ದೇಶ ವಿಭಜನೆ ವೇಳೆ ಪಾಕ್ ಪಾಲಾದ ಕುಟುಂಬದ ಮೂಲ ಅರಸಿ ಹೋದ ಭಾರತೀಯ; ಕಪ್ಪು ನವಿಲಿನ ಜಾಡು ಹಿಡಿದು ಹೊರಟ ರೋಚಕ ಕತೆ

75 years of Partition: 'ನನ್ನ ಅಜ್ಜ ಅಜ್ಜಿ 1947 ರಲ್ಲಿ ಆ ಹವೇಲಿಯಿಂದ ಹೊರಬಂದು ಮತ್ತೆ ಎಂದಿಗೂ ಹಿಂದಿರುಗಲಿಲ್ಲ. ನಾನು ಆ ಹವೇಲಿಯ ಬಾಗಿಲನ್ನು ತರೆದು ನನ್ನ ಕುಟುಂಬದ ಬೇರುಗಳನ್ನು ಪತ್ತೆ ಹಚ್ಚುವುದಕ್ಕಾಗಿ ಕಪ್ಪು ನವಿಲು 72 ವರ್ಷಗಳಿಂದ ಕಾಯುತ್ತಿತ್ತು'

ದೇಶ ವಿಭಜನೆ ವೇಳೆ ಪಾಕ್ ಪಾಲಾದ ಕುಟುಂಬದ ಮೂಲ ಅರಸಿ ಹೋದ ಭಾರತೀಯ; ಕಪ್ಪು ನವಿಲಿನ ಜಾಡು ಹಿಡಿದು ಹೊರಟ ರೋಚಕ ಕತೆ
ಬುಟಾಲಿಯಾ ಅವರ ಪುಸ್ತಕದ ಕವರ್ ಪೇಜ್
Follow us
| Updated By: ರಶ್ಮಿ ಕಲ್ಲಕಟ್ಟ

Updated on: Aug 15, 2021 | 2:17 PM

ದೇಶವಿಭಜನೆ ವೇಳೆ ಲೆಹ್ಂದಾ(ಪಶ್ಚಿಮ ಪಂಜಾಬ್) ಮತ್ತು ಚಾರ್ಧಾ (ಪೂರ್ವ ಪಂಜಾಬ್) ಎಂದು ವಿಂಗಡಣೆ ಆದಾಗ ಪಂಜಾಬಿಗಳ ಹೃದಯ ಮತ್ತು ಮನಸ್ಸಿನ ಮೇಲೆ ಆದ ಗಾಯ ಇನ್ನೂ ಮಾಸಿಲ್ಲ. ಭಾರತ ಮತ್ತು ಪಾಕಿಸ್ತಾನ ತಮ್ಮ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವಾಗ ಪಂಜಾಬಿಯರ ಹೃದಯದಲ್ಲಿ ಎರಡೂ ಕಡೆಗಳಲ್ಲಿ ತಮ್ಮ ಬೇರುಗಳನ್ನು ಪತ್ತೆಹಚ್ಚಲು, ಅವರ ಪೂರ್ವಜರ ಮನೆಗಳ ಒಂದು ನೋಟವನ್ನು ಪಡೆಯಲು ಮತ್ತು ಅವರು ತಮ್ಮ ಬಾಲ್ಯವನ್ನು ಕಳೆದ ಬೀದಿಗಳಿಗೆ ಭೇಟಿ ನೀಡುವ ಆಸೆ ಇನ್ನೂ ಇದೆ. 1947 ರಲ್ಲಿ ಭಾರತ ಅಥವಾ ಪಾಕಿಸ್ತಾನಕ್ಕೆ ತೆರಳಿದ ಹೆಚ್ಚಿನ ಕುಟುಂಬಗಳು ತಮ್ಮ ಪೂರ್ವಜರ ಮನೆಗಳನ್ನು ಮತ್ತೊಮ್ಮೆ ಭೇಟಿ ಮಾಡಲು ಸಾಧ್ಯವಾಗದಿದ್ದರೂ ತರುಣ್ಜಿತ್ ಸಿಂಗ್ ಬುಟಾಲಿಯಾ (56) ಈ ವಿಷಯದಲ್ಲಿ ಅದೃಷ್ಟವಂತರು ಎಂದೇ ಹೇಳಬೇಕು. ತಮ್ಮ ಪೂರ್ವಜರ ಮನೆಯನ್ನು ಹುಡುಕುವುದು ಅಷ್ಟು ಸುಲಭವಲ್ಲ. ಆದರೆ ಅದಕ್ಕೆ ಸಹಾಯವಾಗಿದ್ದು ಕಾಲಾ ಮೋರ್ ಅಥವಾ ಕಪ್ಪು ನವಿಲು. ಈ ಕಪ್ಪು ನವಿಲಿನ ಜಾಡು ಹಿಡಿದು ಹೊರಟ ಅವರ ಹುಡುಕಾಟವು ತಮ್ಮ ಪೂರ್ವಜರ ಹವೇಲಿ ಮುಂದೆ ನಿಲ್ಲಿಸಿತ್ತು.

