ಕೊರೊನಾ ಲಸಿಕೆಯೊಂದಿಗೆ ತಳುಕು ಹಾಕಿಕೊಂಡ ಧಾರ್ಮಿಕ ಭಾವನೆ; ಬಳಕೆಗೆ ಇಸ್ಲಾಂ- ಹಿಂದೂ ಮುಖಂಡರ ವಿರೋಧ

| Updated By: Lakshmi Hegde

Updated on: Dec 25, 2020 | 1:48 PM

ಹಂದಿ ಮಾಸದ ಜಿಲೆಟಿನ್​ ಅಂಶವುಳ್ಳ ಚೀನಾದ ಕೊರೊನಾ ಲಸಿಕೆ ಹರಾಮ್​ ಎಂದು ರಾಜಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಸಯೀದ್​ ನೂರಿ ಹೇಳಿದ್ದಾರೆ . ಆದರೆ, ಲಸಿಕೆ ಹರಾಮ್ ಆಗೋದಿಲ್ಲ ಎಂದು​ ಯುಎಇ ಇಸ್ಲಾಂ ಪ್ರಾಧಿಕಾರದ ಅಧ್ಯಕ್ಷ ಶೇಕ್​ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​ ಕೊರೊನಾ ಲಸಿಕೆಯಲ್ಲಿ ಗೋಮಾತೆಯ ರಕ್ತ ಇದೆ. ಆದ್ದರಿಂದ ನಮಗೆ ಬೇಡ ಎನ್ನುತ್ತಿದ್ದಾರೆ.

ಕೊರೊನಾ ಲಸಿಕೆಯೊಂದಿಗೆ ತಳುಕು ಹಾಕಿಕೊಂಡ ಧಾರ್ಮಿಕ ಭಾವನೆ; ಬಳಕೆಗೆ ಇಸ್ಲಾಂ- ಹಿಂದೂ ಮುಖಂಡರ ವಿರೋಧ
ಪ್ರಾತಿನಿಧಿಕ ಚಿತ್ರ
Follow us on

ಮುಂಬೈ: ಚೀನಾದಲ್ಲಿ ತಯಾರಾಗುವ ಕೊರೊನಾ ಲಸಿಕೆಯಲ್ಲಿ ಹಂದಿ ಮಾಂಸದ ಜಿಲಾಟಿನ್​ ಅಂಶ ಬಳಸಲಾಗುತ್ತಿದೆ. ಇದು ಇಸ್ಲಾಂ ಧರ್ಮದವರಿಗೆ ಹರಾಮ್​ ಆಗಿರುವ ಕಾರಣ ಇದನ್ನು ಬಳಸಲಾಗದು. ಮುಸ್ಲಿಮರು ಇಂತಹ ಲಸಿಕೆ ಪಡೆಯುವುದರಿಂದ ದೂರವಿರಿ ಎಂದು ಮುಂಬೈ ರಾಜಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಸಯೀದ್​ ನೂರಿ ಮುಂಬೈನಲ್ಲಿ ನಡೆದ ಸುನ್ನಿ ಮುಸ್ಲಿಂ ಸಭೆಯಲ್ಲಿ ಹೇಳಿದ್ದಾರೆ.

ಈ ಕುರಿತು ವೀಡಿಯೋ ಪ್ರಕಟಣೆ ಹೊರಡಿಸಿರುವ ಸಯೀದ್​ ನೂರಿ, ಭಾರತ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಂದಿ ಮಾಂಸದ ಜಿಲೆಟಿನ್​ ಅಂಶವುಳ್ಳ ಚೀನಾದ ಕೊರೊನಾ ಲಸಿಕೆಗಳನ್ನು ಆಮದು ಮಾಡಿಕೊಳ್ಳಬಾರದು. ಜೊತೆಗೆ ಬೇರೆ ಬೇರೆ ಕಂಪೆನಿಗಳ ಕೊರೊನಾ ಲಸಿಕೆಗಳಲ್ಲಿ ಯಾವ ಅಂಶಗಳನ್ನು ಬಳಸಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆರೋಗ್ಯದ ಹಿತದೃಷ್ಟಿಯಿಂದ ತಪ್ಪಲ್ಲ
ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಇಸ್ಲಾಂ ಪ್ರಾಧಿಕಾರ ಇದಕ್ಕೆ ತದ್ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ಇಸ್ಲಾಂ ಧರ್ಮದಲ್ಲಿ ಹಂದಿಯ ಯಾವುದೇ ಉತ್ಪನ್ನ ಬಳಸುವುದು ನಿಷಿದ್ಧ. ಆದರೆ, ಕೊರೊನಾ ಲಸಿಕೆಯಲ್ಲಿ ಹಂದಿ ಮಾಂಸದ ಜಿಲಾಟೆನ್ ಇದೆ ಎಂಬ ಕಾರಣಕ್ಕೆ ಅದನ್ನು ತಿರಸ್ಕರಿಸುವುದು ಸರಿಯಲ್ಲ. ಇದನ್ನು ಔಷಧಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಕೊರೊನಾ ಸೋಂಕಿನಿಂದ ಮುಕ್ತರಾಗುವ ದೃಷ್ಟಿಯಿಂದ ಲಸಿಕೆ ಸ್ವೀಕರಿಸಬಹುದು ಎಂದು ಯುಎಇ ಇಸ್ಲಾಂ ಪ್ರಾಧಿಕಾರದ ಅಧ್ಯಕ್ಷ ಶೇಕ್​ ಅಬ್ದುಲ್ಲಾ ತಿಳಿಸಿದ್ದಾರೆ.

ಗೋವಿನ ರಕ್ತ ಬಳಸುವ ಲಸಿಕೆ ನಮಗೆ ಬೇಡ
ಇನ್ನೊಂದೆಡೆ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​ ಸಹ ಕೊರೊನಾ ಲಸಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ತಯಾರಾಗುವ ಕೊರೊನಾ ಲಸಿಕೆಗಳಲ್ಲಿ ದನದ ರಕ್ತವನ್ನು ಬಳಸುವುದಾಗಿ ಮಾಹಿತಿ ಇದೆ. ಇದು ಹಿಂದೂಗಳ  ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹುನ್ನಾರ ಎಂದು ಆರೋಪಿಸಿದ್ದಾರೆ.

ಗೋ ಮೂತ್ರ ಅಥವಾ ಗೋವಿನ ಸಗಣಿಯಿಂದ ತಯಾರಿಸಿದ ಲಸಿಕೆಯಿದ್ದರೆ ಅದನ್ನು ಹಿಂದೂಗಳು ಬಳಸಬಹುದು. ಆದರೆ, ಗೋಮಾತೆಯ ರಕ್ತದಿಂದ ತಯಾರಾದ ಕೊರೊನಾ ಲಸಿಕೆ ಪಡೆಯಲಾಗುವುದಿಲ್ಲ. ಇದನ್ನು ಭಾರತದಲ್ಲಿ ಬಳಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ 1 ಕೋಟಿ ಡೋಸ್​ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ – ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್