ಡಿಜಿಟಲ್ ಅರೆಸ್ಟ್ ಅನ್ನೋ ಕಾನೂನೇ ಇಲ್ಲ, ಹುಷಾರಾಗಿರಿ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರ ಸಂದೇಶ

|

Updated on: Oct 27, 2024 | 12:28 PM

Narendra Modi 115th Mann Ki Baat: ಪ್ರಧಾನಿ ನರೇಂದ್ರ ಮೋದಿ ತಮ್ಮ 115ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಡಿಜಿಟಲ್ ಅರೆಸ್ಟ್, ಅನಿಮೇಶನ್ ಸ್ವಾವಲಂಬನೆ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದರು. ಫಿಟ್ನೆಸ್ ಮಹತ್ವ ಹಾಗೂ ಶಾಲೆಗಳಲ್ಲಿ ಫಿಟ್ನೆಸ್​ಗೆ ಕೊಡುತ್ತಿರುವ ಗಮನವನ್ನು ಎತ್ತಿ ತೋರಿಸಿದರು. ವಂಚಕರ ಬಗ್ಗೆ ಹೇಗೆ ಹುಷಾರಾಗಿರುವುದು ಎಂಬ ಟಿಪ್ಸ್ ನೀಡಿದರು.

ಡಿಜಿಟಲ್ ಅರೆಸ್ಟ್ ಅನ್ನೋ ಕಾನೂನೇ ಇಲ್ಲ, ಹುಷಾರಾಗಿರಿ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರ ಸಂದೇಶ
ನರೇಂದ್ರ ಮೋದಿ
Follow us on

ನವದೆಹಲಿ, ಅಕ್ಟೋಬರ್ 27: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 115ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಡಿಜಿಟಲ್ ದಾಳಿ, ಅನಿಮೇಶನ್, ಮಹಾನ್ ವ್ಯಕ್ತಿಗಳ ಜಯಂತಿ, ಸ್ವಾವಲಂಬನೆ, ಕಲೆ, ಸಂಸ್ಕೃತಿಗಳ ಬಗ್ಗೆ ಮಾತನಾಡಿದರು. ಜಮ್ಮು ಕಾಶ್ಮೀರದಿಂದ ಹಿಡಿದು ತೆಲಂಗಾಣದವರೆಗೆ ವಿವಿಧ ಕಲಾವಿದರನ್ನು ಉಲ್ಲೇಖಿಸಿ ಪ್ರಶಂಸೆ ಮಾಡಿದರು. ಆನ್​ಲೈನ್​ನಲ್ಲಿ ನಡೆಯುತ್ತಿರುವ ವಂಚನೆ ಹಾಗೂ ವಂಚಕರ ವಂಚನೆ ವಿಧಾನಗಳ ಬಗ್ಗೆ ಪ್ರಧಾನಿಗಳು ಸಾಕಷ್ಟು ಮಾಹಿತಿ ನೀಡಿ, ಹುಷಾರಾಗಿರುವಂತೆ ಜನತೆಗೆ ಕರೆ ನೀಡಿದರು.

ಡಿಜಿಟಲ್ ಅರೆಸ್ಟ್ ಅನ್ನೋ ಕಾನೂನು ಯಾವುದೂ ಇಲ್ಲ

‘ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಅನ್ನೋ ವ್ಯವಸ್ಥೆಯೇ ಇಲ್ಲ. ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎನ್ನುವುದು ಬರೀ ಸುಳ್ಳು. ಕ್ರಿಮಿನಲ್ ಗ್ಯಾಂಗ್​ಗಳು, ವಂಚಕರು ಮಾಡುವ ಕೆಲಸವದು’ ಎಂದು ನರೇಂದ್ರ ಮೋದಿ ಹೇಳಿದರು.