ಹವೇಲಿ ಗೋಡೆ ಮೇಲಿನ ಕಪ್ಪು ನವಿಲಿನ ಚಿತ್ರ ತರುಣ್ಜಿತ್ ಸಿಂಗ್ ಬುಟಾಲಿಯಾ ಅವರ ಅಜ್ಜಿ ತಮ್ಮ ಮಾತುಗಳಲ್ಲಿ ಕಪ್ಪು ನವಿಲಿನ ಬಗ್ಗೆ ಹೇಳುತ್ತಿದ್ದರು. ಅವರ ಪ್ರಕಾರ . ಕಪ್ಪು ನವಿಲನ್ನು 1947 ರಲ್ಲಿ ಪಾಕಿಸ್ತಾನದ ಗುಜ್ರಾನ್ ವಾಲಾದ ಬುಟಾಲಾ ಹಳ್ಳಿಯಲ್ಲಿ ಅವರ ಪೂರ್ವಜರ ಹವೇಲಿಯ ಹೊರಗೆ ಚಿತ್ರಿಸಲಾಗಿತ್ತು. ಆ ಕಪ್ಪು ನವಿಲಿನ ಚಿತ್ರವನ್ನು ಹುಡುಕಿ ಹೊರಟ ಬುಟಲಿಯಾ ಸ್ವಾತಂತ್ರ್ಯ ಸಿಕ್ಕಿ ಬರೋಬ್ಬರಿ 72ವರ್ಷಗಳ ನಂತರ ಅಂದರೆ ಡಿಸೆಂಬರ್ 2019 ರಲ್ಲಿ ಹವೇಲಿಯನ್ನು ಪತ್ತೆ ಹಚ್ಚಿದರು. ಹವೇಲಿಯ ಗೋಡೆಯಿಂದ ಹೆಚ್ಚಿನ ಪ್ಲಾಸ್ಟರ್ ಹೋಗಿತ್ತು, ಆದರೆ ಕಪ್ಪು ನವಿಲು ಇನ್ನೂ ಅಲ್ಲೇ ಇತ್ತು.

ಮೂಲ ಮನೆ ಹುಡುಕಿದ ಪಯಣ ಪುಸ್ತಕವಾಯಿತು ‘ಮೈ ಜರ್ನಿ ಬ್ಯಾಕ್ ಹೋಮ್ – ಗೋಯಿಂಗ್ ಬ್ಯಾಕ್ ಟು ಲೆಹ್ಂದಾ ಪಂಜಾಬ್’ (‘My Journey Back Home — Going Back to Lehnda Punjab) ಎಂಬ ಪುಸ್ತಕದಲ್ಲಿ ಬುಟಾಲಾ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಈ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಯಿತು ಮತ್ತು ಪಾಕಿಸ್ತಾನದ ವಿದ್ವಾಂಸರು ಶಹಮುಖಿ ಪಂಜಾಬಿಗೆ ಇದನ್ನು ಅನುವಾದಿಸಿದ್ದಾರೆ.

