ನನ್ನ ರಾಜೀನಾಮೆ ಪತ್ರ ಯಾವಾಗಲೂ ಸೋನಿಯಾ ಗಾಂಧಿ ಬಳಿಯೇ ಇರುತ್ತದೆ: ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​

ನನ್ನ ರಾಜೀನಾಮೆ ಪತ್ರ ಯಾವಾಗಲೂ ಸೋನಿಯಾ ಗಾಂಧಿ ಬಳಿಯೇ ಇರುತ್ತದೆ: ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​
ಅಶೋಕ್ ಗೆಹ್ಲೋಟ್

ಸಚಿನ್​ ಪೈಲಟ್​ ಅವರು ಗುರುವಾರ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್​​ನಲ್ಲಿ ಬದಲಾವಣೆಯಾಗುತ್ತದೆ, ಅಶೋಕ್​ ಗೆಹ್ಲೋಟ್​ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂಬ ಸುದ್ದಿ ಹರಡಿದೆ.

TV9kannada Web Team

| Edited By: Lakshmi Hegde

Apr 24, 2022 | 8:43 AM

ರಾಜಸ್ಥಾನದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರೊಳಗೆ ಅಲ್ಲಿನ ಕಾಂಗ್ರೆಸ್​​ನಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ಇಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸುವ ಸಿದ್ಧತೆಗಳು ನಡೆಯುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ, ಈಗಿನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ರಾಜೀನಾಮೆ ಬಗ್ಗೆಯೂ ವದಂತಿ ಹರಡಿದೆ.  ಈ ಎಲ್ಲ ಊಹಾಪೋಹಗಳು ಇರುವಾಗ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ನಾನು ಸಹಿ ಹಾಕಿರುವ, ನನ್ನ ರಾಜೀನಾಮೆ ಪತ್ರ ಯಾವಾಗಲೂ ಸೋನಿಯಾ ಗಾಂಧಿ ಬಳಿಯೇ ಇರುತ್ತದೆ. ಯಾವಾಗ ಅವರು ಮುಖ್ಯಮಂತ್ರಿ ಬದಲಾವಣೆ ಮಾಡಲು ಮುಂದಾದರೂ ಅದರ ಸುಳಿವು ಯಾರಿಗೂ ಸಿಗುವುದಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್​ ಹೈಕಮಾಂಡ್ ಸ್ವತಂತ್ರ. ಆದರೆ ಗಾಳಿಸುದ್ದಿ ಹರಡಿಸಬಾರದು, ಹಾಗೊಮ್ಮೆ ಹರಡಿದರೆ ಅದಕ್ಕೆ ಗಮನವನ್ನೂ ಕೊಡಬಾರದು. ಇದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಸಚಿನ್​ ಪೈಲಟ್​ ಅವರು ಗುರುವಾರ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್​​ನಲ್ಲಿ ಬದಲಾವಣೆಯಾಗುತ್ತದೆ, ಅಶೋಕ್​ ಗೆಹ್ಲೋಟ್​ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂಬಿತ್ಯಾದಿ ವಿಷಯಗಳ ಚರ್ಚೆ ಮುನ್ನೆಲೆಗೆ ಬಂದಿದೆ.  ಅದರಲ್ಲೂ ಕಳೆದ 15 ದಿನಗಳಲ್ಲಿ ಸಚಿನ್ ಪೈಲಟ್​ ಇದು ಎರಡನೇ ಬಾರಿಗೆ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಸಚಿನ್​ ಪೈಲಟ್​ ತಾವು ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಮಾತನಾಡಿ, ನಾವು ಏನು ಮಾತನಾಡಿದ್ದೇವೆ ಎಂದು ಕೇಳಿದರೆ, ಪ್ರತಿಯೊಂದನ್ನೂ ಚರ್ಚಿಸಿದ್ದೇವೆ ಎಂದು ನಾನು ಉತ್ತರಿಸುತ್ತೇನೆ. ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವುದು ಪಕ್ಷದ ಅಧ್ಯಕ್ಷರು. ನಾವೆಲ್ಲ ತಳಮಟ್ಟದಿಂದ ಕೆಲಸ ಮಾಡುತ್ತ ಬರುತ್ತಿದ್ದೇವೆ. ಹೀಗಾಗಿ ಅವರು ಕೇಳಿದಾಗ ನಾವು ಪ್ರತಿಕ್ರಿಯೆ ಕೊಡುವುದು ಜವಾಬ್ದಾರಿ ಎಂದು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ನಡುವಿನ ಭಿನ್ನಾಭಿಪ್ರಾಯ ಇದೇ ಮೊದಲಲ್ಲ. 2020ರ ಜುಲೈನಲ್ಲಿ ಸಚಿನ್ ಪೈಲಟ್​​ ಒಮ್ಮೆ ಕಾಂಗ್ರೆಸ್​ನಿಂದ ರೆಬೆಲ್ ಆಗಿದ್ದರು. ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೆಂಬಲಿಗರೊಂದಿಗೆ ರೆಸಾರ್ಟ್​ಗೆ ತೆರಳಿದ್ದರು. ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಕಮಿಟಿ ರಚಿಸಿ, ಸಚಿನ್​​ರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಪಕ್ಷಕ್ಕೆ ಮರಳಿದ್ದರು.

ಇದನ್ನೂ ಓದಿ: Dr Rajkumar Birth Anniversary: ಡಾ.ರಾಜ್​ಕುಮಾರ್ ಅಪರೂಪದ ಫೋಟೋಗಳು ಹಾಗೂ ಮೇರುನಟನ ಕುರಿತ ವಿಶೇಷ ಸಂಗತಿಗಳು ಇಲ್ಲಿವೆ

Follow us on

Related Stories

Most Read Stories

Click on your DTH Provider to Add TV9 Kannada