ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ್ದ ಡಿಎಂಕೆ ಸಂಸದ ದಯಾನಿಧಿ ಮಾರನ್ ವಿರುದ್ಧ ಎಐಎಡಿಎಂಕೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಜಯಲಲಿತಾ ಮತ್ತು ಮೋದಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಿಂದನೀಯ ಮತ್ತು ಅಸಂಸದೀಯ ಪದ ಬಳಸುವ ಮೂಲಕ ದಯಾನಿಧಿ ಮಾರನ್ ಚುನಾವಣಾ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಎಐಎಡಿಎಂಕೆ ಜಂಟಿ ಕಾರ್ಯದರ್ಶಿ ಆರ್.ಎಂ. ಬಾಬು ಮುರುಗವೇಲ್ ದೂರು ನೀಡಿದ್ದಾರೆ.
ದೂರಿನ ಪ್ರಕಾರ ಮಾರ್ಚ್ 28ರಂದು ಕಿನಾತುಕಡವ್ ಚುನಾವಣಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ದಯಾನಿಧಿ ಮಾರನ್, ಜಯಲಿಲಿತಾ ಅವರು ಅಮ್ಮ, ಮೋದಿ ಅಪ್ಪ ಅಂತೆ. ಇದು ಯಾವ ರೀತಿಯ ಸಂಬಂಧ ಎಂದು ಕೇಳಿದ್ದರು. ಎರಡು ವರ್ಷಗಳ ಹಿಂದೆ ಎಐಎಡಿಎಂಕೆ ಸಚಿವ ಕೆ.ರಾಜೇಂದ್ರ ಬಾಲಾಜಿ ಅವರು ಪ್ರಾಸಕ್ಕಾಗಿ ಮೋದಿ ಈಸ್ ಅವರ್ ಡ್ಯಾಡಿ ಎಂದು ಹೇಳಿದ್ದನ್ನು ಉಲ್ಲೇಖಿಸಿ ಮಾರನ್ ಈ ಮಾತನ್ನಾಡಿದ್ದಾರೆ ಎಂದು ಮುರುಗವೇಲ್ ಹೇಳಿದ್ದಾರೆ.
ಮೋದಿ ಮತ್ತು ಜಯಲಲಿತಾ ಅವರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ದಯಾನಿಧಿ ಮಾರನ್ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಿಸಿ, ಚುನಾವಣಾ ಪ್ರಚಾರಕ್ಕೆ ಬಾರದಂತೆ ಅವರಿಗೆ ನಿಷೇಧ ಹೇರಬೇಕು ಎಂದು ಬಾಬು ಮುರುಗವೇಲ್ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಡಿಎಂಕೆ ಸಂಸದ, ಮಾಜಿ ಸಚಿವ ಎ. ರಾಜಾ ಅವರು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರ ಅಮ್ಮನನ್ನು ಅವಮಾನಿಸಿ ಹೇಳಿಕೆಯೊಂದು ನೀಡಿ ವಿವಾದಕ್ಕೀಡಾಗಿದ್ದರು. ರಾಜಾ ಅವರ ಹೇಳಿಕೆಗೆ ನೊಂದು ಪಳನಿಸ್ವಾಮಿ ಕಣ್ಣೀರು ಹಾಕಿದ್ದರು. ಈ ಪ್ರಕರಣದಲ್ಲಿ ಚುನಾವಣಾ ಆಯೋಗ ರಾಜಾ ಅವರಿಗೆ ಮಧ್ಯಂತರ ನೋಟಿಸ್ ನೀಡಿತ್ತು.
