ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಪರಿಸರ ಉಳಿದರೆ ಮನುಷ್ಯರೂ ಸೇರಿದಂತೆ ಜೀವಸಂಕುಲ ಉಳಿಯುತ್ತದೆ. ನಮ್ಮ ಭೂಮಿಯ ಪರಿಸರ ಅತಿಹೆಚ್ಚು ಹಾನಿಯಾಗುತ್ತಿರುವುದು ಮನುಷ್ಯರಿಂದಲೇ. ಹೀಗಾಗಿ, ನಾವು ಪ್ರತಿಯೊಬ್ಬರೂ ಪರಿಸರ ರಕ್ಷಣೆಯ (Environment Protection) ಮಹತ್ವದ ಜವಾಬ್ದಾರಿ ಹೊರಲೇ ಬೇಕಿದೆ. ನಾವು ಚುನಾಯಿಸಿ ಕಳುಹಿಸಿರುವ ಸರಕಾರ ಈ ಕೆಲಸ ಮಾಡಬೇಕು, ತಾನೇನು ಮಾಡಲು ಸಾಧ್ಯ ಎಂದು ಸುಮ್ಮನೆ ಕೂರಲು ಆಗದು. ನಮ್ಮದೇ ರೀತಿಯಲ್ಲಿ ಪರಿಸರ ರಕ್ಷಣೆ ಕಾರ್ಯದಲ್ಲಿ ಕೈಜೋಡಿಸಬಹುದು. ಈ ವಿಚಾರದಲ್ಲಿ ಖ್ಯಾತ ಪರಿಸರ ಕಾರ್ಯಕರ್ತ ಅಫ್ರೋಜ್ ಷಾ (Afroz Shah) ಆದರ್ಶಪ್ರಾಯ ಎನಿಸಿದ್ದಾರೆ. ಮುಂಬೈನ ವೆರ್ಸೋವಾ ಬೀಚ್ ಪ್ಲಾಸ್ಟಿಕ್ ಮುಕ್ತ ಆಗಲು ಬಹುತೇಕ ಈ ವ್ಯಕ್ತಿಯೇ ಕಾರಣ. ಟಿವಿ9 ನಡೆಸುತ್ತಿರುವ ಮೈ ಇಂಡಿಯಾ ಮೈ ಲೈಫ್ ಗೋಲ್ಸ್ (My India My Life Goals) ಅಭಿಯಾನದಲ್ಲಿ ಪಾಲ್ಗೊಂಡಿರುವ ಅಫ್ರೋಜ್ ಷಾ, ಒಬ್ಬ ಸಾಮಾನ್ಯ ವ್ಯಕ್ತಿಯೂ ಹೇಗೆಲ್ಲಾ ಪರಿಸರಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿಕೊಟ್ಟಿದ್ದಾರೆ.
ಜೂನ್ 5, ವಿಶ್ವ ಪರಿಸರ ದಿನ. 1973ರಿಂದ ಪ್ರತೀ ವರ್ಷವೂ ಈ ದಿನದಂದು ಪರಿಸರ ದಿನ ಆಚರಿಸಲಾಗುತ್ತಿದೆ. ಈ ವರ್ಷ ಗೋಲ್ಡನ್ ಜ್ಯೂಬಿಲಿಯ ಸಂಭ್ರಮ. ಕೇಂದ್ರ ಸರ್ಕಾರ ವಿಶ್ವ ಪರಿಸರ ದಿನದ ಸ್ವರ್ಣಮಹೋತ್ಸವದ ನಿಮಿತ್ತ ಮೈ ಇಂಡಿಯಾ ಮೈ ಲೈಫ್ ಗೋಲ್ಸ್ ಘೋಷವಾಕ್ಯದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಟಿವಿ9 ನೆಟ್ವರ್ಕ್ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದೆ. ವಿವಿಧ ಪರಿಸರಪ್ರೇಮಿಗಳು, ಪರಿಸರ ಕಾರ್ಯಕರ್ತರನ್ನು ಟಿವಿ9 ಈ ಅಭಿಯಾನಕ್ಕೆ ಜೋಡಿಸಿಕೊಂಡಿದೆ. ಅದರಲ್ಲಿ ಅಫ್ರೋಜ್ ಶಾ ಕೂಡ ಒಬ್ಬರು.
ಮುಂಬೈನವರಾದ ಅಫ್ರೋಜ್ ಷಾ ವೃತ್ತಿಯಲ್ಲಿ ವಕೀಲರು. ಮುಂಬೈನ ವರ್ಸೋವಾ ಬೀಚ್ ಕೆಲ ವರ್ಷಗಳ ಹಿಂದೆ ವಿಪರೀತ ಕೊಳಕಾಗಿಹೋಗಿತ್ತು. ಪ್ಲಾಸ್ಟಿಕ್ ತ್ಯಾಜ್ಯಗಳು ಈ ಬೀಚ್ನ ಪರಿಸರಕ್ಕೆ ಮತ್ತು ಸಾಗರಜೀವಿಗಳಿಗೆ ಮಾರಕವಾಗಿದ್ದವು. ಆಗ ಅಫ್ರೋಜ್ ಷಾ ಈ ಬೀಚ್ ಅನ್ನು ತ್ಯಾಜ್ಯಮುಕ್ತಗೊಳಿಸುವ ಸಂಕಲ್ಪದೊಂದಿಗೆ ಸ್ವಚ್ಛ ಅಭಿಯಾನಕ್ಕೆ ಪ್ರೇರಣೆ ನೀಡಿದರು. ಅಫ್ರೋಜ್ ಷಾ ಹಾಗು ಅವರ ಸಂಗಡಿಗ ಪರಿಸರಪ್ರೇಮಿಗಳೆಲ್ಲರೂ ಸೇರಿ ಮುಂಬೈನ ಬೀಚ್ಗಳಿಂದ 50 ಲಕ್ಷ ಕಿಲೋನಷ್ಟು ತ್ಯಾಜ್ಯವನ್ನು ನಿರ್ಮೂಲನೆಗೊಳಿಸಿದರು. ವಿಶ್ವಾದ್ಯಂತ ಜನರು ತಾವಿರುವ ಸ್ಥಳದ ಸುತ್ತಮುತ್ತ ತ್ಯಾಜ್ಯಮುಕ್ತಗೊಳಿಸಲೂ ಶಾ ಪ್ರೇರಣೆ ನೀಡಿದರು. ವಿಸ್ವಸಂಸ್ಥೆಯೂ ಕೂಡ ಅಫ್ರೋಜ್ ಷಾ ಅವರಿಗೆ ಶಾಹಬ್ಬಾಸ್ಗಿರಿ ಹೇಳಿದೆ.
ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Wed, 21 June 23