ನಾಗಾಲ್ಯಾಂಡ್ನ (Nagaland) ಉನ್ನತ ಶಿಕ್ಷಣ ಸಚಿವ, ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಅವರ ಡ್ಯಾನ್ಸ್ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಾರಗಳ ಹಿಂದೆ ಇಮ್ನಾ ಅವರ ಭಾಷಣದ ತುಣುಕೊಂದು ವೈರಲ್ ಆಗಿತ್ತು. ನಾಗಾಲ್ಯಾಂಡ್ನ ಬಿಜೆಪಿ ಅಧ್ಯಕ್ಷರೂ ಆಗಿರುವ ಇಮ್ನಾ, ಈಶಾನ್ಯ ರಾಜ್ಯದ ಜನರ ಕಣ್ಣುಗಳು ಚಿಕ್ಕದು ಎಂದು ಲೇವಡಿ ಮಾಡುವ ಜನರಿಗೆ ತಮ್ಮ ಭಾಷಣದಲ್ಲಿ ಹಾಸ್ಯದಿಂದಲೇ ಚುರುಕು ಮುಟ್ಟಿಸಿದ್ದರು. ಚಿಕ್ಕ ಕಣ್ಣು ಇರುವ ಕಾರಣ ನನ್ನ ಕಣ್ಣೊಳಗೆ ಕಸ ಹೋಗುವುದು ಸಣ್ಣ ಪ್ರಮಾಣದಲ್ಲೇ. ಸುದೀರ್ಘ ಹೊತ್ತಿನ ಟಿವಿ ಶೋನೋಡುತ್ತಿದ್ದರೆ ಸುಲಭವಾಗಿ ನಿದ್ದೆ ಮಾಡಬಹುದು. ನನ್ನಂತೆಯೇ ನೀವೂ ಸಿಂಗಲ್ ಆಗಿ ಇರಿ, ಸಿಂಗಲ್ಸ್ ಅಭಿಯಾನಕ್ಕೆ ಕೈ ಜೋಡಿಸಿ ಎಂದು ಯುವಕರಿಗೆ ಕರೆ ನೀಡಿದ್ದರು ಇಮ್ನಾ. ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ಜನಸಂಖ್ಯಾ ಏರಿಕೆ ಬಗ್ಗೆ , ಮಗುವನ್ನು ಹೆರುವ ಆಯ್ಕೆ ಬಗ್ಗೆ ನಾವು ಸಂವೇದನಾಶೀಲರಾಗಿರೋಣ. ಅಥವಾ ನನ್ನಂತೆ ಸಿಂಗಲ್ ಆಗಿರಿ. ಈ ಮೂಲಕ ನಾವು ಭವಿಷ್ಯಕ್ಕೆ ಕೊಡುಗೆ ನೀಡೋಣ. ಇಂದೇ ಸಿಂಗಲ್ಸ್ ಅಭಿಯಾನಕ್ಕೆ ಕೈಜೋಡಿಸಿ ಎಂದು ಇಮ್ನಾ ಟ್ವೀಟ್ ಮಾಡಿದ್ದರು.
ಇದೀಗ ತುಸೆಂಗ್ರಮೋಂಗ್ ಹಬ್ಬದಲ್ಲಿ ಸಾಂಪ್ರದಾಯಿಕ ನಾಗಮೀಸ್ ನೃತ್ಯ ಮಾಡುತ್ತಿರುವ ವಿಡಿಯೊವನ್ನು ಇಮ್ನಾ ಪೋಸ್ಟ್ ಮಾಡಿದ್ದಾರೆ.
See, I can dance too! ? #Tsungremong– a festival of the Ao Nagas celebrated for invoking blessing of a bountiful harvest.
A rich heritage enthusiastically preserved and passed on to the younger generations.
Visit Nagaland to explore its culture & dance along with the locals. pic.twitter.com/zPbqBDgZPD
— Temjen Imna Along (@AlongImna) August 1, 2022
ನೋಡಿ, ನಾನು ಡ್ಯಾನ್ಸ್ ಮಾಡಬಲ್ಲೆ. ತುಸೆಂಗ್ರಮೋಂಗ್- ಆವೊ ನಾಗಾಗಳ ಸುಗ್ಗಿಯ ಹಬ್ಬ. ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿ ಅದನ್ನು ಯುವ ಜನಾಂಗಕ್ಕೆ ದಾಟಿಸಲಾಗುತ್ತಿದೆ. ನಾಗಾಲ್ಯಾಂಡ್ ನ ಸಂಸ್ಕೃತಿಯನ್ನು ನೋಡಲು ಇಲ್ಲಿಗೆ ಬನ್ನಿ, ಸ್ಥಳೀಯರೊಂದಿಗೆ ನೃತ್ಯ ಮಾಡಿ ಎಂದು ಇಮ್ನಾ ಬರೆದಿದ್ದಾರೆ.