Assam Assembly Elections 2021: ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆ; ಅಸ್ಸಾಂನ ರತಾಬಾರಿಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

EVM in Assam: ಗುರುವಾರ ರಾತ್ರಿ ಕರೀಂಗಂಜ್ ಜಿಲ್ಲೆಯ ಇಂದಿರಾ ಎಂ.ವಿ. ಶಾಲೆಯಲ್ಲಿರುವ ಮತಗಟ್ಟೆ 149ರಲ್ಲಿನ ಮತಯಂತ್ರವನ್ನು ಸಾಗಿಸುತ್ತಿದ್ದ ಕಾರನ್ನು ಜನರ ಗುಂಪೊಂದು ತಡೆದು ನಿಲ್ಲಿಸಿತ್ತು.

Assam Assembly Elections 2021: ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆ; ಅಸ್ಸಾಂನ ರತಾಬಾರಿಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Apr 02, 2021 | 3:58 PM

ದಿಸ್ಪುರ್: ಅಸ್ಸಾಂನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆಯಾಗಿರುವ ಹಿನ್ನಲೆಯಲ್ಲಿ ಇಲ್ಲಿನ ರತಾಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. ಮತಯಂತ್ರಗಳನ್ನು ಸಾಗಿಸುವಾಗ ನಿಯಮಾವಳಿಗಳ ಉಲ್ಲಂಘನೆ ಆಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಮತಗಟ್ಟೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿ ಅಮಾನತು ಮಾಡಲಾಗಿದೆ. ಈ ಅಚಾತುರ್ಯಕ್ಕಾಗಿ ಮೂವರು ಅಧಿಕಾರಿಗಳನ್ನೂ ಚುನಾವಣಾ ಆಯೋಗ ಅಮಾನತು ಮಾಡಿದೆ.

ಗುರುವಾರ ರಾತ್ರಿ ಕರೀಂಗಂಜ್ ಜಿಲ್ಲೆಯ ಇಂದಿರಾ ಎಂ.ವಿ. ಶಾಲೆಯಲ್ಲಿರುವ ಮತಗಟ್ಟೆ 149ರಲ್ಲಿನ ಮತಯಂತ್ರವನ್ನು ಸಾಗಿಸುತ್ತಿದ್ದ ಕಾರನ್ನು ಜನರ ಗುಂಪೊಂದು ತಡೆದು ನಿಲ್ಲಿಸಿತ್ತು. ಮತಯಂತ್ರವನ್ನು ಸಾಗಿಸಲು ಬಳಸಿದ ಕಾರು ಸಮೀಪದ ಚುನಾವಣಾ ಕ್ಷೇತ್ರ ಪಥರ್​ಕಂಡಿ ಎಲ್ಎಸಿ-2 ನಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪೌಲ್ ಅವರದ್ದಾಗಿದೆ ಎಂದು ಜನರು ಆರೋಪಿಸಿದ್ದರು. ಬಿಜೆಪಿ ಶಾಸಕನ ಕಾರಿನಲ್ಲಿ ಮತಯಂತ್ರಗಳನ್ನು ಸಾಗಿಸುವುದನ್ನು ಜನರು ವಿರೋಧಿಸಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ಚುನಾವಣಾ ಆಯೋಗವು ಈ ಬಗ್ಗೆ ವರದಿ ಸಲ್ಲಿಸುವಂತೆ ಅಸ್ಸಾಂ ಮುಖ್ಯ ಚುನಾವಣಾ ಅಧಿಕಾರಿ ಮತ್ತು ಚುನಾವಣಾ ವೀಕ್ಷಕರಿಗೆ ನಿರ್ದೇಶಿಸಿತ್ತು. ಚುನಾವಣಾ ಆಯೋಗದ ವರದಿ ಪ್ರಕಾರ ಇವಿಎಂನ್ನು ಸಾಗಿಸಲು ಬಳಸಿದ್ದ ಕಾರು ಮತಯಂತ್ರ ಇರಿಸಿದ್ದ ಕೇಂದ್ರಕ್ಕೆ  ಹೋಗುವ ದಾರಿಯಲ್ಲಿ ಕೆಟ್ಟು ಹೋಗಿತ್ತು. ಹಾಗಾಗಿ ಮತಗಟ್ಟೆ ಅಧಿಕಾರಿ ಮತ್ತು ಇತರ ಮೂವರು ಅಧಿಕಾರಿಗಳು ಖಾಸಗಿ ವಾಹನವೊಂದನ್ನು ಬಳಸಿದ್ದಾರೆ. ಆ ಹೊತ್ತಲ್ಲಿ ಅವರು ಕಾರಿನ ಮಾಲೀಕರ ಬಗ್ಗೆ ವಿಚಾರಿಸಿರಲಿಲ್ಲ ಎಂದಿದೆ.

ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಕನೈಶಿಲ್ ಎಂಬಲ್ಲಿ ಸುಮಾರು 50ಮಂದಿ ಕಾರನ್ನು ತಡೆಗಟ್ಟಿದಾಗಲೇ ಅಧಿಕಾರಿಗಳಿ ತಮ್ಮ ತಪ್ಪಿನ ಅರಿವಾಗಿದ್ದು. ಜನರ ಗುಂಪು ಕಾರಿನಲ್ಲಿದ್ದವರಿಗೆ ಬೈದು, ಕಾರಿಗೆ ತಡೆಯೊಡ್ಡಿತ್ತು. ಕಾರಿಗೆ ಯಾಕೆ ತಡೆಯೊಡ್ಡುತ್ತಿದ್ದೀರಿ ಎಂದು ಗುಂಪಿನ ನಾಯಕನಲ್ಲಿ ಕೇಳಿದಾಗ ಆ ಕಾರು ಕೃಷ್ಣೇಂದು ಪೌಲ್ ಗೆ ಸೇರಿದ್ದು ಎಂದು ಹೇಳಿರುವುದಾಗಿ ಚುನಾವಣಾ ಆಯೋಗ ತಮ್ಮ ವರದಿಯಲ್ಲಿ ಹೇಳಿದೆ.

ಜನರ ಗುಂಪು ಆ ಕಾರಿಗೆ ಸುಮಾರು 1 ಗಂಟೆಗಳ ಕಾಲ ಕಾರಿಗೆ ತಡೆಯೊಡ್ಡಿದ್ದು ಡಿಇಒ ಮತ್ತು ಎಸ್​ಪಿ ಬಂದ ನಂತರವೇ ಅಲ್ಲಿಂದ ಚದುರಿದ್ದರು. ಕಾರಿನಲ್ಲಿದ್ದ ನಾಲ್ವರು ಅಧಿಕಾರಿಗಳ ಪೈಕಿ ಒಬ್ಬ ಅಧಿಕಾರಿ ನಾಪತ್ತೆಯಾಗಿದ್ದು ಅವರು ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದಾರೆ. ಇವಿಎಂನ ಬ್ಯಾಲೆಟ್ ಯುನಿಟ್ (BU), ಕಂಟ್ರೋಲ್ ಯುನಿಟ್ ( CU) ಮತ್ತು ವಿವಿಪ್ಯಾಟ್ ಗೆ (VVPAT) ಯಾವುದೇ ಹಾನಿ ಸಂಭವಿಸಿಲ್ಲ. ಇದೆಲ್ಲವನ್ನೂ ಮತ್ತೆ ಸ್ಟ್ರಾಂಗ್ ರೂಂನಲ್ಲಿರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇದನ್ನೂ ಓದಿ: Assam Elections 2021: ಅಸ್ಸಾಂನ 8 ಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತು; ಸರ್ಬಾನಂದ ಸೋನೊವಾಲ್, ಜೆಪಿ ನಡ್ಡಾ ವಿರುದ್ಧ ಎಫ್ಐಆರ್

(EVM being transported in BJP candidate car EC orders repoll in Assam Ratabari Assembly seat)