Lata Mangeshkar Chauraha ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್ ವೃತ್ತ ಉದ್ಘಾಟಿಸಿದ ಪ್ರಧಾನಿ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 28, 2022 | 2:44 PM

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ 93ನೇ ಜನ್ಮದಿನದಂದು ಅವರಿಗೆ ಶೇಷ ಗೌರವವಾಗಿ ಲತಾ ಮಂಗೇಶ್ಕರ್ ಹೆಸರಲ್ಲಿ ವೃತ್ತ ಉದ್ಘಾಟನೆ ಮಾಡಿದ ಮೋದಿ,  ಲತಾ ಮಂಗೇಶ್ಕರ್ ತಮ್ಮ ಕಂಠದಿಂದ ಮಂತ್ರಮುಗ್ಧಗೊಳಿಸುತ್ತಿದ್ದರು..

Lata Mangeshkar Chauraha ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್ ವೃತ್ತ ಉದ್ಘಾಟಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಲತಾ ಮಂಗೇಶ್ಕರ್ (Lata Mangeshkar) ಅವರ 93 ನೇ ಜನ್ಮ ವಾರ್ಷಿಕೋತ್ಸವದಂದು ಅಯೋಧ್ಯೆಯಲ್ಲಿ ಚೌಕ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ  ಮೋದಿ (Narendra  Modi), 40 ಅಡಿ ಉದ್ದದ ವೀಣಾ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ 93ನೇ ಜನ್ಮದಿನದಂದು ಅವರಿಗೆ ಶೇಷ ಗೌರವವಾಗಿ ಅವರ ಹೆಸರಲ್ಲಿ ವೃತ್ತ ಉದ್ಘಾಟನೆ ಮಾಡಿದ ಮೋದಿ,  ಲತಾ ಮಂಗೇಶ್ಕರ್ ತಮ್ಮ ಕಂಠದಿಂದ ಮಂತ್ರಮುಗ್ಧಗೊಳಿಸುತ್ತಿದ್ದರು. ಸಹೋದರಿ ಲತಾ ತಮ್ಮ ಸ್ವರದಿಂದ ವಿಶ್ವದಲ್ಲಿ ಹೆಸರುವಾಸಿಯಾಗಿದ್ದರು. ಅವರ ಜೊತೆ ಕಳೆದ ಸಮಯ ನನಗೆ ಮತ್ತಷ್ಟು ಸ್ಫೂರ್ತಿ ನೀಡಿದೆ. ದೇಶಕ್ಕಾಗಿ ಕೆಲಸ ಮಾಡಲು ನನಗೆ ಸ್ಫೂರ್ತಿ ನೀಡಿದೆ ಎಂದಿದ್ದಾರೆ ಸರಯೂ ನದಿಯ ದಡದಲ್ಲಿರುವ ಹೊಸ ಘಾಟ್ ಪ್ರದೇಶವನ್ನು ಲತಾ ಮಂಗೇಶ್ಕರ್ ಚೌರಾಹಾ ಎಂದು ಕರೆಯಲಾಗಿದ್ದು, ಇದನ್ನು 7.9 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವೃತ್ತದ ಮಧ್ಯೆ 14 ಟನ್ ತೂಕ, 40 ಅಡಿ ಉದ್ದ ಮತ್ತು 12 ಮೀಟರ್ ಎತ್ತರವಿರುವ ಭಾರತೀಯ ಸಂಗೀತ ವಾದ್ಯವಾದ ವೀಣೆಯನ್ನು ಸ್ಥಾಪಿಸಿರುವುದು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ.

ಲತಾ ದೀದಿ ಅವರ ಹೆಸರಿನ ಈ ಚೌಕ್ ನಮ್ಮ ದೇಶದ ಕಲಾ ಪ್ರಪಂಚದೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಸ್ಫೂರ್ತಿಯ ಸ್ಥಳವಾಗಿಯೂ ಕಾರ್ಯನಿರ್ವಹಿಸುತ್ತದೆ. ಭಾರತದ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು, ಆಧುನಿಕತೆಯತ್ತ ಸಾಗುವುದು, ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ಯುವುದು ನಮ್ಮ ಕರ್ತವ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದ ಸಾವಿರಾರು ವರ್ಷಗಳ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ, ಭಾರತದ ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದಿದ್ದಾರೆ ಮೋದಿ.

