ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಶಾರೂಖ್ ಖಾನ್ ಮಗ ಸೇರಿ ಒಟ್ಟು 11 ಜನರ ಬಂಧನ, ಆರೋಪಿಗಳು ಅ.11ರವರೆಗೆ ಎನ್​ಸಿಬಿ ಕಸ್ಟಡಿಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 05, 2021 | 6:17 PM

ಆರ್ಯನ್ ನೀಡಿದ್ದ ಮಾಹಿತಿ ಮೇರೆಗೆ ಬಂಧಿಸಿದ್ದ ನಾಲ್ವರನ್ನು ಎನ್​ಸಿಬಿ ಇಂದು ಮುಂಬೈನ ಕಿಲ್ಲಾ ಕೋರ್ಟ್​ಗೆ ಹಾಜರುಪಡಿಸಿತ್ತು.

ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಶಾರೂಖ್ ಖಾನ್ ಮಗ ಸೇರಿ ಒಟ್ಟು 11 ಜನರ ಬಂಧನ, ಆರೋಪಿಗಳು ಅ.11ರವರೆಗೆ ಎನ್​ಸಿಬಿ ಕಸ್ಟಡಿಗೆ
ಆರ್ಯನ್​​ ಖಾನ್​
Follow us on

ಮುಂಬೈ: ಐಷಾರಾಮಿ ಕ್ರೂಸ್​ನಲ್ಲಿ ನಡೆದಿದ್ದ ಹೈಪ್ರೊಫೈಲ್‌ ಡ್ರಗ್ಸ್‌ ಪಾರ್ಟಿ ಮೇಲಿನ ಮಾದಕ ದ್ರವ್ಯ ನಿಯಂತ್ರಣ ದಳ (NCB) ದಾಳಿ ಪ್ರಕರಣದಲ್ಲಿ ಈವರೆಗೆ ಶಾರೂಖ್ ಖಾನ್ ಮಗ ಆರ್ಯನ್ ಸೇರಿ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ. ಆರ್ಯನ್ ಮಾಹಿತಿ ಮೇರೆಗೆ ಬಂಧಿಸಿದ್ದ ನಾಲ್ವರನ್ನು ಎನ್​ಸಿಬಿ ಇಂದು ಮುಂಬೈನ ಕಿಲ್ಲಾ ಕೋರ್ಟ್​ಗೆ ಹಾಜರುಪಡಿಸಿತ್ತು. ಬಂಧಿತರನ್ನು ಅ.11ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿ ನ್ಯಾಯಾಲಯವು ಆದೇಶ ನೀಡಿದೆ. ಬಂಧಿತರದಲ್ಲಿ ಇಬ್ಬರು ಪ್ರಯಾಣಿಕರು ಹಾಗೂ ಇಬ್ಬರು ಪೆಡ್ಲರ್​ಗಳು.

ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಡ್ರಗ್ಸ್ ಕೇಸ್​ನ ಆರೋಪಿಗಳ ವಿಚಾರಣೆಯನ್ನು ಎನ್‌ಸಿಬಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಇಂದು ಆರ್ಯನ್ ಖಾನ್ ಹಾಗೂ ಅರ್ಬಾಜ್ ಸೇಠ್ ಮರ್ಚೆಂಟ್​ನನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಡ್ರಗ್ಸ್ ಕೇಸ್​ನಲ್ಲಿ ಕೆಲ ಪೆಡ್ಲರ್​ಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಮುಂಬೈನಿಂದ ಗೋವಾಕ್ಕೆ ಹೊರಟಿದ್ದ ಕ್ರೂಸ್​ನಲ್ಲಿದ್ದು, ಸದ್ಯ ಎನ್​ಸಿಬಿ ವಶದಲ್ಲಿರುವ ಆರ್ಯನ್ ಖಾನ್ ವಿಚಾರಣೆಯನ್ನು ಇಂದು ಕೂಡ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಆರ್ಯನ್ ಖಾನ್ ಹಾಗೂ ಮತ್ತೊಬ್ಬ ಆರೋಪಿ ಅರ್ಬಾಜ್ ಸೇಠ್ ಮರ್ಚೆಂಟ್ ನನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಿದ್ದಾರೆ. ಇಬ್ಬರಿಗೂ ಎನ್‌ಸಿಬಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇಬ್ಬರು ಕೊಟ್ಟ ಉತ್ತರಗಳನ್ನು ತಾಳೆ ಹಾಕಿ ನೋಡಿದ್ದಾರೆ. ಆರ್ಯನ್ ಖಾನ್ ವಿಚಾರಣೆಯ ಬಳಿಕ ನಾಲ್ಕು ಪುಟಗಳ ಹೇಳಿಕೆಯನ್ನು ಎನ್‌ಸಿಬಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ಈಗಾಗಲೇ ಮೂರು ದಿನಗಳನ್ನು ಎನ್‌ಸಿಬಿ ವಶದಲ್ಲೇ ಕಳೆದಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್​ನನ್ನು ಕ್ರೂಸ್​ನಲ್ಲಿ ನಡೆದ ಡ್ರಗ್ಸ್ ಪಾರ್ಟಿಯ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಎನ್‌ಸಿಬಿ ಕೇಳುತ್ತಿರುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದು ಗೊತ್ತಾಗದೇ, ಆರ್ಯನ್ ಖಾನ್ ತಬ್ಬಿಬ್ಬು ಆಗಿದ್ದಾನೆ. ಡ್ರಗ್ಸ್ ಎಲ್ಲಿಂದ ಸಿಕ್ತು? ಪೂರೈಕೆ ಮಾಡಿದವರು ಯಾರು? ಯಾವ್ಯಾವ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕದಲ್ಲಿದ್ದೀರಿ? ವಿದೇಶಗಳಿಗೆ ಹೋದಾಗಲೂ ಡ್ರಗ್ಸ್ ಸೇವನೆ ಮಾಡಲಾಗಿತ್ತಾ? ಡ್ರಗ್ಸ್ ಸೇವನೆಗೆ ಹಣ ಕೊಟ್ಟವರು ಯಾರು? ಎಷ್ಟು ವರ್ಷಗಳಿಂದ ಡ್ರಗ್ಸ್ ಸೇವನೆ ಮಾಡುತ್ತಿದ್ದೀರಿ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಖರೀದಿ ವ್ಯವಹಾರ ನಡೆದಿದೆಯೇ? ಎಂಬ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್​ನನ್ನು ಪ್ರಶ್ನೆ ಮಾಡಿದ್ದಾರೆ.

