ವಿವಿಧ ಪಕ್ಷಗಳ ಸಲಹೆಗಳನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಪರಿಗಣಿಸುತ್ತದೆ: ಮಣಿಪುರದ ಸರ್ವಪಕ್ಷ ಸಭೆಯ ನಂತರ ಅಮಿತ್ ಶಾ
ಎಲ್ಲರನ್ನೂ ಒಗ್ಗೂಡಿಸಿ ಮಣಿಪುರ ಸಮಸ್ಯೆಯನ್ನು ಪರಿಹರಿಸಲು ಮೋದಿ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಹಿಂಸಾಚಾರದಿಂದ ಇನ್ನು ಮುಂದೆ ಯಾವುದೇ ಜೀವಗಳು ಬಲಿಯಾಗಬಾರದು ಎಂಬುದು ಮೋದಿ ಸರ್ಕಾರದ ಆದ್ಯತೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ದೆಹಲಿ: ಮಣಿಪುರದಲ್ಲಿ (Manipur) ನಡೆಯುತ್ತಿರುವ ಪರಿಸ್ಥಿತಿಯ ಕುರಿತು ಸರ್ವಪಕ್ಷಗಳ ಸಭೆಯ ನಂತರ ಮಾತನಾಡಿದ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಲಹೆಗಳನ್ನು ನೀಡಿವೆ. ಕೇಂದ್ರ ಸರ್ಕಾರವು ಅವುಗಳನ್ನು ಮುಕ್ತ ಮನಸ್ಸಿನಿಂದ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ. ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಸೂಕ್ಷ್ಮವಾಗಿ ಮತ್ತು ರಾಜಕೀಯವನ್ನು ಬದಿಗಿಟ್ಟು ತಮ್ಮ ಸಲಹೆಗಳನ್ನು ನೀಡಿವೆ. ಭಾರತ ಸರ್ಕಾರ ಈ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಪರಿಗಣಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲ ದಿನದಿಂದ ಮಣಿಪುರದ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲರನ್ನೂ ಒಗ್ಗೂಡಿಸಿ ಮಣಿಪುರ ಸಮಸ್ಯೆಯನ್ನು ಪರಿಹರಿಸಲು ಮೋದಿ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಹಿಂಸಾಚಾರದಿಂದ ಇನ್ನು ಮುಂದೆ ಯಾವುದೇ ಜೀವಗಳು ಬಲಿಯಾಗಬಾರದು ಎಂಬುದು ಮೋದಿ ಸರ್ಕಾರದ ಆದ್ಯತೆಯಾಗಿದೆ.
ಮಣಿಪುರದಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಜೂನ್ 13 ರ ತಡರಾತ್ರಿಯಿಂದ ರಾಜ್ಯದಲ್ಲಿ ಹಿಂಸಾಚಾರದಲ್ಲಿ ಒಬ್ಬರೂ ಸಾವನ್ನಪ್ಪಿಲ್ಲ. ರಾಜ್ಯದಲ್ಲಿ 36,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, 40 ಐಪಿಎಸ್ ಅಧಿಕಾರಿಗಳನ್ನು ಮಣಿಪುರಕ್ಕೆ ಕಳುಹಿಸಲಾಗಿದೆ, 20 ವೈದ್ಯಕೀಯ ತಂಡಗಳನ್ನು ಕಳುಹಿಸಲಾಗಿದ. ಔಷಧಿಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ಖಾತ್ರಿಪಡಿಸಲಾಗುತ್ತಿದೆ ಎಂದು ಶಾ ಹೇಳಿದ್ದಾರೆ.
ಇದನ್ನೂ ಓದಿ: ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಗೆ ಗೈರು; ಅಮಿತ್ ಶಾ ಕರೆದ ಸಭೆಯಲ್ಲಿ ಭಾಗಿ; ಬಿಜೆಪಿಗೆ ನಿಕಟವಾಗುತ್ತಿದೆಯೇ ಬಿಆರ್‌ಎಸ್?
ಮೇ ತಿಂಗಳ ಆರಂಭದಲ್ಲಿ ಹಿಂಸಾಚಾರ ಪೀಡಿತ ರಾಜ್ಯಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ ಅಮಿತ್ ಶಾ ಅವರು ಶಾಂತಿಗಾಗಿ ಮನವಿ ಮಾಡಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 pm, Sat, 24 June 23