ನನ್ನ ಅಜ್ಜಿ ನನಗೆ ಆಕೆಯ ಜೀವನದ ಕಥೆಯನ್ನು ಹಲವು ಬಾರಿ ಹೇಳಿದ್ದರು. ಅವರು ಹೇಗೆ ತಮ್ಮ ಪೂರ್ವಿಕರ ಗ್ರಾಮವನ್ನು ತೊರೆದು 1947 ರಲ್ಲಿ ಚಾರ್ಧಾ ಪಂಜಾಬ್‌ಗೆ ಬಂದರು. ಸಂಭಾಷಣೆಯ ಸಮಯದಲ್ಲಿ ನಾನು ನಮ್ಮ ಪೂರ್ವಜರ ಮನೆಗೆ ಹಿಂತಿರುಗಬಹುದೇ? ಹಾಗೆ ಹೋಗುವುದಾದರೆ ನಾನು ಮನೆಯನ್ನು ಗುರುತಿಸುವುದು ಹೇಗೆ ಎಂದು ಕೇಳಿದ್ದೆ. ಅದಕ್ಕೆ ಅವರ ಹವೇಲಿಯ ಮುಂಭಾಗದಲ್ಲಿ ಕಪ್ಪು ನವಿಲನ್ನು ಚಿತ್ರಿಸಲಾಗಿದೆ ಎಂದಿದ್ದರು ಅಂತಾರೆ ಬುಟಾಲಿಯಾ.

ಈ ಪುಸ್ತಕವು ಅವರ ಕುಟುಂಬಕ್ಕೆ ಮರಳಿದ ಮತ್ತು ಅವರ ಪೂರ್ವಜರ ಹವೇಲಿಯ ದ್ವಾರಗಳನ್ನು ಮತ್ತೊಮ್ಮೆ ತೆರೆಯಲು ‘ಕಾಯುತ್ತಿದ್ದ’ ಕಪ್ಪು ನವಿಲಿಗೆ ಧನ್ಯವಾದ ಹೇಳುವ ಕವಿತೆಯೊಂದಿಗೆ ಆರಂಭವಾಗುತ್ತದೆ. ಅಮೆರಿಕ ಮೂಲದ ಅಂತರ್ -ಧರ್ಮ ಕಾರ್ಯಕರ್ತ ಮತ್ತು ಸಿಖ್ ಕೌನ್ಸಿಲ್ ಫಾರ್ ಇಂಟರ್ ಫೇತ್ ರಿಲೇಶನ್ಸ್ ನ ಸ್ಥಾಪಕ ಟ್ರಸ್ಟಿಯಾದ ಬುಟಾಲಿಯಾ ಅವರು ಚಂಡೀಗಢದಲ್ಲಿ ಹುಟ್ಟಿ ಬೆಳೆದು ನಂತರ ಅಮೆರಿಕಕ್ಕೆ ತೆರಳಿದ್ದರು. “ನಾನು 1965 ರಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ತೊಡಗಿದಾಗ ನಾನು ಜನಿಸಿದೆ. ನನ್ನ ತಂದೆ ಭಾರತೀಯ ಸೇನೆಯಲ್ಲಿದ್ದರು. ನಾವು ಗಡಿ ಪಟ್ಟಣವಾದ ಟಾರ್ನ್ ತರನ್ ಗೆ ತೆರಳಿದ ನಂತರವೇ ನಾನು ಗಡಿಯ ಇನ್ನೊಂದು ಬದಿಯಲ್ಲಿರುವ ನನ್ನ ಕುಟುಂಬದ ಪರಂಪರೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು ಎಂದು ಬುಟಾಲಿಯಾ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಲೇಖಕರು ‘ಬುಟಾಲಾ ‘ ಗ್ರಾಮಕ್ಕೆ ಆ ಹೆಸರು ಹೇಗೆ ಬಂತು ಎಂಬುದರ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಿದ್ದಾರೆ.”1800 ರ ದಶಕದ ಆರಂಭದ ವೇಳೆಗೆ, ನನ್ನ ಪೂರ್ವಜರು 42 ಜಾಗೀರ್‌ಗಳನ್ನು (ಫ್ಯೂಡಲ್ ಭೂ ಅನುದಾನ) ಸಂಗ್ರಹಿಸಿದ್ದರು. ಅವರು ಪಂಜಾಬ್‌ನ ಅತಿದೊಡ್ಡ ಭೂಮಾಲೀಕರಲ್ಲಿ ಒಬ್ಬರಾಗಿದ್ದರು. ಪಂಜಾಬಿ ಭಾಷೆಯಲ್ಲಿ ‘ಬಟಾಲಿ’ ಎಂದರೆ 42 ಮತ್ತು ಅಂದಿನಿಂದ ಆ ಗ್ರಾಮವನ್ನು ‘ಬುಟಾಲಾ’ ಎಂದು ಕರೆಯಲಾಗುತ್ತದೆ, “ಎಂದು ಅವರು ಹೇಳುತ್ತಾರೆ. ಈ ಗ್ರಾಮವು ಗುಜ್ರಾನ್ ವಾಲಾದಿಂದ ಪಶ್ಚಿಮಕ್ಕೆ ಸುಮಾರು 15 ಮೈಲಿ ದೂರದಲ್ಲಿದೆ.

