ಸುಲಿಗೆ, ಬೆದರಿಕೆ ಕರೆಯಿಂದ 6 ಸಾವಿರ ಕೋಟಿ ರೂ. ಯೋಜನೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಶಿಫ್ಟ್: ಫಡ್ನವಿಸ್ ಬೇಸರ
ಸುಲಿಗೆ ಹಾಗೂ ಬೆದರಿಕೆ ಕರೆಗಳಿಂದ 6,000 ಕೋಟಿ ರೂ. ಹೂಡಿಕೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಶಿಫ್ಟ್ ಆಗಿದೆ. ಈ ಬಗ್ಗೆ ಸ್ವತಃ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಾರ್ಯಕ್ರಮವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪುಣೆ: ರಾಜ್ಯದಲ್ಲಿ (ಮಹಾರಾಷ್ಟ್ರ) 6,000 ಕೋಟಿ ರೂ. ಹೂಡಿಕೆ ಮಾಡಲು ಬಯಸಿದ್ದ ಉದ್ಯಮಿಯೊಬ್ಬರು(businessman) ಕಳೆದ ವರ್ಷ ಬೆದರಿಕೆ ಹಾಗೂ ಸುಲಿಗೆ ಕರೆಗಳಿಂದ ತಮ್ಮ ಯೋಜನೆಯನ್ನು ಕರ್ನಾಟಕಕ್ಕೆ (Karnataka) ಸ್ಥಳಾಂತರಿಸಿದ್ದರು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಬೇಸರ ವ್ಯಕ್ತಪಪಡಿಸಿದ್ದಾರೆ. ಅಲ್ಲದೇ ಉದ್ಯಮಿಗಳಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಪುಣೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ , ಕೈಗಾರಿಕಾ ಕ್ಷೇತ್ರದಲ್ಲಿ ರಾಜಕೀಯವನ್ನು ತರಬೇಡಿ ಎಂದು ನಾಯಕರಿಗೆ ಮನವಿ ಮಾಡಿದರು. ಅಲ್ಲದೇ ಕಾರ್ಮಿಕರ ಸಮಸ್ಯೆಗಳ ನೆಪದಲ್ಲಿ ಹಣ ಗಳಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಹೂಡಿಕೆದಾರರೊಬ್ಬರು ಮಧ್ಯಾಹ್ನ ನನ್ನನ್ನು ಭೇಟಿಯಾಗಿ ಒಂದು ವರ್ಷದ ಹಿಂದೆ ಇಲ್ಲಿ (ಮಹಾರಾಷ್ಟ್ರ) 6,000 ಕೋಟಿ ರೂ. ಹೂಡಿಕೆ ಮಾಡಲು ಬಯಸಿದ್ದೆ, ಆದರೆ ಬೆದರಿಕೆ ಹಾಗೂ ಸುಲಿಗೆ ಕರೆಗಳು ಬಂದ ಕಾರಣ ಅದನ್ನು ಕರ್ನಾಟಕಕ್ಕೆ ವರ್ಗಾಯಿಸಿದ್ದೆ ಎಂದು ಅವರು ನನಗೆ ಹೇಳಿದ್ದರು ಎಂದು ಫಡ್ನವಿಸ್ ಹೇಳಿದರು.
ಇದೇ ಪರಿಸ್ಥಿತಿ ಎದುರಾದರೆ ರಾಜ್ಯದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ಅದಕ್ಕಾಗಿಯೇ ಕೈಗಾರಿಕೆಗಳು ಹಾಗೂ ಉದ್ಯಮಿಗಳಿಗೆ ಕಿರುಕುಳ ನೀಡುವ ಪ್ರವೃತ್ತಿಗಳ ಹತ್ತಿಕ್ಕಬೇಕು. ಪಕ್ಷ, ಸಂಘಟನೆ, ಸಮುದಾಯ, ಧರ್ಮ ಇತ್ಯಾದಿಗಳ ಬಗ್ಗೆ ಯೋಚಿಸದೆ ಇಂತಹ ತೊಂದರೆ ಉಂಟು ಮಾಡುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ. ಒಂದು ವೇಳೆ ಕ್ರಮಕೈಗೊಳ್ಳಲು ವಿಫಲವಾದರೆ ಪೊಲೀಸರು ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಮಹಾರಾಷ್ಟ್ರಕ್ಕೆ ಅಪಾರ ಪ್ರಮಾಣದ ಮಾನವ ಸಂಪನ್ಮೂಲವಿರುವುದರಿಂದ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದಾರೆ, ರಾಜಕೀಯವನ್ನು ಉದ್ಯಮಗಳಿಗೆ ತರಬೇಡಿ ಎಂದು ನಾನು ಎಲ್ಲ ನಾಯಕರನ್ನು ಒತ್ತಾಯಿಸುತ್ತೇನೆ. ಕಾರ್ಮಿಕರಿಗೆ ರಕ್ಷಣೆ ಸಿಗಬೇಕು ಆದರೆ ಕೆಲವು ರಾಜಕೀಯ ನಾಯಕರು ಹಣ ಗಳಿಸಲು ಕಾರ್ಮಿಕರ ಭುಜಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