆ್ಯಪ್ (CoWIN App)ನಲ್ಲಿ ಅಪ್ಡೇಟ್ ಆಗಿದೆ.
ಮುಂಬೈನಲ್ಲಿ ಇದುವರೆಗೆ ಒಟ್ಟು 507 ಕೇಂದ್ರಗಳಲ್ಲಿ ಕೊವಿಡ್ 19 ಲಸಿಕೆ ನೀಡಲಾಗಿದೆ. ಅದರಲ್ಲಿ 325 ಸರ್ಕಾರಿ ಕೊರೊನಾ ಲಸಿಕೆ ಕೇಂದ್ರಗಳಾಗಿದ್ದು, 182 ಖಾಸಗಿ ಆಸ್ಪತ್ರೆಗಳ ಕೇಂದ್ರಗಳಾಗಿವೆ. ಕಳೆದ 30 ದಿನಗಳಲ್ಲಿ ಆಗಸ್ಟ್ 27ರಂದು ಅತಿಹೆಚ್ಚು ಅಂದರೆ 1,77,017 ಜನರಿಗೆ ಕೊವಿಡ್ 19 ಲಸಿಕೆ ನೀಡಲಾಗಿದೆ. ಹಾಗೇ, ಆಗಸ್ಟ್ 21ರಂದು 1,63,775 ಡೋಸ್, ಆಗಸ್ಟ್ 23ರಂದು 1,53,881 ಡೋಸ್ ಲಸಿಕೆ ನೀಡಲಾಗಿದೆ ಎಂದು ಕೊವಿನ್ನಲ್ಲಿ ಉಲ್ಲೇಖಿಸಲಾಗಿದೆ.
ಮುಂಬೈನಲ್ಲಿ ಕಳೆದ ಮೂರು ದಿನಗಳಿಂದ, ಒಂದು ದಿನದಲ್ಲಿ 400ಕ್ಕೂ ಅಧಿಕ ಕೊವಿಡ್ 19 ಪ್ರಕರಣಗಳು ದಾಖಲಾಗುತ್ತಿವೆ. ಹಾಗೇ, ಶುಕ್ರವಾರ ಕೂಡ 422 ಕೇಸ್ಗಳು ದಾಖಲಾಗಿವೆ. ಇದೀಗ ಒಟ್ಟಾರೆ ಸೋಂಕಿತರ ಸಂಖ್ಯೆ 7,45,434ಕ್ಕೆ ಏರಿಕೆಯಾಗಿದ್ದು, ಇಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 15,987ಕ್ಕೆ ಏರಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ (BMC) ಮಾಹಿತಿ ನೀಡಿದೆ. ಏಪ್ರಿಲ್ನಲ್ಲಿ ಮುಂಬೈನಲ್ಲಿ ಒಂದು ದಿನದಲ್ಲಿ 11,163 ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದು, ಸದ್ಯ ಈ ವರ್ಷದ ಅತ್ಯಂತ ಹೆಚ್ಚು ಕೇಸ್ಗಳು ಅದೇ ಆಗಿದೆ. ಇನ್ನು ಕೊವಿಡ್ 19 ಶುರುವಾದಾಗಿನಿಂದಲೂ ಮುಂಬೈ-ಮಹಾರಾಷ್ಟ್ರದಲ್ಲಿ ವಿಪರೀತ ಸೋಂಕಿನ ಸಂಖ್ಯೆ ಇದ್ದೇಇದೆ. ಈಗ ತುಸು ಇಳಿಮುಖವಾಗಿದೆ. ಲಸಿಕಾ ಅಭಿಯಾನಕ್ಕೂ ವೇಗ ಸಿಕ್ಕಿದೆ.