ಅಕ್ಟೋಬರ್ 1947 ರಲ್ಲಿ ಗಡಿಭಾಗಕ್ಕೆ ತಲುಪುವ ಮುನ್ನದಲು ಪಾಕಿಸ್ತಾನದಲ್ಲಿರುವ ತನ್ನ ಅಜ್ಜಿಯರನ್ನು ಮುಸ್ಲಿಂ ಕುಟುಂಬ ಹೇಗೆ ರಕ್ಷಿಸಿತು ಎಂಬುದರ ಕುರಿತು ಬುಟಾಲಿಯಾ ಇನ್ನೊಂದು ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಆ ವರ್ಷದ ಸೆಪ್ಟೆಂಬರ್‌ನಲ್ಲಿ, ನಮ್ಮ ಮನೆಗೆ ಜನರು ಬೆಂಕಿ ಹಚ್ಚಿದ್ದರು ಆದರೆ ಸ್ಥಳೀಯ ಮುಸ್ಲಿಮರು ಬೆಂಕಿಯನ್ನು ನಂದಿಸಿದರು ಮತ್ತು ನನ್ನ ಅಜ್ಜ ಅಜ್ಜಿ – ನರೀಂದರ್ ಕೌರ್ ಮತ್ತು ಕ್ಯಾಪ್ಟನ್ (ನಿವೃತ್ತ) ಅಜಿತ್ ಸಿಂಗ್ ಬುಟಾಲಿಯರನ್ನು ಉಳಿಸಿದರು. ಅದೇ ತಿಂಗಳು ನನ್ನ ಅಜ್ಜ ಜ್ಜಿ ಚಾರ್ಧಾ ಪಂಜಾಬ್‌ಗೆ ಹೋಗಲು ನಿರ್ಧರಿಸಿದರು. ಅವರು ಹೊರಡುವ ದಿನ, ಒಬ್ಬ ಯುವಕ ಅವರನ್ನು ತಡೆದು ನಿಲ್ಲಿಸಿ ಬಟ್ಟೆಗಳನ್ನು ಹೊರತುಪಡಿಸಿ ತಮ್ಮೊಂದಿಗೆ ಏನನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಆಗ ನನ್ನ ಅಜ್ಜಿಯರು ತಮ್ಮ ಪೂರ್ವಜರ ಮನೆಗೆ ಹಿಂದಿರುಗುವುದಿಲ್ಲ ಎಂದು ಅರಿತುಕೊಂಡರು. ಅವರು ಗುಜ್ರಾನ್ ವಾಲಾದ ಬಳಿ ನಿರಾಶ್ರಿತರ ಶಿಬಿರದಲ್ಲಿ ಹಲವು ದಿನಗಳ ಕಾಲ ನಡೆದರು. ಅವರು ಮರಳುವಾಗ ನನ್ನ ಅಜ್ಜ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬುದು ಬ್ರಿಟಿಷ್ ಅಧಿಕಾರಿಗಳಿಗೆ ಗೊತ್ತಾಗಿ ಅವರು ಗಡಿಯುದ್ದಕ್ಕೂ ನಮ್ಮ ಕುಟುಂಬಕ್ಕೆ ಅನುಕೂಲವಾಗುವಂತೆ ನೋಡಿಕೊಂಡರು. ಶಿಬಿರದಿಂದ ಗಡಿಗೆ ಹೋಗುವ ದಾರಿಯಲ್ಲಿ ಗುಂಪೊಂದು ವಾಹನವನ್ನು ತಡೆದು ಕುಟುಂಬವನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿತು. ಆದರೆ ನನ್ನ ಅಜ್ಜ ಅವರಲ್ಲಿ ಕೆಲವರನ್ನು ಗುರುತಿಸಿದರು. ಅವರ ಮನಸ್ಸು ಬದಲಾಯಿತು. ಅವರು ನನ್ನ ಹಿರಿಯರನ್ನು ಲಾಹೋರ್‌ಗೆ ಕರೆದುಕೊಂಡು ಹೋಗಿ ಆಶ್ರಯ ನೀಡಿದರು. ಹಲವಾರು ವಾರಗಳ ಕಾಲ ಅವರು ಲಾಹೋರ್‌ನಲ್ಲಿ ಮುಸ್ಲಿಂ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅಕ್ಟೋಬರ್ 1947 ರ ಅಂತ್ಯದಲ್ಲಿ ಅವರನ್ನು ಗಡಿಭಾಗದಲ್ಲಿ ಕರೆತಂದು ಬಿಡಲಾಯಿತು.