ಆನ್ಲೈನ್ ಫ್ರಾಡ್ ಹೇಗಿರುತ್ತದೆ ಎನ್ನುವ ನಿದರ್ಶನಗಳನ್ನೂ ಅವರು ನೀಡಿದರು. ಪೊಲೀಸ್, ಸಿಬಿಐ, ನಾರ್ಕೋಟಿಕ್ಸ್, ಆರ್​ಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಫೋನ್ ಮಾಡಬಹುದು. ನಿಮ್ಮ ಮಗಳು ದಿಲ್ಲಿಯಲ್ಲಿ ಓದುತ್ತಿದ್ದಾರೆ ಅಲ್ವಾ? ಇತ್ಯಾದಿ ನಿಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನು ಅವರು ಪತ್ತೆ ಮಾಡುತ್ತಾರೆ. ನಿಮ್ಮ ಮೇಲೆ ಕೇಸ್ ದಾಖಲಿಸಲಾಗುತ್ತಿದೆ ಇತ್ಯಾದಿ ಬೆದರಿಕೆ ಹಾಕಬಹುದು ಎಂದು ಅವರು ಉದಾಹರಣೆ ನೀಡಿದರು.

ಇದನ್ನೂ ಓದಿ: ಮುಂಬೈನ ರೈಲ್ವೆ ನಿಲ್ದಾಣದಲ್ಲಿ ನೂಕುನುಗ್ಗಲು, ಕಾಲ್ತುಳಿತ; 9 ಮಂದಿಗೆ ಗಾಯ

ಮೂರು ಅಂಶಗಳ ಸೂತ್ರ

ಯಾವ ಏಜೆನ್ಸಿಯೂ ಫೋನ್​ನಲ್ಲಿ ವಿಡಿಯೋ ಕಾಲ್ ಇತ್ಯಾದಿ ಕರೆ ಮಾಡುವುದಿಲ್ಲ. ಕರೆ ಮಾಡಿದವರು ಯಾವುದಾದರೂ ಹಣಕಾಸು ಮತ್ತು ವೈಯಕ್ತಿಕ ಮಾಹಿತಿ ಕೇಳಿದರೆ ಹುಷಾರಾಗಿರಿ. ಮಾಹಿತಿ ನೀಡಬೇಡಿ. ನೀವು ಯಾವುದಕ್ಕೂ ಕರೆ ರೆಕಾರ್ಡ್ ಮಾಡಿಕೊಂಡಿರಿ. ವಂಚಕ ಕರೆ ಎನಿಸಿದಾಗ ಮೂರು ಅಂಶಗಳನ್ನು ಗಮನದಲ್ಲಿಡಿ. ಮೊದಲೆಯದು, ಕಾಯುವುದು. ಎರಡನೆಯದು, ಯೋಚಿಸುವುದು. ಮೂರನೆಯದು ಆ್ಯಕ್ಷನ್ ಎಂದು ಪ್ರಧಾನಿಗಳು ಮಾಹಿತಿ ನೀಡಿದರು.

ಸೈಬರ್ ಕ್ರೈಮ್ ಹೆಲ್ಪ್​ಲೈನ್ ನಂಬರ್ 1930 ಮತ್ತು cybercrime.gov.in ವೆಬ್​ಸೈಟ್​ನಲ್ಲಿ ದೂರು ಕೊಡಿ. #SaveDigitalIndia ಅನ್ನೋ ಹ್ಯಾಷ್​ಟ್ಯಾಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜಾಗ್ರತೆ ಮೂಡಿಸಿ ಎಂದು ನರೇಂದ್ರ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ತಿಳಿಸಿದರು.

