ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ(BJP) ವಿರುದ್ಧ ಸೆಣಸಲು ವಿರೋಧಪಕ್ಷಗಳು ಅಖಾಡ ತಯಾರು ಮಾಡುತ್ತಿವೆ. 16 ವಿರೋಧಪಕ್ಷಗಳ ನಾಯಕರು ಸೇರಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರದ ವಿರುದ್ಧ ಜೂನ್ 23 ರಂದು ಪಾಟ್ನಾದಲ್ಲಿ ಸಭೆ ನಡೆಸಿದ್ದರು. ನಿತೀಶ್ ಕುಮಾರ್ (Nitish Kumar) ಬಿಹಾರದಲ್ಲಿ ಸಭೆಯ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಎಡಪಕ್ಷದ ನಾಯಕ ಡಿ.ರಾಜಾ ಅವರು ಪ್ರತಿಪಕ್ಷಗಳ ಮೈತ್ರಿಯ ಹೊಸ ಹೆಸರನ್ನು ಸೂಚಿಸಿದ್ದಾರೆ. ವಿರೋಧ ಪಕ್ಷಗಳ ಮಹಾಮೈತ್ರಿಕೂಟಕ್ಕೆ ದೇಶಭಕ್ತ ಪ್ರಜಾಸತ್ತಾತ್ಮಕ ಒಕ್ಕೂಟ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ಇತ್ತೀಚೆಗಷ್ಟೇ ನಡೆದ ವಿರೋಧ ಪಕ್ಷಗಳ ಸಭೆಯ ನಂತರ ಇದೀಗ ವಿಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರು ಸೂಚಿಸಲಾಗಿದೆ. ಈ ಮೈತ್ರಿಕೂಟಕ್ಕೆ ಪೇಟ್ರಿಯಾಟಿಕ್ ಡೆಮಾಕ್ರಟಿಕ್ ಅಲಯನ್ಸ್ ಎಂದು ಡಿ.ರಾಜ ಸೂಚಿಸಿದ್ಧಾರೆ. ಮೂಲಗಳ ಪ್ರಕಾರ, ಈ ಹೆಸರಿನ ಬಗ್ಗೆ ಎಲ್ಲಾ ಪಕ್ಷಗಳಲ್ಲಿ ಒಮ್ಮತ ಮೂಡಿದೆ. ಶಿಮ್ಲಾದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಮುಂದಿನ ಸಭೆಯಲ್ಲಿ ಇದರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಬಿಹಾರದ ಪಾಟ್ನಾದಲ್ಲಿ ನಡೆದ ಸಭೆಯಲ್ಲಿ 16 ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಬಿಜೆಪಿ ವಿರುಧ್ಧ ಲೋಕಸಭಾ ಚುನಾವಣೆಯಲ್ಲಿ ಹೋರಾಟ ನಡೆಸಲು ಸಮರ್ಥ ಒಕ್ಕೂಟ ರಚಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಬಿಜೆಪಿ ವಿರುದ್ಧ ದೇಶದ ಅತಿದೊಡ್ಡ ಮೈತ್ರಿಕೂಟವಾಗಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ಹೆಸರನ್ನು ಘೋಷಿಸಲಿಲ್ಲ, ಆದರೆ ಎಡಪಕ್ಷಗಳ ನಾಯಕ ಡಿ.ರಾಜಾ ಅವರು ಪ್ರತಿಪಕ್ಷಗಳ ಒಗ್ಗಟ್ಟಿನ ಪಕ್ಷಗಳ ಒಕ್ಕೂಟದ ಎಂದು ಹೆಸರು ಸೂಚಿಸಿದ್ದು ಈ ಹೆಸರಿಗೆ ಬಹುತೇಕ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪಾಟ್ನಾದಲ್ಲಿ ವಿಪಕ್ಷಗಳ ಸಭೆ ಅಂತ್ಯ; 2024ರ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದ ನಾಯಕರು
ವಿರೋಧ ಪಕ್ಷಗಳ ಮುಂದಿನ ಸಭೆ ಜುಲೈ ತಿಂಗಳ ಎರಡನೇ ವಾರ ಶಿಮ್ಲಾದಲ್ಲಿ ನಡೆಯಲಿದೆ. ಬಿಜೆಪಿ ವಿರೋಧಿ ಪಕ್ಷಗಳ ಸಭೆಯಲ್ಲಿ ದೇಶಭಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಹೆಸರಿಗೆ ಅಂತಿಮ ಮುದ್ರೆ ಬೀಳಲಿದೆ.
ಮುಂದಿನ ಲೋಕಸಭೆಗೆ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಹೊಸ ಮೈತ್ರಿಕೂಟ ರಚನೆ ಮಾಡಿದ್ದೇ ಆದರೆ ಈಗಿರುವ ಯುಪಿಎ ಕಥೆ ಏನು ಎನ್ನುವ ಪ್ರಶ್ನೆ ಮೂಡಿದೆ. ಯುಪಿಎ ಒಕ್ಕೂಟ ವಿಸರ್ಜನೆ ಮಾಡಿ ಹೊಸ ಮೈತ್ರಿಕೂಟದ ಭಾಗವಾಗಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ. ಸುಮಾರು ಒಂದೂವರೆ ಡಜನ್ ಪಕ್ಷಗಳನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ ಅದನ್ನು ವಿಸರ್ಜಿಸಲು ನಿರ್ಧರಿಸುವುದು ಸುಲಭವಲ್ಲ. ಅದರ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇದಕ್ಕೆ ಕಾರಣ. ಮತ್ತು ಹೊಸ ಹೆಸರಿನೊಂದಿಗೆ ಸಮ್ಮಿಶ್ರ ರಚನೆಯಾದರೆ ಯುಪಿಎ ಪಾತ್ರ ಕೊನೆಗೊಳ್ಳುತ್ತದೆ. ಇದಲ್ಲದೆ ಯುಪಿಎ ಅವಧಿಯಲ್ಲಿ ದೇಶ ಮಟ್ಟದಲ್ಲಿ ಹೊಸ ಒಕ್ಕೂಟವನ್ನು ಹುಟ್ಟುಹಾಕುವುದು ಕಷ್ಟ ಎಂಬುದು ಗಮನಿಸಬೇಕಾದ ಸಂಗತಿ. ಮಹಾಮೈತ್ರಿಕೂಟಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಖ್ಯಸ್ಥರಾಗಲಿದ್ದಾರೆ. ಶಿಮ್ಲಾದಲ್ಲಿ ನಡೆಯಲಿರುವ ಸಭೆ ಮುಖ್ಯವಾಗಲಿದ್ದು ಮಹಾಮೈತ್ರಿಕೂಟದ ಹೆಸರು ಹಾಗೂ ಮೈತ್ರಿ ಸಂಚಾಲಕರ ಬಗ್ಗೆ ತೀರ್ಮಾನವಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