ಅವರು ಗ್ರಾಮವನ್ನು ತೊರೆದ ದಿನ ಅವರನ್ನು ತಡೆದು ಯುವಕ ಮಾಡಿದ ದ್ರೋಹದ ಬಗ್ಗೆ ನೋವಿದೆಯೇ ಎಂದು ಒಮ್ಮೆ ಅಜ್ಜಿಯಲ್ಲಿ ಕೇಳಿದ್ದೆ. ಆಗ ಆಕೆ “ಎಲ್ಲ ಸಮಯದಲ್ಲಿ ನಾವು ಅದೃಷ್ಟವಂತರಾಗಿರುವುದಿಲ್ಲ . ಆ ಯುವಕ ನಮ್ಮ ಜೀವಕ್ಕೆ ಹಾನಿ ಮಾಡದೆಯೇ ಬಿಟ್ಟಿರುವುದಕ್ಕೆ ಅಜ್ಜಿ ಕೃತಜ್ಞಳಾಗಿದ್ದಳು. ತಮ್ಮ ಎಲ್ಲ ಆಸ್ತಿಯನ್ನು ಬಿಟ್ಟು ಹೋಗುವಂತೆ ಯುವಕ ಹೇಳಿದರೂ ಅವಳು ಕೃತಜ್ಞಳಾಗಿದ್ದಳು. ಮುಸ್ಲಿಂ ಕುಟುಂಬಕ್ಕೆ ಅವಳು ವಿಶೇಷವಾಗಿ ಕೃತಜ್ಞಳಾಗಿದ್ದಳು. ಅವರ ಮನೆಗಳಲ್ಲಿ ಅಡಗಿಸಿಟ್ಟರೆ ಗಂಭೀರ ಪರಿಣಾಮಗಳುಂಟಾಗಬಹುದು ಎಂದು ಗೊತ್ತಿದ್ದರೂ ಆ ಕುಟುಂಬ ನಮ್ಮನ್ನು ಕಾಪಾಡಿತು. ನಾವು ಅಪಾರ ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೊಂದಿದ್ದೇವೆ ಎಂದು ಅವರು ನನಗೆ ಹೇಳಿದ್ದು ನನಗೆ ನೆನಪಿದೆ. ಈಗ ಅವಳ ಆಕೆಯ ಮಾತು ನನಗೆ ಅರ್ಥವಾಗಿದೆ. ಅಂತಹ ದುರಂತಗಳ ನಡುವೆಯೂ ಈ ಕೃತಜ್ಞತೆಯ ಪಾಠವು ನನಗೆ ಸ್ಫೂರ್ತಿಯಾಗಿದೆ ಅಂತಾರೆ ಬುಟಾಲಿಯಾ.

ಬುಟಾಲಿಯಾ ಅವರು 2019 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಒಳ್ಳೆಯ ಸಂಗತಿಯನ್ನು ಮಾತ್ರ ಹಂಚಿಕೊಂಡಿದ್ದಾರೆ.

