ಪಂಜಾಬ್​​ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆಯಾದ ಸಿಧು ಮೂಸೆವಾಲಾರ ಅಪ್ಪ

Bharat Jodo Yatra ಪ್ರಸಿದ್ಧ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಸಿಧು ಜಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆಗೆ ಹೆಜ್ಜೆಹಾಕುವ ಮೂಲಕ ದ್ವೇಷ, ಭಯ ಮತ್ತು ಹಿಂಸಾಚಾರವನ್ನು ಹರಡುವ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದರು

ಪಂಜಾಬ್​​ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆಯಾದ ಸಿಧು ಮೂಸೆವಾಲಾರ ಅಪ್ಪ
ರಾಹುಲ್ ಗಾಂಧಿ ಜತೆ ಭಾರತ್ ಜೋಡೋ ಯಾತ್ರೆಯಲ್ಲಿ ಬಲ್ಕೌರ್ ಸಿಂಗ್ ಸಿಧು
Updated By: ರಶ್ಮಿ ಕಲ್ಲಕಟ್ಟ

Updated on: Jan 15, 2023 | 8:35 PM

ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಅವರ ತಂದೆ ಇಂದು ಪಂಜಾಬ್ ನಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra)ಹೆಜ್ಜೆ ಹಾಕಿದ್ದಾರೆ. ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ (Rahul Gandhi) ಅವರನ್ನು ಬಲ್ಕೌರ್ ಸಿಂಗ್ ಸಿಧು ಭೇಟಿಯಾದ ವಿಡಿಯೊವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಪ್ರಸಿದ್ಧ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಸಿಧು ಜಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆಗೆ ಹೆಜ್ಜೆಹಾಕುವ ಮೂಲಕ ದ್ವೇಷ, ಭಯ ಮತ್ತು ಹಿಂಸಾಚಾರವನ್ನು ಹರಡುವ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದರು. ಪಂಜಾಬ್‌ನ ಮಾನ್ಸಾದಲ್ಲಿ ಹಗಲು ಹೊತ್ತಿನಲ್ಲಿ ಸಿಧು ಮುಸೇವಾಲಾ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಕಳೆದ ವರ್ಷ ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಎಂದೇ ಖ್ಯಾತರಾಗಿದ್ದ ಶುಭದೀಪ್ ಸಿಂಗ್ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.


ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೆನಡಾ ಮೂಲದ ಸದಸ್ಯ ಗೋಲ್ಡಿ ಬ್ರಾರ್ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದ. ಕಳೆದ ತಿಂಗಳು, ಆತನನ್ನು ಅಮೆರಿಕ ಅಧಿಕಾರಿಗಳು ಬಂಧಿಸಿದ್ದರು. ಸಿಂಗ್ ಈ ಸುದ್ದಿಯನ್ನು ಸ್ವಾಗತಿಸಿದ್ದಾರೆ.

ಇದಕ್ಕೂ ಮುನ್ನ ಗೋಲ್ಡಿ ಬ್ರಾರ್ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿಗೆ ₹ 2 ಕೋಟಿ ಬಹುಮಾನ ಘೋಷಿಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದ್ದಾರೆ. ಅವರು ತಮ್ಮ ಜೇಬಿನಿಂದ ಬಹುಮಾನವನ್ನು ಪಾವತಿಸಲು ಸಹ ಮುಂದಾಗಿದ್ದರು

ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ನಿಧನದ ಹಿನ್ನೆಲೆಯಲ್ಲಿ 24 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಭಾರತ್ ಜೋಡೋ ಯಾತ್ರೆ ಇಂದು ಜಲಂಧರ್‌ನ ಖಾಲ್ಸಾ ಕಾಲೇಜು ಮೈದಾನದಿಂದ ಪುನರಾರಂಭಗೊಂಡಿತು. ಯಾತ್ರೆಯ ವೇಳೆ ಹೃದಯಾಘಾತದಿಂದ ಚೌಧರಿ ಶನಿವಾರ ನಿಧನರಾದರು.

ಯಾತ್ರೆ ಬುಧವಾರ ಪಂಜಾಬ್ ನ ಫತೇಘರ್ ಸಾಹಿಬ್‌ನ ಸಿರ್ಹಿಂದ್‌ನಿಂದ ಪ್ರಾರಂಭವಾಯಿತು. ಲೋಹ್ರಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಯಾತ್ರೆಗೆ ವಿರಾಮ ನೀಡಲಾಗಿತ್ತು.

ಇದನ್ನೂ ಓದಿ:Pokhara Air Crash ಪೋಖರಾದಲ್ಲಿ ನಡೆದದ್ದು ನೇಪಾಳದಲ್ಲಿ 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆಯು ಜನವರಿ 30 ರೊಳಗೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ. ಶ್ರೀನಗರದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡುವ ನಿರೀಕ್ಷೆಯಿದೆ ಇದಕ್ಕಾಗಿ ಕಾಂಗ್ರೆಸ್ 21 ವಿರೋಧ ಪಕ್ಷಗಳ ನಾಯಕರನ್ನು ಆಹ್ವಾನಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