ಅನಿಮೇಶನ್​​ನಲ್ಲಿ ಭಾರತ ಜಾಗತಿಕ ಕೇಂದ್ರವಾಗುತ್ತಿದೆ: ಮೋದಿ

ಭಾರತದ ಕಾರ್ಟೂನುಗಳು ಈಗ ಜಾಗತಿಕವಾಗಿ ಜನಪ್ರಿಯವಾಗಿವೆ. ಗೇಮಿಂಗ್ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ. ಭಾರತೀಯ ಗೇಮರ್​ಗಳನ್ನು ಭೇಟಿ ಮಾಡಿದೆ. ಅನಿಮೇಶನ್ ಕ್ಷೇತ್ರದಲ್ಲಿ ಭಾರತೀಯರು ಸಾಧನೆ ಮಾಡುತ್ತಿದ್ದಾರೆ. ಸ್ಪೈಡರ್​ಮ್ಯಾನ್, ಟ್ರಾನ್ಸ್​ಫಾರ್ಮರ್ಸ್​ನ ಅನಿಮೇಶನ್​ಗಳಲ್ಲಿ ಭಾರತದ ಹರಿನಾರಾಯಣ್ ರಾಜೀವ್ ಅವರ ಪಾತ್ರ ದೊಡ್ಡದು. ಅನಿಮೇಶನ್ ಕ್ಷೇತ್ರ ಇತರ ಕ್ಷೇತ್ರಗಳಿಗೆ ಪೂರಕವಾಗಿ ಬೆಳೆಯುತ್ತಿದೆ. ವರ್ಚುವಲ್ ರಿಯಾಲಿಟಿ ಜನಪ್ರಿಯವಾಗುತ್ತಿದೆ. ವರ್ಚುವಲ್ ಟೂರ್​ಗಳು ಚಾಲನೆಯಲ್ಲಿವೆ. ವಿಆರ್ ಡೆವಲಪರ್ಸ್, ಗೇಮ್ ಡೆವಲಪರ್ಸ್ ಇತ್ಯಾದಿ ಉದ್ಯೋಗಗಳು ಸೃಷ್ಟಿಯಾಗಿವೆ. ಅಕ್ಟೋಬರ್ 28, ವರ್ಲ್ಡ್ ಅನಿಮೇಶನ್ ಡೇ ಆಚರಿಸಲಾಗುತ್ತದೆ. ಭಾರತವನ್ನು ಜಾಗತಿಕ ಅನಿಮೇಶನ್ ಪವರ್ ಆಗಿ ಮಾಡಬೇಕು ಎಂದು ಮೋದಿ ಕರೆ ನೀಡಿದರು.

ಇದನ್ನೂ ಓದಿ: ಹಗೆತನದಿಂದ ಉಪಯೋಗವಿಲ್ಲ, ಸಂಯಮವಿರಲಿ; ಇರಾನ್ ಮೇಲೆ ಇಸ್ರೇಲ್ ದಾಳಿಗೆ ಭಾರತ ಕಳವಳ

ಇನ್ನೋವೇಶನ್​ನಲ್ಲಿ ಭಾರತ ಬಲಿಷ್ಠ

ಭಾರತದಲ್ಲಿ ಸಂಕೀರ್ಣ ತಂತ್ರಜ್ಞಾನ ಬೆಳೆಸುವ ಮಾತು ಬಂದರೆ ಅಪಹಾಸ್ಯ ಮಾಡುತ್ತಿದ್ದ ಕಾಲ ಇತ್ತು. ಇವತ್ತು ತಂತ್ರಜ್ಞಾನ ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ. ಎಲ್ಲಾ ರೀತಿಯ ತಂತ್ರಜ್ಞಾನಗಳು ಭಾರತದಲ್ಲಿ ಸಿದ್ಧವಾಗುತ್ತಿವೆ. ಮೊಬೈಲ್ ಫೋನ್ ತಯಾರಿಕೆ ಆಗುತ್ತಿದೆ. ಮಿಲಿಟರಿ ಶಸ್ತ್ರಾಸ್ತ್ರಗಳು ಭಾರತದಲ್ಲಿ ತಯಾರಾಗುತ್ತಿವೆ. ಸ್ಪೇಸ್ ಟೆಕ್ನಾಲಜಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಈಗ ಆತ್ಮನಿರ್ಬರ್ ಭಾರತ್ ಎಂಬುದು ಸರ್ಕಾರಿ ಯೋಜನೆಯಾಗಿ ಉಳಿದಿಲ್ಲ ಎಂದರು ಮೋದಿ ತಿಳಿಸಿದರು.