” ಲೆಹ್ಂದಾ ಪಂಜಾಬ್‌ನಲ್ಲಿ ಸುಮಾರು ಎರಡು ವಾರಗಳನ್ನು ಕಳೆದ ನಂತರ ಸ್ಥಳೀಯರ ಆತಿಥ್ಯದಿಂದ ನಾನು ಸಂತೃಪ್ತನಾದೆ. ಜನರು ಪ್ರೀತಿಯಿಂದ ‘ಸರ್ದಾರ್ ಜಿ’ ಎಂದು ಕರೆದರು. ರೆಸ್ಟೋರೆಂಟ್, ಕ್ಯಾಬ್ ಚಾಲಕರು ನನ್ನ ಕೈಯಿಂದ ಹಣ ಸ್ವೀಕರಿಸಿಲ್ಲ. ಲಾಹೋರಿನಲ್ಲಿರುವ ಪ್ರಸಿದ್ಧ ಯೂಸಾಫ್ ಫಲುದಾ ಮಳಿಗೆಯಲ್ಲಿ ನನ್ನ ಜತೆ ಮಾತಿಗಿಳಿದ ಮೌಲವಿ ನನಗೆ ಹೇಳದೆಯೇ ನನ್ನ ಎಲ್ಲ ಬಿಲ್ ಪಾವತಿಸಿದ್ದರು. ಅವನ ಅಜ್ಜಿಯ ಸುಂದರ ನೆನಪುಗಳಲ್ಲಿನ ಕಪ್ಪು ನವಿಲು ಇನ್ನೂ ಅಲ್ಲೇ ಇತ್ತು.

“ನನ್ನ ಅಜ್ಜ ಅಜ್ಜಿ 1947 ರಲ್ಲಿ ಆ ಹವೇಲಿಯಿಂದ ಹೊರಬಂದು ಮತ್ತೆ ಎಂದಿಗೂ ಹಿಂದಿರುಗಲಿಲ್ಲ. ನಾನು ಆ ಹವೇಲಿಯ ಬಾಗಿಲನ್ನು ತರೆದು ನನ್ನ ಕುಟುಂಬದ ಬೇರುಗಳನ್ನು ಪತ್ತೆ ಹಚ್ಚುವುದಕ್ಕಾಗಿ ಕಪ್ಪು ನವಿಲು 72 ವರ್ಷಗಳಿಂದ ಕಾಯುತ್ತಿತ್ತು ಎಂದು ಬುಟಾಲಿಯಾ ಹೇಳುತ್ತಾರೆ. ನನ್ನ ಅಜ್ಜ- ಅಜ್ಜಿಯನ್ನು ಕಾಪಾಡಿದ ಲಾಹೋರ್‌ನ ಬಶೀರ್ ಅಹ್ಮದ್ ವಿರ್ಕ್ ಮತ್ತು ಆತನ ಪತ್ನಿ ಅಮೀನಾ ಬೀಬಿ ಅವರನ್ನು ಬುಟಾಲಿಯಾ ತಮ್ಮ ಪುಸ್ತಕದಲ್ಲಿ ಕೊಂಡಾಡಿದ್ದಾರೆ.. “ನಾನು ಡಿಸೆಂಬರ್ 2020 ರಲ್ಲಿ ಬಶೀರ್ ಅವರ ಮಗ ಮೆಹಮೂದ್ ಬಶೀರ್ ವಿರ್ಕನನ್ನು ಭೇಟಿಯಾದೆ. ಆ ದಿನ ನಾನು ಅವನ ಮಡಿಲಲ್ಲಿ ಅತ್ತಿದ್ದೆ ಎಂದು ಬುಟಾಲಿಯಾ ಪುಸ್ತಕದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:  Independence Day 2021: ರಾಷ್ಟ್ರಧ್ವಜದ ಬಟ್ಟೆ ತಯಾರಾಗುವುದು ಎಲ್ಲಿ ಗೊತ್ತಾ?

ಇದನ್ನೂ ಓದಿ:  75th Independence Day ನಾಲ್ಕು ಹೊಸ ಜಿಲ್ಲೆ, 29 ತಾಲ್ಲೂಕು ಘೋಷಿಸಿದ ಛತ್ತೀಸ್​ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್

(My Journey Back Home Going Back to Lehnda Punjab Tarunjit Singh Butalia’s journey searching ancestral home A black peacock painting)