ಪ್ರವಾಸದಿಂದ ಹಿಂದಿರುಗಿದ ಪ್ರಧಾನಿ ಮೋದಿಗೆ ಮಣಿಪುರ ಪರಿಸ್ಥಿತಿ ಬಗ್ಗೆ ಅಮಿತ್ ಶಾ ವಿವರಣೆ
ಹಿಂಸಾಚಾರ ಪೀಡಿತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಮೊದಲ ದಿನದಿಂದ ಪ್ರಧಾನಿಯವರು ಗಮನಿಸುತ್ತಿದ್ದು, ಪೂರ್ಣ ಸೂಕ್ಷ್ಮತೆಯಿಂದ ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಗೃಹ ಸಚಿವರು ಸರ್ವಪಕ್ಷಗಳ ಸಭೆಯಲ್ಲಿ ಹೇಳಿದ್ದರು.
ದೆಹಲಿ: ಬಿಕ್ಕಟ್ಟು ಪೀಡಿತ ರಾಜ್ಯದಲ್ಲಿ ಸಹಜ ಸ್ಥಿತಿಗೆ ಮರಳಲು ಮಣಿಪುರ (Manipur) ಸರ್ಕಾರ ಮತ್ತು ಕೇಂದ್ರವು ಕೈಗೊಂಡ ಕ್ರಮಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ವಿವರಿಸಿದ್ದಾರೆ. ಅಮೆರಿಕ ಮತ್ತು ಈಜಿಪ್ಟ್‌ಗೆ ಐದು ದಿನಗಳ ಭೇಟಿಯನ್ನು ಮುಗಿಸಿದ ಪ್ರಧಾನಿ ಮೋದಿ ಇಂದು ಬೆಳಗ್ಗೆ ಭಾರತಕ್ಕೆ ಮರಳಿದರು. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ತಮ್ಮ ದೆಹಲಿಯ ಮನೆಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಣಿಪುರದಲ್ಲಿನ ಪ್ರಸ್ತುತ ಪರಿಸ್ಥಿತಿ ವರದಿಯನ್ನು ಸಲ್ಲಿಸಿದ ಒಂದು ದಿನದ ನಂತರ ಶಾ ವಿವರಣೆ ನೀಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂಸಾಚಾರವನ್ನು ಬಹುತೇಕ ನಿಯಂತ್ರಿಸಲು ಸಮರ್ಥವಾಗಿವೆ ಎಂದು ಶಾ ಹೇಳಿದ್ದು, ಎಲ್ಲ ರೀತಿಯ ನೆರವು ನೀಡುವುದಾಗಿ ಮಣಿಪುರ ಸಿಎಂಗೆ ಭರವಸೆ ನೀಡಿದ್ದಾರೆ.
ಎಲ್ಲಾ ಪಾಲುದಾರರು, ನಾಗರಿಕ ಸಂಸ್ಥೆಗಳು, ಶಾಸಕರು ಮತ್ತು ರಾಜಕೀಯ ಮುಖಂಡರು ಒಟ್ಟಿಗೆ ಕುಳಿತು ಎಲ್ಲರೂ ಕೆಲಸ ಮಾಡಬೇಕಾದ ಕ್ಷೇತ್ರಗಳನ್ನು ಗುರುತಿಸುವ ಸಮಯ ಇದು ಎಂದು ಸಿಂಗ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಶನಿವಾರ 18 ರಾಜಕೀಯ ಪಕ್ಷಗಳು ಭಾಗವಹಿಸಿದ್ದ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ‘ಕಾಲಮಿತಿ ಕ್ರಿಯಾ ಯೋಜನೆ’ಯನ್ನು ಜಾರಿಗೆ ತರಬೇಕು ಎಂದು ಸಭೆಯಲ್ಲಿ ಪಕ್ಷದ ಪ್ರತಿನಿಧಿಗಳು ಒತ್ತಾಯಿಸಿದರು. ಹಿಂಸಾಚಾರ ಪೀಡಿತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಮೊದಲ ದಿನದಿಂದ ಪ್ರಧಾನಿಯವರು ಗಮನಿಸುತ್ತಿದ್ದು, ಪೂರ್ಣ ಸೂಕ್ಷ್ಮತೆಯಿಂದ ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದರು.
ಮೇ 3 ರಂದು ರಾಜ್ಯದಲ್ಲಿ ನಡೆದ ಮೊದಲ ಹಿಂಸಾಚಾರದ ನಂತರ ರಾಜ್ಯದಲ್ಲಿ ಸುಮಾರು 36,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಮಾಡಿದ ಪ್ರಯತ್ನಗಳ ವಿವರವಾದ ಚಿತ್ರವನ್ನು ಅಧಿಕಾರಿಗಳು ಪಕ್ಷದ ಪ್ರತಿನಿಧಿಗಳಿಗೆ ನೀಡಿದ್ದಾರೆ.
ಇದನ್ನೂ ಓದಿ: ಕನಿಮೊಳಿಗೆ ಟಿಕೆಟ್ ವಿವಾದ; ಕೆಲಸ ಕಳೆದುಕೊಂಡ ತಮಿಳುನಾಡಿನ ಬಸ್ ಚಾಲಕಿಗೆ ಹೊಸ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್
ಮಣಿಪುರದಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಭದ್ರತಾ ಪಡೆಗಳು ಮಾನವೀಯ ಕಾರ್ಯಾಚರಣೆಗಳ ಮೇಲೆ ಹೆಚ್ಚು ಗಮನಹರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