ಮಾಡದ ತಪ್ಪಿಗೆ ಯಾರಿಗೋ ಜೈಲು ಶಿಕ್ಷೆ, ಮೃತಪಟ್ಟಿದ್ದ ಬಾಲಕಿ 7 ವರ್ಷಗಳ ಬಳಿಕ ಜೀವಂತ ಕಂಡಾಗ…
ಕಳೆದ 7 ವರ್ಷಗಳ ಹಿಂದೆ ಅಲಿಗಢದಲ್ಲಿ ನಡೆದ 14 ವರ್ಷದ ಅಪ್ರಾಪ್ತೆಯ ಅಪಹರಣ, ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಳೆದ 7 ವರ್ಷಗಳ ಹಿಂದೆ ಅಂದರೆ 2015ರಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು.
ಕಳೆದ 7 ವರ್ಷಗಳ ಹಿಂದೆ ಅಲಿಗಢದಲ್ಲಿ ನಡೆದ 14 ವರ್ಷದ ಅಪ್ರಾಪ್ತೆಯ ಅಪಹರಣ, ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಳೆದ 7 ವರ್ಷಗಳ ಹಿಂದೆ ಅಂದರೆ 2015ರಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಪೊಲೀಸರಿಗೆ ದೂರು ನೀಡಿದ್ದರು, ಬಳಿಕ ಶವವೊಂದು ಪತ್ತೆಯಾಗಿತ್ತು, ಬಾಲಕಿಯ ತಂದೆ ಇದು ತನ್ನ ಮಗಳದ್ದೇ ಶವ ಎಂದು ಒಪ್ಪಿಕೊಂಡಿದ್ದರು.
ಬಳಿಕ ಕೊಲೆಯ ಆರೋಪವನ್ನು ಅದೇ ಊರಿನವರೊಬ್ಬರ ಮೇಲೆ ಹೊರಿಸಲಾಗಿತ್ತು, ಅವರು ಈಗ ಜೈಲಿನಲ್ಲಿದ್ದಾರೆ. ಆದರೆ ಆಗ ಕಾಣೆಯಾಗಿದ್ದ ಬಾಲಕಿ ಇದೀಗ ಕಾಣಿಸಿಕೊಂಡಿದ್ದು, ಇಬ್ಬರು ಮಕ್ಕಳ ಜತೆಗೆ ವಾಸವಿದ್ದಾಳೆ ಎಂದು ಆರೋಪಿಯ ಕುಟುಂಬದವರು ಆರೋಪಿಸಿದ್ದಾರೆ.
ಆಕೆ ಬದುಕಿದ್ದರೂ ಇಷ್ಟು ವರ್ಷಗಳ ಕಾಲ ಆವರನ್ನು ಜೈಲಿನಲ್ಲಿರಿಸಲಾಗಿದೆ ಎಂದು ದೂರಿದ್ದಾರೆ. ಕೂಡಲೇ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ.
ಆಕೆಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಬಾಲಕಿ ಕಾಣೆಯಾದಾಗ ಆಕೆಗೆ 14 ವರ್ಷ ವಯಸ್ಸಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಸಂಬಂಧಿಕರ ಮಾಹಿತಿ ಮೇರೆಗೆ ಪೊಲೀಸರು ಹತ್ರಾಸ್ ತಲುಪಿ ಬಾಲಕಿಯನ್ನು ಅಲಿಗಢಕ್ಕೆ ಕರೆತಂದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆಕೆಗೆ ಈಗ 21 ವರ್ಷ.
ಬಾಲಕಿಯ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಡಿಎನ್‌ಎ ಪ್ರೊಫೈಲಿಂಗ್ ನಡೆಸಲಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಯನ್ನು ಅಲಿಗಢದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಸೋಮವಾರ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದೇವೆ ಎಂದು ಅಲಿಗಢ ಪೊಲೀಸ್ ಅಧಿಕಾರಿ ರಾಘವೇಂದ್ರ ಸಿಂಗ್ ಹೇಳಿದ್ದಾರೆ. ಹುಡುಗಿಯ ಗುರುತನ್ನು ಖಚಿತಪಡಿಸಿಕೊಳ್ಳಲು ನಾವು ಡಿಎನ್‌ಎ ಪ್ರೊಫೈಲಿಂಗ್ ನಡೆಸಲು ಯೋಜಿಸುತ್ತಿದ್ದೇವೆ. ಡಿಎನ್‌ಎ ಪ್ರೊಫೈಲಿಂಗ್ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಗ್ರಾದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು 2015ರಲ್ಲಿ ಆಗ್ರಾದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆ ಆಗ್ರಾಕ್ಕೆ ಹೋಗಿ ಆ ಶವ ಕಾಣೆಯಾದ ಮಗಳದ್ದು ಎಂದು ಗುರುತಿಸಿದ್ದರು.
ಅಲಿಗಢದಲ್ಲಿ ಬಾಲಕಿಯ ನೆರೆಹೊರೆಯವರ ವಿರುದ್ಧ ಅಪಹರಣ ಮತ್ತು ಕೊಲೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಕಾಯ್ದೆ ದಾಖಲಿಸಿ ಬಂಧಿಸಿದ್ದರು.
ಆರೋಪಿಯನ್ನು ಬಂಧಿಸಿದಾಗ ಆತನಿಗೆ ಸುಮಾರು 20 ವರ್ಷ ವಯಸ್ಸಾಗಿತ್ತು ಮತ್ತು ಆತ ಕಾರ್ಮಿಕನಾಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ನಡೆದು ಸುಮಾರು ಮೂರು ವರ್ಷಗಳ ಬಳಿಕ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ನ್ಯಾಯಾಲಯದ ಕಲಾಪಕ್ಕೆ ಹಾಜರಾಗದ ಕಾರಣ ಆರೋಪಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು.
ಬಳಿಕ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