ಮ್ಯಾನ್ಮಾರ್: ಮ್ಯಾನ್ಮಾರ್‌ನಲ್ಲಿ ಸತತ 10ನೇ ದಿನವೂ ಸಾರ್ವಜನಿಕ ಸ್ಥಳಗಳಲ್ಲಿ ಅಸಂಖ್ಯ ಪ್ರತಿಭಟನಾಕಾರರು ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದು ಭಾನುವಾರ ತಡರಾತ್ರಿ ಸೇನಾ ವಾಹನಗಳು ಗಸ್ತು ತಿರುಗಿವೆ. ಅಲ್ಲದೇ ಮಧ್ಯರಾತ್ರಿಯಿಂದಲೇ ದೇಶದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದ್ದು ಪ್ರಜಾಪ್ರಭುತ್ವ ಪರ ಹೋರಾಟಗಾರರ ಮೇಲೆ ಸೇನಾ ಪಡೆಗಳು ಅಶ್ರವಾಯು ದಾಳಿಯನ್ನು ಸಹ ನಡೆಸಿವೆ. ಪ್ರತಿಭಟನೆ ಹತ್ತಿಕ್ಕಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.
ಚುನಾವಣೆಯ ಫಲಿತಾಂಶದ ಪ್ರಕಾರ ಸರ್ಕಾರ ರಚನೆಗೊಳ್ಳಲು ಬಿಡದೇ ಅಂಗ್ ಸಾನ್ ಸೂಕಿ ಅವರನ್ನು ಫೆಬ್ರವರಿ 1ರಂದು ಮಿಲಿಟರಿ ಆಡಳಿತ ಬಂಧಿಸಿತ್ತು. ಜತೆಗೆ, ಹೊಸ ಜನ ಪ್ರತಿನಿಧಿಗಳು ಅಧಿಕಾರ ಸ್ವೀಕರಿಸದಂತೆ ತಡೆಗಟ್ಟಿತ್ತು. ಇದರ ವಿರುದ್ಧ ಮಿಲಿಟರಿಯ ಈ ನಡೆಯ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದೆ.
ಅಮೆರಿಕ ಸರ್ಕಾರ ಈಗಾಗಲೇ ಮೈನ್ಮಾರ್ನ ಅಂಗ್ ಸಾನ್ ಸೂಕಿ ಪರ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಲು ಅಗತ್ಯ ಸಹಕಾರ ನೀಡುವುದಾಗಿ ಅಧಿಕೃತ ಹೇಳಿಕೆ ನೀಡಿದೆ. ಮ್ಯಾನ್ಮಾರ್‌ನಲ್ಲಿ ನೆಲೆಸಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಸೇನಾ ಕ್ರಾಂತಿ.. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಬಂಧನ
ಸೇನೆಯ ಕ್ರಮಕ್ಕೆ ವಿಶ್ವಾದ್ಯಂತ ಖಂಡನೆ
ಮ್ಯಾನ್ಮಾರ್ ಸೇನೆಯ ಕ್ರಮವನ್ನು ವಿಶ್ವಸಂಸ್ಥೆ, ಇಂಗ್ಲೆಂಡ್, ಅಮೆರಿಕ, ಯುರೋಪಿಯನ್ ಒಕ್ಕೂಟಗಳು ಖಂಡಿಸಿವೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್, ಬಲವು ಎಂದಿಗೂ ಜನರ ಇಚ್ಛೆಯನ್ನು ಹತ್ತಿಕ್ಕಲು ಬಳಕೆಯಾಗಬಾರದು. ಹಾಗೇ, ವಿಶ್ವಾಸಾರ್ಹವಾಗಿ ನಡೆದ ಚುನಾವಣೆಯ ಫಲಿತಾಂಶವನ್ನು ತೊಡೆದು ಹಾಕಲು ಪ್ರಯೋಗವಾಗಬಾರದು.
ಕಳೆದ ಒಂದು ದಶಕದಲ್ಲಿ ಮ್ಯಾನ್ಮಾರ್ ಪ್ರಜಾಪ್ರಭುತ್ವ ದೇಶವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ನೋಡಿ ಅಮೆರಿಕ ಅದರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿತ್ತು. ಆದರೆ ಇದೀಗ ಮತ್ತೆ ಮ್ಯಾನ್ಮಾರ್ ನ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ಹಾಗಾಗಿ ತೆಗೆದು ಹಾಕಿದ ನಿರ್ಬಂಧಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಗೇ ವಿಶ್ವಸಂಸ್ಥೆಯ ಜನರಲ್ ಆಂಟೋನಿಯೊ ಗುಟೆರೆಸ್ ಕೂಡ ಮ್ಯಾನ್ಮಾರ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವದ ನಿಯಮಗಳಿಗೆ ಬಲವಾದ ಹೊಡೆತ ಬಿದ್ದಿದೆ. ಇನ್ನು 45 ಗಂಟೆಯೊಳಗೆ ಬಂಧಿತರಾದ ಸೂಕಿ ಮತ್ತು ಇತರ ಗಣ್ಯರ ಬಿಡುಗಡೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಸೂಕಿ ಬಂಧನವನ್ನು ಬಲವಾಗಿ ಖಂಡಿಸಿದ್ದಾರೆ.
ಚೀನಾ ಏನಂತು?
ಮ್ಯಾನ್ಮಾರ್‌ನಲ್ಲಿ ನಡೆದ ಬೆಳವಣಿಗೆ ಬಗ್ಗೆ ಚೀನಾ ಅಂಥ ಖಡಕ್ ಹೇಳಿಕೆಯನ್ನೇನೂ ನೀಡಿಲ್ಲ. ಮ್ಯಾನ್ಮಾರ್ ಜತೆಗೆ ನಮಗೆ ಉತ್ತಮ ಸಂಬಂಧವಿದೆ. ಅಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.