ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2593 ಕೊರೊನಾ ಕೇಸ್ಗಳು ದಾಖಲಾಗಿವೆ. ಶನಿವಾರ 2527 ಪ್ರಕರಣಗಳು ದಾಖಲಾಗಿದ್ದವು. ಹೀಗೆ ದಿನದಿಂದ ದಿನಕ್ಕೆ ಕೊವಿಡ್ 19 ಕೇಸ್ಗಳಲ್ಲಿ ಏರಿಕೆಯಾಗುತ್ತಲೇ ಇದೆ. ಹಾಗೇ 24ಗಂಟೆಯಲ್ಲಿ 44 ಮಂದಿ ಮೃತಪಟ್ಟಿದ್ದಾರೆ. 1755 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹಾಗೇ, ದೇಶದಲ್ಲೀಗ ಒಟ್ಟಾರೆ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 15,873 ಮತ್ತು ಕೊರೊನಾದಿಂ ಮೃತಪಟ್ಟವರ ಸಂಖ್ಯೆ 5,22,193ಕ್ಕೆ ತಲುಪಿದೆ. ದೇಶದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.4.8ಕ್ಕೆ ಏರಿದ್ದು, ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಏರಿಕೆ ಪ್ರಮಾಣ ತುಸು ಜಾಸ್ತಿಯೇ ಇದೆ. ಶನಿವಾರ 1094 ಕೇಸ್ಗಳು ದಾಖಲಾಗಿದ್ದವು. ರಾಷ್ಟ್ರರಾಜಧಾನಿಯಲ್ಲಿ ಕೊರೊನಾ ಪಾಸಿಟಿವಿಟಿ ದರ ಕಳೆದ ಮೂರು ದಿನಗಳಿಂದ ಶೇ.4.6-4.8ರಷ್ಟಿದೆ. ಹಾಗೇ, ನಿನ್ನೆ ದೆಹಲಿಯಲ್ಲಿ ಕೊರೊನಾದಿಂದ ಇಬ್ಬರು ಸಾವನ್ನಪ್ಪಿದ್ದಾಗಿ ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ. ಸದ್ಯ ದೆಹಲಿಯಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 18,73,793 ಆಗಿದ್ದು, ಸಾವಿನ ಸಂಖ್ಯೆ 26,166. ಭಾರತದಲ್ಲಿ 18ವರ್ಷ ಮೇಲ್ಪಟ್ಟವರಿಗೆ ಕೊರೊನಾ ಮೂರನೇ ಡೋಸ್ ಲಸಿಕೆ ನೀಡಿಕೆ ಪ್ರಾರಂಭವಾಗಿದ್ದು, ಇನ್ನೊಂದೆಡೆ ಸೋಂಕಿನ ಸಂಖ್ಯೆಯಲ್ಲೂ ಏರುತ್ತಿದೆ. ದೇಶದಲ್ಲಿ ಸದ್ಯ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟು ಯಾವುದೇ ನಿರ್ಬಂಧಗಳು ಇಲ್ಲದೆ ಇರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಭಾರತದಲ್ಲಷ್ಟೇ ಅಲ್ಲ, ಚೀನಾ ಸೇರಿ ಹಲವು ರಾಷ್ಟ್ರಗಳಲ್ಲಿ ಮತ್ತೆ ಕೊರೊನಾ ಆರ್ಭಟ ಹೆಚ್ಚಾಗಿದೆ. ಚೀನಾದ ಮುಖ್ಯ ಭಾಗದಲ್ಲಿ ಶನಿವಾರ 1566 ಕೇಸ್ಗಳು ದಾಖಲಾಗಿವೆ. ಶಾಂಘೈನಲ್ಲಿ 1401 ಹೊಸ ಕೇಸ್ಗಳು ದಾಖಲಾಗಿವೆ. ಚೀನಾದ ವಾಣಿಜ್ಯ ನಗರವೆಂದೇ ಖ್ಯಾತವಾದ ಶಾಂಘೈನಲ್ಲಂತೂ ಕೊರೊನಾ ಮಿತಿಮೀರಿದ್ದು, ಅಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಹೇರಲಾಗಿದೆ. ಜನರು ಅಗತ್ಯವಸ್ತುಗಳಿಗಾಗಿಯೂ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.