ಪ್ರತಿಯೊಬ್ಬ ಭಾರತೀಯನೂ ಇನ್ನೋವೇಟರ್ ಆಗಬೇಕು. ಭಾರತವು ಇನ್ನೋವೇಶನ್​ನಲ್ಲಿ ಜಾಗತಿಕ ಪವರ್ ಆಗಬೇಕು. ನಿಮಗೆ ಸ್ಥಳೀಯವಾಗಿ ಯಾವ ಸ್ಟಾರ್ಟಪ್ ಇಷ್ಟವಾಯಿತು ಎಂಬುದನ್ನು ಈ ‘#AtmanirbharInnovation’ ಹ್ಯಾಷ್​ಟ್ಯಾಗ್ ಮೂಲಕ ತಿಳಿಸಿ ಎಂದರು.

ಪ್ರಧಾನಿಗಳು ಈ ಬಾನುಲಿ ಕಾರ್ಯಕ್ರಮದಲ್ಲಿ ಜಾರ್ಖಂಡ್​ನ ಬುಡಕಟ್ಟು ಸಮುದಾಯದ ಮಹಾನ್ ನಾಯಕರೆನಿಸಿದ್ದ ಬಿರಸಾ ಮುಂಡಾ ಅವರನ್ನು ಸ್ಮರಿಸಿದರು. ಬಿರಸಾ ಮುಂಡಾ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜಯಂತ್ಯುತ್ಸವವನ್ನು ಆಚರಿಸಲು ಸರ್ಕಾರ ನಿರ್ಧರಿಸಿರುವುದನ್ನು ಅವರು ತಿಳಿಸಿದರು.

ಭಾರತದ ಸ್ಥಳೀಯ ಕಲಾಪ್ರಕಾರಗಳಾದ ಕ್ಯಾಲಿಗ್ರಫಿ, ಸಾರಂಗಿವಾದನ, ಚೆರಿಯಾಲ್ ಪೇಂಟಿಂಗ್ ಮೊದಲಾದವುಗಳನ್ನು ಉಳಿಸಿ, ಖ್ಯಾತಗೊಳಿಸುತ್ತಿರುವ ವಿವಿಧ ಪ್ರತಿಭೆಗಳನ್ನು ಮೋದಿ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಇದನ್ನೂ ಓದಿ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ 10 ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ

ವಿದೇಶಗಳಲ್ಲಿ ಭಾರತೀಯ ಕಲೆಗಳು ಅರಳುತ್ತಿರುವುದನ್ನು ಹಲವು ಉದಾಹರಣೆಗಳ ಮೂಲಕ ತಿಳಿಸಿದರು. ರಷ್ಯಾದ ಯಾಕುಟ್ಸಕ್​ನಲ್ಲಿ ಸ್ಥಳೀಯ ಕಲಾವಿದರಿಂದ ಕಾಳಿದಾಸರ ಅಭಿಜ್ಞಾನ ಶಾಕುಂತಲ ನಾಟಕ ಪ್ರದರ್ಶನ, ಲಾವೋಸ್​ನಲ್ಲಿ ರಾಮಾಯಣ ಪ್ರದರ್ಶನ, ಕುವೇತ್​ನಲ್ಲಿ ರಾಮಾಯಣ ಮಹಾಭಾರತವನ್ನು ಭಾಷಾಂತರಿಸಿರಿವುದು, ದಕ್ಷಿಣ ಅಮೆರಿಕದ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರದರ್ಶನಗಳು ನಡೆಯುತ್ತಿರುವುದನ್ನು ಅವರು ತಿಳಿಸಿದರು.

ಶಾಲೆಗಳಲ್ಲಿ ಸಕಾರಾತ್ಮಕ ಅಂಶಗಳು…

ಶಾಲೆಗಳಲ್ಲಿ ಫಿಟ್ನೆಸ್​ಗೆ ಒತ್ತು ನೀಡಲಾಗುತ್ತಿದೆ. ಏರೋಬಿಕ್ ಸೆಷನ್, ಖೋಖೋ, ಕಬಡ್ಡಿ ಇತ್ಯಾದಿ ಸ್ಥಳೀಯ ಕ್ರೀಡಗಳನ್ನು ಆಡಿಸಲಾಗುತ್ತಿದೆ. ಇದರಿಂದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Sun, 27 October 24