ಮೀರತ್: ಮಾಡದ ತಪ್ಪಿಗೆ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಕಾನೂನು ಹೋರಾಟ ನಡೆಸುತ್ತಲೇ ವಕೀಲನಾದ ಯುವಕ!
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅಮಿತ್ ಚೌಧರಿ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದರು. ಬಳಿಕ ತಮ್ಮ ವಿರುದ್ಧದ ಕೊಲೆ ಪ್ರಕರಣದಲ್ಲಿ ತಾವೇ ವಾದ ಮಂಡಿಸಿದರು. ಚರ್ಚೆಗಳು ಮತ್ತು ಸಾಕ್ಷಿಗಳ ವಿಚಾರಣೆಯ ಮೂಲಕ, ನ್ಯಾಯಾಲಯವು 12 ವರ್ಷಗಳ ನಂತರ ಕೊಲೆ ಆರೋಪದಿಂದ ಅವರನ್ನು ಖುಲಾಸೆಗೊಳಿಸಿತು.
ಮೀರತ್, ಡಿಸೆಂಬರ್ 13: ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡು ಜೈಲುಪಾಲಾದ ಯುವಕನೊಬ್ಬ ಜಾಮೀನಿನ ಮೇಲೆ ಹೊರಬಂದು, ಕಾನೂನು ಹೋರಾಟ ನಡೆಸುತ್ತಲೇ ಕಾನೂನು ಪದವಿ ಪಡೆದು ವಕೀಲನಾದ ಸಿನಿಮೀಯ ವಿದ್ಯಮಾನ ಉತ್ತರ ಪ್ರದೇಶದ (Uttar Pradesh) ಮೀರತ್ನಲ್ಲಿ (Meerut) ಬೆಳಕಿಗೆ ಬಂದಿದೆ. ಮೀರತ್ನ ಬಾಗ್ಪತ್ ನಿವಾಸಿಯಾದ ಅಮಿತ್ ಚೌಧರಿ ಎಂಬ 18 ವರ್ಷ ವಯಸ್ಸಿನ ಯುವಕನನ್ನು (12 ವರ್ಷಗಳ ಹಿಂದೆ) ಪೊಲೀಸರು ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಸಿದ್ದಾರೆ. ಪರಿಣಾಮವಾಗಿ ಆತ ಜೈಲುಪಾಲಾಗಬೇಕಾಯಿತು. ಆ ಸಂದರ್ಭ ಪದವಿ ಓದುತ್ತಿದ್ದ ಅಮಿತ್ಗೆ ಅದನ್ನು ಮುಂದುವರಿಸಲಾಗಲಿಲ್ಲ. ಆದರೆ, ಅಪರಾಧವೆಸಗದೇ ಜೈಲುಪಾಲಾದ ಅಮಿತ್ ಕಂಬಿ ಎಣಿಸುತ್ತಲೇ ವಕೀಲನಾಗಬೇಕೆಂಬ ದೃಢ ಸಂಕಲ್ಪ ಮಾಡಿದರು.
ಅದಾದ 2 ವರ್ಷಗಳ ನಂತರ ಅಮಿತ್ಗೆ ಜಾಮೀನು ದೊರೆತು ಬಿಡುಗಡೆಯಾದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅಮಿತ್ ಚೌಧರಿ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದರು. ಬಳಿಕ ತಮ್ಮ ವಿರುದ್ಧದ ಕೊಲೆ ಪ್ರಕರಣದಲ್ಲಿ ತಾವೇ ವಾದ ಮಂಡಿಸಿದರು. ಚರ್ಚೆಗಳು ಮತ್ತು ಸಾಕ್ಷಿಗಳ ವಿಚಾರಣೆಯ ಮೂಲಕ, ನ್ಯಾಯಾಲಯವು 12 ವರ್ಷಗಳ ನಂತರ ಕೊಲೆ ಆರೋಪದಿಂದ ಅವರನ್ನು ಖುಲಾಸೆಗೊಳಿಸಿತು.
ಇದರೊಂದಿಗೆ, ಕೊಲೆ ಪ್ರಕರಣದಲ್ಲಿ ಜೈಲುಪಾಲಾದ 18 ವರ್ಷಗಳ ನಂತರ, ಅಂದರೆ ಅಮಿತ್ 30 ನೇ ವಯಸ್ಸಿನಲ್ಲಿ ನ್ಯಾಯಾಲಯವು ಅವರನ್ನು ದೋಷಮುಕ್ತಗೊಳಿಸಿತು.
ಸೇನೆ ಸೇರುವ ಕನಸು ಕಂಡಿದ್ದ ಅಮಿತ್
ಆರಂಭದಲ್ಲಿ ಸೇನೆಗೆ ಸೇರುವ ಕನಸು ಕಂಡಿದ್ದ ಅಮಿತ್ ಅದಕ್ಕಾಗಿ ಶ್ರಮಿಸಿ, 74ನೇ ಬೆಟಾಲಿಯನ್‌ನಿಂದ ಎನ್‌ಸಿಸಿಯಲ್ಲಿ ಸಿ ಸರ್ಟಿಫಿಕೇಟ್ ಗಳಿಸಿದ್ದರು. ದುರದೃಷ್ಟವಶಾತ್, ಸೆರೆವಾಸದಿಂದಾಗಿ ಸೇನೆ ಸೇರುವ ಕನಸು ನನಸಾಗಲೇ ಇಲ್ಲ.
ಇದನ್ನೂ ಓದಿ: ಲಂಚ ಕೇಳಿದ ಜಗತಿಯಾಲ್ ಸರ್ಕಾರಿ ನೌಕರನಿಗೆ ಜನ ಹೇಗೆ ಸತ್ಕಾರ ಮಾಡಿದರು ನೋಡಿ!
ಅಮಿತ್ ಎದುರಿಸಿದ ಸಂಕಷ್ಟಗಳು
18 ರಿಂದ 30 ನೇ ವಯಸ್ಸಿನ ನಡುವಣ ಅವಧಿಯಲ್ಲಿ ಅಮಿತ್ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ವಕೀಲರಾಗಲು ಅವರು ತಮ್ಮ ಜಿಲ್ಲೆಯನ್ನು ತೊರೆದು ಗುರುಗ್ರಾಮದಲ್ಲಿ ವಾಸಿಸಬೇಕಾಯಿತು. ಅವರು ಕಾನೂನು ಅಭ್ಯಾಸ ಮಾಡಿದರು, ಮಾಸಿಕ 3,000 ರೂ. ಗಳಿಸುವ ಉದ್ಯೋಗವನ್ನು ಪಡೆದರು. ಅದರ ನೆರವಿನಿಂದ ಅಧ್ಯಯನವನ್ನು ಪೂರ್ಣಗೊಳಿಸಿದರು. ಘರ್ಷಣೆಗಳ ಹೊರತಾಗಿಯೂ, ಅಮಿತ್ ಚೌಧರಿ ಅವರು ತಮ್ಮ ಪ್ರಕರಣವನ್ನು ಸಮರ್ಥಿಸಿಕೊಂಡರು ಮತ್ತು ಸಾಕ್ಷಿಗಳು ಮತ್ತು ಪುರಾವೆಗಳ ಆಧಾರದ ಮೇಲೆ ನ್ಯಾಯಾಲಯದಲ್ಲಿ ತಮ್ಮನ್ನು ತಾವೇ ಖುಲಾಸೆಗೊಳಿಸಿಕೊಂಡರು. ಈಗ ಅಮಿತ್ ಮೀರತ್ ಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