ಆರ್ಯನ್ ಖಾನ್ ಮೊಬೈಲ್ ಚಾಟ್​ಗಳನ್ನು ಆತನ ಮುಂದಿಟ್ಟು ಅವುಗಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಈ ಎಲ್ಲ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕು ಎಂಬುದೇ ಆರ್ಯನ್ ಖಾನ್​ಗೆ ಗೊತ್ತಾಗುತ್ತಿಲ್ಲ. ಅಪ್ಪ ಶಾರೂಖ್ ಖಾನ್ ಜೊತೆ ಮಾತನಾಡಬೇಕು ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾನೆ. ಕನಿಷ್ಠ ಅಪ್ಪನ ಮ್ಯಾನೇಜರ್ ಜೊತೆಗಾದರೂ ಮಾತನಾಡಲು ಅವಕಾಶ ಕೊಡಿ ಎಂದು ಎನ್‌ಸಿಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ. ಆದರೆ, ಅಧಿಕಾರಿಗಳು ಪ್ರತಿ ನಿತ್ಯ ಅಪ್ಪ-ಮಗ ಮಾತನಾಡಲು ಅವಕಾಶ ಕೊಡಲು ಆಗುವುದಿಲ್ಲ ಎಂದು ವಿಚಾರಣೆ ಮುಂದುವರಿಸಿದ್ದಾರೆ.

ಆರ್ಯನ್ ಖಾನ್ ಹಾಗೂ ಅರ್ಬಾಜ್ ಸೇಠ್ ಮರ್ಚೆಂಟ್ ಕೊಟ್ಟ ಮಾಹಿತಿ ಮೇರೆಗೆ ಡ್ರಗ್ಸ್ ಪೆಡ್ಲರ್ ಶ್ರೇಯಸ್ ನಾಯರ್ ಎಂಬಾತನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಕ್ರೂಸ್ ಡ್ರಗ್ಸ್ ಕೇಸ್​ನಲ್ಲಿ ಈವರೆಗೂ 11 ಮಂದಿಯನ್ನು ಎನ್‌ಸಿಬಿ ಬಂಧಿಸಿದೆ. ಕ್ರೂಸ್​ನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದ ನಾಲ್ವರು ಸಂಘಟಕರನ್ನು ವಶಕ್ಕೆ ಪಡೆಯಲಾಗಿದೆ. ಹೇಳಿಕೆ ಪಡೆದು ಅಧಿಕೃತವಾಗಿ ಬಂಧಿಸಲಾಗುತ್ತಿದೆ. ಕಳೆದ ರಾತ್ರಿ ಅರ್ಬಾಜ್ ಸೇಠ್ ಮರ್ಚೆಂಟ್​ನನ್ನು ಎನ್‌ಸಿಬಿ ಕಚೇರಿಯಿಂದ ಹೊರಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.

ಚಿನ್ನದ ಚಮಚದಲ್ಲಿ ಊಟ ಮಾಡುತ್ತಿದ್ದ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್​ ಈಗ ಸ್ಟ್ರೀಟ್ ಫುಡ್ ಊಟ ಮಾಡಬೇಕಾಗಿದೆ. ಮುಂಬೈನ ಎನ್‌ಸಿಬಿ ಕಚೇರಿ ಬಳಿಯ ಸ್ಟ್ರೀಟ್ ಫುಡ್​ನಿಂದ ಪೂರಿ-ಬಜ್ಜಿ, ಪರೋಟಾ, ದಾಲ್-ರೈಸ್ ಅನ್ನು ಇಂದು ಬೆಳಿಗ್ಗೆ ನೀಡಲಾಗಿದೆ. ಎನ್‌ಸಿಬಿ ಕಚೇರಿ ಬಳಿ ಇರುವ ರೆಸ್ಟೋರೆಂಟ್​ನಿಂದ ರಾತ್ರಿ ಬಿರಿಯಾನಿಯನ್ನು ಅಧಿಕಾರಿಗಳು ತಂದುಕೊಟ್ಟಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ವಿಚಾರಣೆಯನ್ನು ಮುಂದುವರಿಸಲಿದ್ದಾರೆ.