ಲತಾ ಮಂಗೇಶ್ಕರ್ ಅವರ ಅಚ್ಚುಮೆಚ್ಚಿನ ನೆನಪುಗಳನ್ನು ಸ್ಮರಿಸಿಕೊಂಡ ಪ್ರಧಾನಿ, ಅವರು ಅವರೊಂದಿಗೆ ಮಾತನಾಡುವಾಗಲೆಲ್ಲಾ ಅವರ ಧ್ವನಿಯ ಪರಿಚಿತ ಮಾಧುರ್ಯವು ನನ್ನನ್ನು ಪ್ರತಿ ಬಾರಿಯೂ ಮಂತ್ರಮುಗ್ಧಗೊಳಿಸಿತು ಎಂದು ಹೇಳಿದರು.  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಪೂರ್ಣಗೊಂಡಾಗ, ನನಗೆ ಲತಾ ದೀದಿಯಿಂದ ಕರೆ ಬಂದಿತು. ಅವರು ತುಂಬಾ ಸಂತೋಷವಾಗಿದ್ದರು, ಉತ್ಸುಕರಾಗಿದ್ದರು. ರಾಮ ಮಂದಿರದ ನಿರ್ಮಾಣವು ಪ್ರಾರಂಭವಾಗುತ್ತದೆ ಎಂಬುದನ್ನು ನನಗೆ ನಂಬಲು ಆಗುತ್ತಿಲ್ಲ ಎಂದು ಅವರು ಹೇಳಿದ್ದು ನನಗೆ ನೆನಪಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಸರಸ್ವತಿಯನ್ನು ಸಂಕೇತಿಸುವ ಭಾರತೀಯ ಶಾಸ್ತ್ರೀಯ ಸಂಗೀತ ವಾದ್ಯವಾದ ವೀಣೆ ಕಲಾಕೃತಿಯನ್ನು ಲತಾ ಮಂಗೇಶ್ಕರ್ ಚೌಕ್‌ನಲ್ಲಿ ಸ್ಥಾಪಿಸಲಾಗಿದೆ, ಇದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉದ್ಘಾಟಿಸಿದರು. ಗುಜರಾತ್‌ನಲ್ಲಿ ಸ್ಟ್ಯಾಚ್ಯೂ ಆಫ್ ಯೂನಿಟಿ (ವಿಶ್ವದ ಅತಿ ಎತ್ತರದ ಪ್ರತಿಮೆ) ವಿನ್ಯಾಸಗೊಳಿಸಿದ ಮಾಸ್ಟರ್ ಶಿಲ್ಪಿ ರಾಮ್ ವಾಂಜಿ ಸುತಾರ್ ಅವರು ವೀಣೆಯನ್ನು ವಿನ್ಯಾಸಗೊಳಿಸಿದ್ದಾರೆ.

ಈ ವರ್ಷದ ಫೆಬ್ರವರಿ 6 ರಂದು ಲತಾ ಮಂಗೇಶ್ಕರ್ ಅವರು ನಿಧನರಾದಾಗ ಅವರ ನೆನಪಿಗಾಗಿ ಪ್ರಮುಖ ಅಯೋಧ್ಯೆ ಕ್ರಾಸಿಂಗ್​​ನ್ನು ಮರುನಾಮಕರಣ ಮಾಡುವುದಾಗಿ ಸಿಎಂ ಯೋಗಿ ಆದಿತ್ಯನಾಥ ಘೋಷಿಸಿದ್ದರು.
ಸೆಪ್ಟೆಂಬರ್ 28, 1929 ರಂದು ಜನಿಸಿದ ಲತಾ ಮಂಗೇಶ್ಕರ್ ಅವರು 1942 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಏಳು ದಶಕಗಳ ವೃತ್ತಿಜೀವನದಲ್ಲಿ ಲತಾ ದೀದಿ ಸಾವಿರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಅವರು 36 ಪ್ರಾದೇಶಿಕ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ತಮ್ಮ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಆಕೆಯನ್ನು ‘ಮೆಲೋಡಿ ರಾಣಿ’ ಮತ್ತು ‘ಭಾರತದ ನೈಟಿಂಗೇಲ್’ ಎಂದು ಕರೆಯಲಾಗುತ್ತದೆ.

Published On - 2:19 pm, Wed, 28 September 22