ಪಾಕಿಸ್ತಾನಿ ಉಗ್ರ ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿದಿದ್ದ ಪೊಲೀಸರಿಗೆ ಪ್ರಮೋಷನ್
2008ರ ನವೆಂಬರ್ 26ರಂದು ಮುಂಬೈ ಮೇಲಿನ ದಾಳಿಯಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮುಂಬೈ: 26/11 ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿದ ವೀರ ಪೊಲೀಸ್ ಸಿಬ್ಬಂದಿಗೆ 2008ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಗಾಗಲೇ ಈ ಪೊಲೀಸರು ಪದಕಗಳು, ಪ್ರಶಸ್ತಿಗಳು ಮತ್ತು ನಗದು ಬಹುಮಾನಗಳನ್ನು ಪಡೆದಿದ್ದರು. ಆದರೆ ಇದಕ್ಕೂ ಮೊದಲು ಅವರಿಗೆ ಪ್ರಮೋಷನ್ ನೀಡಿರಲಿಲ್ಲ. ಆದ್ದರಿಂದ 2022ರ ಮಾರ್ಚ್ 22ರಂದು ಸರ್ಕಾರದ ಆದೇಶದ ಪ್ರಕಾರ ಅವರಿಗೆ ಬಡ್ತಿ ನೀಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿದಿದ್ದ ಪೊಲೀಸರಿಗೆ ಒಂದು-ಹಂತದ ಬಡ್ತಿ ನೀಡಲು ನಿರ್ಧರಿಸಲಾಗಿದೆ. ಒಂದು ಹಂತದ ಬಡ್ತಿ ಎಂದರೆ ಈ ಅಧಿಕಾರಿಗಳು 2008ರಿಂದ ಅನ್ವಯವಾಗುವಂತೆ ಮುಂದಿನ ಉನ್ನತ ಶ್ರೇಣಿಗಾಗಿ ಬಾಕಿ ಇರುವ ವೇತನಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯುತ್ತಾರೆ.
ಕಸಬ್‌ನನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಒಬ್ಬ ಅಧಿಕಾರಿಯ ಪ್ರಕಾರ, ಕಸಬ್‌ನನ್ನು ಹಿಡಿದ ಪೊಲೀಸರಿಗೆ 2 ಲಕ್ಷದಿಂದ 8 ಲಕ್ಷದವರೆಗೆ ಹಣ ನೀಡಲಾಗುತ್ತದೆ. 2008ರ ನವೆಂಬರ್ 26ರಂದು ಮುಂಬೈ ಮೇಲಿನ ದಾಳಿಯಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
26/11ರಂದು ಮುಂಬೈ ಮೇಲೆ ದಾಳಿ ಮಾಡಿದ 10 ಪಾಕಿಸ್ತಾನಿ ಭಯೋತ್ಪಾದಕರ ಪೈಕಿ ಕಸಬ್ ಮಾತ್ರ ಗಿರ್ಗಾಮ್ ಚೌಪಾಟಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದಿದ್ದ. ಈ ಕಾರ್ಯಾಚರಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ತುಕಾರಾಂ ಓಂಬಾಳೆ ಮೃತಪಟ್ಟಿದ್ದರು. ಕಾನ್ಸ್‌ಟೇಬಲ್‌ಗಳಿಂದ ಹಿಡಿದು ಇನ್ಸ್‌ಪೆಕ್ಟರ್‌ಗಳವರೆಗೆ ಒಟ್ಟು 15 ಪೊಲೀಸರು ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿದ ತಂಡದಲ್ಲಿ ಭಾಗವಾಗಿದ್ದರು. ಅವರಲ್ಲಿ ಎಂಟು ಮಂದಿ ನಿವೃತ್ತರಾಗಿದ್ದಾರೆ.
ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಕಸಬ್‌ನನ್ನು 2012ರ ನವೆಂಬರ್ 21ರಂದು ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.
ಇದನ್ನೂ ಓದಿ: 26/11 Mumbai Attack: 26/11ಕ್ಕೆ ಮುಂಬೈನಲ್ಲಿ ಏನೇನಾಯ್ತು?; ಇಲ್ಲಿದೆ ಕರಾಳ ಘಟನೆಯ ವಿವರ
Anti Terrorism Day 2021: ಭಾರತವನ್ನು ನಡುಗಿಸಿದ 3 ಭಯೋತ್ಪಾದಕ ದಾಳಿಗಳು ಯಾವುವು?
Published On - 8:35 pm, Wed, 30 March 22