ಕಾರ್ಡಿಲಿಯಾ ಕ್ರೂಸ್​ಗೆ ಅನುಮತಿ ಕೊಟ್ಟಿರಲಿಲ್ಲ!
ಕಳೆದ ಶನಿವಾರ ರಾತ್ರಿ ಮುಂಬೈ ಕಡಲತೀರದಿಂದ ಗೋವಾಗೆ ಹೊರಟಿದ್ದ ಕಾರ್ಡಿಲಿಯಾ ಕ್ರೂಸ್​ಗೆ ಸೂಕ್ತ ಅನುಮತಿಯೇ ಇರಲಿಲ್ಲ ಎನ್ನುವುದು ಈಗ ಬಹಿರಂಗವಾಗಿದೆ. ಕ್ರೂಸ್ ನಲ್ಲಿ ಫ್ಯಾಷನ್ ಟಿವಿ ಎಂ.ಡಿ. ಖಾಸೀಫ್ ಖಾನ್ ಕ್ರೇ ಆರ್ಕ್ ಪಾರ್ಟಿ ಆಯೋಜಿಸಿದ್ದರು. ಆದರೆ, ಬಂದರು ಇಲಾಖೆಯ ಡೈರೆಕ್ಟರ್ ಜನರಲ್ ಅವರಿಂದ ಸೂಕ್ತ ಅನುಮತಿ ಪಡೆದಿರಲಿಲ್ಲ ಎಂದು ಆರ್​ಟಿಐನಡಿ ಕೇಳಿದ್ದ ಪ್ರಶ್ನೆಗೆ ಮುಂಬೈ ಪೋರ್ಟ್ ಟ್ರಸ್ಟ್ ಉತ್ತರ ನೀಡಿದೆ.

ಮಹಾರಾಷ್ಟ್ರ ಮರೀಟೈಮ್ ಬೋರ್ಡ್ ಹಾಗೂ ಮುಂಬೈ ಪೊಲೀಸ್ ಇಲಾಖೆಯ ಯೆಲ್ಲೋ ಗೇಟ್ ಪೊಲೀಸರಿಂದಲೂ ಅನುಮತಿ ಪಡೆದಿರಲಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಹೈಪ್ರೊಫೈಲ್ ವ್ಯಕ್ತಿಗಳಿಗೆ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಕ್ರೂಸ್​ಗೆ 80 ಸಾವಿರದಿಂದ 3.5 ಲಕ್ಷ ರೂಪಾಯಿವರೆಗೂ ಪ್ರವೇಶ ದರ ಇತ್ತು. ಟಿಕೆಟ್ ಬುಕ್ ಮಾಡಿದ್ದಕ್ಕೆ ಮನರಂಜನಾ ತೆರಿಗೆ ಪಾವತಿ ಮಾಡದೇ ಮಹಾರಾಷ್ಟ್ರ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಕಾರ್ಡಿಲಿಯಾ ಕ್ರೂಸ್​ಗೆ ಪ್ರತಿಕೂಲ ಹವಾಮಾನದ ಎಚ್ಚರಿಕೆ ನೀಡಲಾಗಿತ್ತು. ಗುಲಾಬ್ ಸೈಕ್ಲೋನ್ ಹಾಗೂ ಶಾಹೀನ್ ಸೈಕ್ಲೋನ್ ಕಾರಣದಿಂದ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇರುತ್ತೆ. ಕ್ರೂಸ್ ಸಂಚರಿಸುವುದು ಸೂಕ್ತವಲ್ಲ ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು. ಇದನ್ನು ನಿರ್ಲಕ್ಷಿಸಿ ಕ್ರೂಸ್ ಸಮುದ್ರದಲ್ಲಿ ಸಂಚಾರ ಮಾಡಿದೆ. ಈ ಮೂಲಕ ಕ್ರೂಸ್ ಪಾರ್ಟಿ ಆಯೋಜಕರು ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟ ಆಡಿದ್ದಾರೆ.

(Mumbai Cruise Drugs Party Case Aryan Khan 11 Others Arrested Court Orders for NCB Custody upto October 11)

ಇದನ್ನೂ ಓದಿ: ಶಾರುಖ್​ ಪುತ್ರನಿಗೆ ಎನ್​ಸಿಬಿ ಫುಲ್​ ಗ್ರಿಲ್​; ಆರ್ಯನ್​ ಖಾನ್​ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು

ಇದನ್ನೂ ಓದಿ: ಆರ್ಯನ್​ ಖಾನ್​ ಜತೆ ಬಂಧನಕ್ಕೊಳಗಾದ ಈ ಗ್ಲಾಮರ್ ಬೆಡಗಿ ಯಾರು?