ಗುರುವಾರ ಚುನಾವಣಾ ಕಾರ್ಯಕ್ರಮವೊಂದರಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಪುತ್ರ ಉದಯನಿಧಿ, ಸುಷ್ಮಾ ಸ್ವರಾಜ್ ಎಂಬ ವ್ಯಕ್ತಿಯೊಬ್ಬರಿದ್ದರು, ಆಕೆ ಮೋದಿಯವರ ಒತ್ತಡ ತಡೆಯಲಾರದೆ ಮೃತಪಟ್ಟಿದ್ದರು. ಅರುಣ್ ಜೇಟ್ಲಿ ಎಂಬ ವ್ಯಕ್ತಿಯೊಬ್ಬರಿದ್ದರು, ಮೋದಿಯವರ ಕಿರುಕುಳದಿಂದ ಅವರು ಅಸುನೀಗಿದ್ದರು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಚುನಾವಣಾ ಪ್ರಚಾರಕ್ಕಾಗಿ ನಮ್ಮ ಅಮ್ಮನ ಹೆಸರು ಬಳಸಬೇಡಿ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಬಾನ್ಸುರಿ, ಉದಯನಿಧಿ ಜೀ, ನಿಮ್ಮ ಚುನಾವಣಾ ಪ್ರಚಾರಕ್ಕಾಗಿ ನನ್ನ ಅಮ್ಮನ ಹೆಸರು ಎಳೆದು ತರಬೇಡಿ. ನಿಮ್ಮ ಹೇಳಿಕೆ ತಪ್ಪು. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಅಮ್ಮನಿಗೆ ಮಹತ್ತಾದ ಗೌರವ ಮತ್ತು ಮನ್ನಣೆ ನೀಡಿದ್ದರು. ನಮ್ಮ ಕಷ್ಟಕಾಲದಲ್ಲಿ ಪ್ರಧಾನಿ ಮತ್ತು ಬಿಜೆಪಿ ನಮ್ಮ ಹಿಂದೆ ಅಚಲವಾಗಿ ನಿಂತಿತ್ತು. ನಿಮ್ಮ ಹೇಳಿಕೆಯಿಂದ ನೋವಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಡಿಎಂಕೆ ಅಭ್ಯರ್ಥಿ ದಿಂಡಿಗಲ್ ಲಿಯೋನಿ ಅವರು ಮಹಿಳೆಯರು ವಿದೇಶಿ ಹಸುಗಳ ಹಾಲುಗಳನ್ನು ಕುಡಿಯುತ್ತಿರುವ ಕಾರಣ ಅವರ ತೂಕ ಹೆಚ್ಚಾಗುತ್ತಿದೆ. ಇದೇ ಕಾರಣದಿಂದ, ತೆಳ್ಳಗೆ ಇರಬೇಕಿದ್ದ ಅವರ ಸೊಂಟ ದಪ್ಪವಾಗುತ್ತಿದೆ. ಮೊದಲೆಲ್ಲ ಮಹಿಳೆಯರ ಆಕಾರ ಎಂಟರ ಆಕೃತಿಯಲ್ಲಿ ಇರುತ್ತಿತ್ತು. ಅಂದರೆ ಸೊಂಟ ತೆಳುವಾಗಿ ಇರುತ್ತಿತ್ತು. ಮಕ್ಕಳನ್ನು ಎತ್ತಿಕೊಂಡರೆ ಆ ಮಗು ತಾಯಿಯ ಸೊಂಟದ ಮೇಲೆ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಈಗೀಗ ಮಹಿಳೆಯ ಸೊಂಟ ಪೀಪಾಯಿಯಂತೆ ದೊಡ್ಡದಾಗಿ ಇರುತ್ತದೆ. ಹಾಗಾಗಿ ಮಕ್ಕಳನ್ನು ಸೊಂಟದ ಮೇಲೆ ಎತ್ತಿಕೊಳ್ಳಲೂ ಅವರಿಗೆ ಆಗುವುದಿಲ್ಲ ಎಂದು ಟೀಕೆ ಮಾಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ನಯನತಾರಾ-ಉದಯನಿಧಿ ಲಿವ್ಇನ್ನಲ್ಲಿದ್ದರೆ ನಾನೇನು ಮಾಡಲಿ?: ವಿವಾದ ಎಬ್ಬಿಸಿದ ಹೇಳಿಕೆ
ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವಿಗೆ ನರೇಂದ್ರ ಮೋದಿಯವರ ಕಿರುಕುಳವೇ ಕಾರಣ: ಸ್ಟಾಲಿನ್ ಪುತ್ರ ಉದಯನಿಧಿ
(mummy daddy comment AIADMK files complaint with the Election Commission against DMK MP Dayanidhi Maran)
Published On - 4:56 pm, Fri, 2 April 21